ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗೆ ಹೈಕೋರ್ಟ್ನಲ್ಲಿ ತಾಂತ್ರಿಕ ಕಾರಣದಿಂದ ರಿಲೀಫ್ ಸಿಕ್ಕಿದೆ. ಸಿಐಡಿಯನ್ನು ಪೊಲೀಸ್ ಠಾಣೆ ಎಂದು ಘೋಷಿಸಿಲ್ಲ, ಸರ್ಕಾರ ಈ ಬಗ್ಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಸಿಐಡಿ ಪೊಲೀಸರಿಗೆ ಠಾಣೆಯ ಅಧಿಕಾರವಿಲ್ಲ. ಹೀಗಾಗಿ ಸಿಐಡಿ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸಲು ಅವಕಾಶವಿಲ್ಲ ಎಂಬ ಕಾರಣಕ್ಕೆ ರಾಘವೇಶ್ವರ ಶ್ರೀಗಳ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ಪ್ರಕರಣ ಕೈಬಿಟ್ಟಿದ್ದ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಗಾಯಕಿ ಪ್ರೇಮಲತಾ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ವಜಾ ಮಾಡಿದೆ. ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸರ್ಕಾರ ಮತ್ತು ಪ್ರೇಮಲತಾ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ರಾಘವೇಶ್ವರ ಭಾರತಿ ಸ್ವಾಮೀಜಿ 2011ರಿಂದ 2014ರ ನಡುವೆ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ರಾಮಚಂದ್ರಾಪುರ ಮಠದಲ್ಲಿ ರಾಮಕಥಾ ಗಾಯಕಿಯಾಗಿದ್ದ ಪ್ರೇಮಲತಾ ಗಿರಿನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ನಗರದ ನ್ಯಾಯಾಲಯಕ್ಕೆ ರಾಘವೇಶ್ವರ ಭಾರತಿ ಮತ್ತು ಇತರ 7 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. 1340 ಪುಟಗಳ ಚಾರ್ಜ್ಶೀಟ್ನಲ್ಲಿ 151 ಸಾಕ್ಷಿಗಳನ್ನು ಉಲ್ಲೇಖಿಸಲಾಗಿತ್ತು. ಆದರೆ ಅಧೀನ ವಿಚಾರಣಾ ನ್ಯಾಯಾಲಯವು ಸ್ವಾಮೀಜಿಯನ್ನು ಆರೋಪಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಐಡಿ ಮತ್ತು ದೂರುದಾರರು ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್ಗೆ ಸಲ್ಲಿಸಿದ್ದರು.
ಇದೀಗ ಹೈಕೋರ್ಟ್ ಸಹ ಈ ಪ್ರಕರಣದಲ್ಲಿ ಸ್ವಾಮೀಜಿಗೆ ರಿಲೀಫ್ ನೀಡಿದೆ. ತಮ್ಮ ವಿರುದ್ಧ ಆರೋಪ ಮಾಡಿದ್ದ ಗಾಯಕಿ ಪ್ರೇಮಲತಾ ಹಾಗೂ ಅವರ ಪತಿ ದಿವಾಕರ್ ಅವರ ವಿರುದ್ಧ ಸ್ವಾಮೀಜಿ ಸಹ ಬ್ಲಾಕ್ಮೇಲ್ ಆರೋಪ ಹೊರಿಸಿ, ಹೊನ್ನಾವರ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಪ್ರಕರಣ ಬಿದ್ದುಹೋಗಿತ್ತು.
ಇದನ್ನೂ ಓದಿ: ಅಪ್ರಾಪ್ರ ಬಾಲಕಿ ಮೇಲೆ 4 ದಿನಗಳ ಕಾಲ ಅತ್ಯಾಚಾರ; ಆರೋಪಿಗೆ 20 ವರ್ಷ ಜೈಲು, 95 ಸಾವಿರ ದಂಡ
ಇದನ್ನೂ ಓದಿ: ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ; ‘ಒಮ್ಮೆ ಹೆಣ್ತನ ಅನುಭವಿಸಿ, ಆಮೇಲೆ ಅತ್ಯಾಚಾರದ ಆನಂದವನ್ನು ಹಂಚಿಕೊಳ್ಳುವಿರಂತೆ’