ಆನೇಕಲ್: ಚಂದಾಪುರ, ಜಿಗಣಿ ಪುರಸಭೆ, ಹೆಬ್ಬಗೋಡಿ ನಗರಸಭೆ ಫಲಿತಾಂಶ ನಾಳೆ

ಆನೇಕಲ್: ಚಂದಾಪುರ, ಜಿಗಣಿ ಪುರಸಭೆ, ಹೆಬ್ಬಗೋಡಿ ನಗರಸಭೆ ಫಲಿತಾಂಶ ನಾಳೆ
ಸಾಂಕೇತಿಕ ಚಿತ್ರ

ಚಂದಾಪುರ ಮತ್ತು ಜಿಗಣಿ ಪುರಸಭೆ ಹಾಗೂ ಹೆಬ್ಬಗೋಡಿ ನಗರಸಭೆ ಮತ್ತು ಬಾಗಲಕೋಟೆ ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿ‌ಗಳ ಮತಎಣಿಕೆ ನಡೆಯಲಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 29, 2021 | 9:13 PM


ಬೆಂಗಳೂರು: ಆನೇಕಲ್ ವಿಧಾನಸಭಾ ಕ್ಷೇತ್ರದ ಎರಡು ಪುರಸಭೆ ಮತ್ತು ಒಂದು ನಗರಸಭೆ ಚುನಾವಣೆಯ ಫಲಿತಾಂಶ ಗುರುವಾರ (ಡಿ 30) ಪ್ರಕಟವಾಗಲಿದೆ. ಚಂದಾಪುರ ಮತ್ತು ಜಿಗಣಿ ಪುರಸಭೆ ಹಾಗೂ ಹೆಬ್ಬಗೋಡಿ ನಗರಸಭೆಯ ಮತಎಣಿಕೆ ನಡೆಯಲಿದ್ದು, ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. 23 ಸದಸ್ಯ ಬಲದ ಜಿಗಣಿ ಪುರಸಭೆಯಲ್ಲಿ ಕಳೆದ ಬಾರಿ ಬಿಜೆಪಿ 15, ಕಾಂಗ್ರೆಸ್‌ 5, ಜೆಡಿಎಸ್‌ 2, ಪಕ್ಷೇತರರು 1 ಸ್ಥಾನ ಗೆದ್ದಿದ್ದರು. ಬಿಜೆಪಿಯೇ ಆಡಳಿತ ನಡೆಸಿತ್ತು. ಈ ಬಾರಿ 61 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ 23 ಸ್ಥಾನಗಳಿಗೆ ಸ್ಪರ್ಧಿಸಿದ್ದರೆ, ಜೆಡಿಎಸ್ 13 ಸ್ಥಾನಗಳಿಗೆ ಸ್ಪರ್ಧಿಸಿದೆ. ಎಎಪಿ 1 ಮತ್ತು ಪಕ್ಷೇತರ ಅಭ್ಯರ್ಥಿಗಳು ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ 16,496 ಮತದಾರರು. ಈ ಪೈಕಿ ಪುರುಷರು 9282 ಮತ್ತು ಮಹಿಳೆಯರು 7210.

ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆಯ ಐದು ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ಆಗಿದೆ. ಈ ಪೈಕಿ ಮೂವರು ಕಾಂಗ್ರೆಸ್, ಇಬ್ಬರು ಬಿಜೆಪಿಗೆ ಸೇರಿದವರು. ಕಳೆದ ಬಾರಿ ಬಿಜೆಪಿ 18, ಕಾಂಗ್ರೆಸ್‌ 12, ಜೆಡಿಎಸ್‌ ಒಂದು ಸ್ಥಾನದಲ್ಲಿ ಜಯಗಳಿಸಿತ್ತು. ಬಿಜೆಪಿಯೇ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಈ ಬಾರಿ 26 ಸದಸ್ಯ ಸ್ಥಾನಕ್ಕೆ 58 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು. ಕಾಂಗ್ರೆಸ್ 25, ಬಿಜೆಪಿ 21, ಜೆಡಿಎಸ್ 6, ಸಿಪಿಐ 1, ಪಕ್ಷೇತರರು ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 59,206 ಮತದಾರರು ಇದ್ದಾರೆ. ಈ ಪೈಕಿ ಪುರುಷರು 35,475, ಮಹಿಳೆಯರು 23,721.

ಆನೇಕಲ್ ವಿಧಾನಸಭಾ ಕ್ಷೇತ್ರದ ಚಂದಾಪುರ ಪುರಸಭೆಯಲ್ಲಿ 23 ಸ್ಥಾನಗಳಿವೆ. ಕಳೆದ ಬಾರಿ ಪುರಸಭೆಯಲ್ಲಿ ಬಿಜೆಪಿಯ 16, ಕಾಂಗ್ರೆಸ್​ನ 7 ಮಂದಿ ಜಯಗಳಿಸಿದ್ದರು. ಬಿಜೆಪಿಯೇ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಈ ಬಾರಿ 23 ಸದಸ್ಯ ಸ್ಥಾನಕ್ಕೆ 56 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಬಿಜೆಪಿ 23, ಕಾಂಗ್ರೆಸ್ 22, ಜೆಡಿಎಸ್ ಒಂದು, ಬಿಎಸ್​ಪಿ 2, ಕೆಆರ್​ಎಸ್ 1 ಸ್ಥಾನದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 27,062 ಮತದಾರರಿದ್ದಾರೆ. ಈ ಪೈಕಿ ಪುರುಷರು 14,590, ಮಹಿಳೆಯರು 12,464 ಮತದಾರರಿದ್ದಾರೆ.

ಬಾಗಲಕೋಟೆ: ಮೂರು ಪಟ್ಟಣ ಪಂಚಾಯಿತಿ ಮತಎಣಿಕೆ
ಬಾಗಲಕೋಟೆ:
ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿ‌ ಹಾಗೂ ನಾಲ್ಕು ಗ್ರಾಮ ಪಂಚಾಯಿತಿಗಳ ತಲಾ ಒಂದೊಂದು ಸ್ಥಾನದ ಉಪಚುನಾವಣೆಯ ಮತಎಣಿಕೆ ಗುರುವಾರ ನಡೆಯಲಿದೆ. ಹುನಗುಂದ ತಾಲ್ಲೂಕಿನ ಅಮೀನಗಡ, ಕಮತಗಿ ಹಾಗೂ ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಪಟ್ಟಣ ಪಂಚಾಯಿತಿ, ಜಮಖಂಡಿ ನಗರಸಭೆಯ ವಾರ್ಡ್ ನಂ.9ರ ಉಪ ಚುನಾವಣೆಗೆ ಮತಎಣಿಕೆ ನಡೆಯಲಿದೆ. ಹುನಗುಂದ ತಾಲ್ಲೂಕಿನ ಸುಳೆಬಾವಿ ಗ್ರಾಪಂನ ವಾರ್ಡ್ ನಂ.5ರ ಒಂದು ಸ್ಥಾನದ ಉಪಚುನಾವಣೆಗೆ ಮತ ಎಣಿಕೆ ನಡೆಯಲಿದೆ. ಮುಧೋಳ ತಾಲ್ಲೂಕಿನ ನಾಗರಾಳ, ಜಮಖಂಡಿ ತಾಲ್ಲೂಕಿನ ಖಾಜಿಬೀಳಗಿ ಗ್ರಾಮ ಪಂಚಾಯಿತಿಯ ತಲಾ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಹುನಗುಂದ ತಾಲ್ಲೂಕಿನ ಅಮೀನಗಡದ 16 ಮತ್ತು ಕಮತಗಿಯ 15, ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಪಟ್ಟಣ ಪಂಚಾಯಿತಿಯ 17 ಸ್ಥಾನಕ್ಕೆ ಚುನಾವಣೆ ನಡೆದಿತ್ತು.

ಅಮೀನಗಡ, ಕಮತಗಿ ಪಟ್ಟಣ ಪಂಚಾಯಿತಿ ಹುನಗುಂದ ಪಟ್ಟಣದ ಸರಕಾರಿ ಪಿಯು ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ರನ್ನಬೆಳಗಲಿ ಪಟ್ಟಣ ಪಂಚಾಯಿತಿಯ ಮುಧೋಳ ನಗರದ ಆರ್​ಎಂಜಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಒಟ್ಟು 120 ಅಭ್ಯರ್ಥಿಗಳ ಹಣೆಬರಹ ನಾಳೆ ನಿರ್ಧಾರವಾಗಲಿದೆ. ಭದ್ರತೆಗೆ 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾರಾ ಮಹಿಳಾ ಮತದಾರರು?; ವಿಸ್ತೃತ ವರದಿ ಇಲ್ಲಿದೆ
ಇದನ್ನೂ ಓದಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆಗೆ ಹೋದ್ರೆ ಕಾಂಗ್ರೆಸ್ ಸಿಂಗಲ್ ಡಿಜಿಟ್​ಗೆ ಬರುತ್ತೆ: ಸಿಟಿ ರವಿ ವ್ಯಂಗ್ಯ

Follow us on

Related Stories

Most Read Stories

Click on your DTH Provider to Add TV9 Kannada