ಕೃಷ್ಣ ಮೃಗದ ಚರ್ಮ, ಕೊಂಬು ಮಾರುತ್ತಿದ್ದವರ ಸೆರೆ, ಮೈಸೂರಿನಲ್ಲಿ ಕುವೆಂಪು ಜಯಂತಿ ಆಚರಣೆ ನಡುವೆ ಗಲಾಟೆ
ಬಂಧಿತರಿಂದ 2 ಕೃಷ್ಣಮೃಗಗಳ ಚರ್ಮ, 4 ಕೊಂಬು ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಜೆ.ಪಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಕೃಷ್ಣಮೃಗದ ಕೊಂಬು, ಚರ್ಮವನ್ನ ಮಾರುತ್ತಿದ್ದವರ ಸೆರೆ ಹಿಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಜೆ.ಪಿ.ನಗರ ಪೊಲೀಸರಿಂದ ಇಬ್ಬರ ಬಂಧನ ಮಾಡಲಾಗಿದೆ. ಲೋಕೇಶ್, ಎರ್ರಿ ಸ್ವಾಮಿ ಎಂಬವರನ್ನು ಜೆ.ಪಿ. ನಗರ ಪೊಲೀಸರು ಬಂಧಿಸಿದ್ದಾರೆ. ಆಂಧ್ರದ ಅನಂತಪುರ ಜಿಲ್ಲೆಯಿಂದ ಕೃಷ್ಣಮೃಗದ ಕೊಂಬು, ಚರ್ಮವನ್ನು ತಂದು ಮಾರುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಬಂಧಿತರಿಂದ 2 ಕೃಷ್ಣಮೃಗಗಳ ಚರ್ಮ, 4 ಕೊಂಬು ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಜೆ.ಪಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮೈಸೂರು: ಕುವೆಂಪು ಜಯಂತಿ ಆಚರಣೆ ನಡುವೆ ಗಲಾಟೆ ಮೈಸೂರಿನ ವಿವಿ ಮೊಹಲ್ಲಾದ ಮಾತೃಮಂಡಳಿ ವೃತ್ತದಲ್ಲಿ ಗಲಾಟೆ ನಡೆದಿದೆ. ಕುವೆಂಪು ವೃತ್ತ, ಅಂಬೇಡ್ಕರ್ ವೃತ್ತ ಎಂದು ಪಟ್ಟು ಹಿಡಿದಿರುವ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಒಂದು ಬಣ ಕುವೆಂಪು ಜಯಂತಿ ಅಚರಣೆ ಅಯೋಜಿಸಿತ್ತು. ವೃತ್ತದ ಬಳಿ ಕುವೆಂಪು ಜಯಂತಿ ಅಚರಣೆಗೆ ಮತ್ತೊಂದು ಬಣ ವಿರೋಧ ವ್ಯಕ್ತಪಡಿಸಿದೆ. ಪೊಲೀಸ್ ಬಂದೋಬಸ್ತ್ ನಲ್ಲಿ ಕುವೆಂಪು ಜಯಂತಿ ಆಚರಣೆ ಮಾಡಲಾಗಿದೆ. ಆದರೆ ಪೊಲೀಸರು ವೃತ್ತದ ಒಳಗೆ ಕುವೆಂಪು ಫ್ಲೆಕ್ಸ್ ಹಾಕಲು ಅನುಮತಿ ನೀಡಿಲ್ಲ. ಹೀಗಾಗಿ ಎರಡು ಗುಂಪುಗಳು ಎರಡು ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ಕುಳಿತಿರುವ ಬಗ್ಗೆ ತಿಳಿದುಬಂದಿದೆ. ವಿವಿ ಪುರಂನ ಟೆಂಪಲ್ ರಸ್ತೆ ಬಂದ್ ಮಾಡಿ ಅಕ್ರೋಶ ವ್ಯಕ್ತವಾಗಿದೆ. ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿದ್ದಾರೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗ್ರಾ.ಪಂ. ಉಪಚುನಾವಣೆ ವೇಳೆ ಕರ್ತವ್ಯಲೋಪ ಹಿನ್ನೆಲೆ; ಉಪತಹಶೀಲ್ದಾರ್ ಸೇರಿ ನಾಲ್ವರ ಸಸ್ಪೆಂಡ್ ಗ್ರಾಮ ಪಂಚಾಯತ್ ಉಪಚುನಾವಣೆ ವೇಳೆ ಕರ್ತವ್ಯಲೋಪ ಹಿನ್ನೆಲೆ ತುರುವನೂರು ಉಪತಹಶೀಲ್ದಾರ್ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ. ತುರುವನೂರು ಉಪ ತಹಸೀಲ್ದಾರ್ ಮಂಜಪ್ಪ, ಹಿರೇಕಬ್ಬಿಗೆರೆ ಗ್ರಾಮ ಲೆಕ್ಕಿಗ ವಿಜಯಕುಮಾರ್, ಕೂನಬೇವು ಗ್ರಾಮ ಲೆಕ್ಕಿಗ ಮಂಜುನಾಥ್, ಗೋನೂರು ಗ್ರಾಮ ಲೆಕ್ಕಿಗ ಟಿ. ಸ್ವಾಮಿ ಎಂಬವರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಳಿಸಿ ಚಿತ್ರದುರ್ಗ ಡಿಸಿ ಕವಿತಾ ಮನ್ನಿಕೇರಿ ಆದೇಶ ನೀಡಿದ್ದಾರೆ.
ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾ.ಪಂ. ಬೈಎಲೆಕ್ಷನ್ ಡಿಸೆಂಬರ್ 27ರಂದು ನಡೆದಿತ್ತು. ಉಪಚುನಾವಣೆ ಮತದಾನ ವೇಳೆ 50 ಮತಪತ್ರಗಳು ನಾಪತ್ತೆ ಹಿನ್ನೆಲೆ ಅಧಿಕಾರಿಗಳ ಅಮಾನತು ಮಾಡಲಾಗಿದೆ. ಗ್ರಾ.ಪಂ 6ನೇ ವಾರ್ಡ್ನ ಮತಗಟ್ಟೆ ಸಂಖ್ಯೆ 39ರಲ್ಲಿ ಲೋಪ ಕಂಡುಬಂದಿತ್ತು. ಮತಗಟ್ಟೆ ಅಧಿಕಾರಿಗಳಾಗಿದ್ದು ಕರ್ತವ್ಯ ನಿರ್ಲಕ್ಷ್ಯ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ನಾಲ್ವರು ಅಧಿಕಾರಿಗಳನ್ನ ಅಮಾನತುಗೊಳಿಸಿ ತನಿಖೆಗೆ ಆದೇಶ ನೀಡಲಾಗಿದೆ. ಮತಪತ್ರಗಳು ನಾಪತ್ತೆ ಹಿನ್ನೆಲೆಯಲ್ಲಿ ಇಂದು ಮರು ಮತದಾನ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಡಿಕ್ಕಿ, ಪಾದಚಾರಿ ಸಾವು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಡಿಕ್ಕಿಯಾಗಿ, ಪಾದಚಾರಿ ಸಾವನ್ನಪ್ಪಿದ ಘಟನೆ ದಾವಣಗೆರೆಯ ವಿದ್ಯಾನಗರ ಬಳಿ ಸಂಭವಿಸಿದೆ. ಹೆದ್ದಾರಿ ದಾಟುತ್ತಿದ್ದ ಹನುಮಂತಚಾರಿ (75) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಹಶೀಲ್ದಾರ್ ಕುಟುಂಬ ತೆರಳ್ತಿದ್ದ ಕಾರು ಡಿಕ್ಕಿಯಾಗಿ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಹಶೀಲ್ದಾರ್ ಶ್ರೀಧರ್ ಕುಟುಂಬ ಕಾರಿನಲ್ಲಿ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ತಹಶೀಲ್ದಾರ್ ಶ್ರೀಧರ್ ಕುಟುಂಬದವರಿಗೆ ಸಣ್ಣಪುಟ್ಟ ಗಾಯವಾಗಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಯಾದಗಿರಿ: ವಿದ್ಯುತ್ ತಂತಿ ತಗುಲಿ ಟಿನ್ ಶೆಡ್ನ ಹೋಟೆಲ್ಗೆ ಬೆಂಕಿ ವಿದ್ಯುತ್ ತಂತಿ ತಗುಲಿ ಟಿನ್ ಶೆಡ್ನ ಹೋಟೆಲ್ಗೆ ಬೆಂಕಿ ಹತ್ತಿಕೊಂಡ ಘಟನೆ ಯಾದಗಿರಿ ನಗರದ ಶಾಸ್ತ್ರೀ ಸರ್ಕಲ್ ಬಳಿ ನಡೆದಿದೆ. ಹೋಟೆಲ್ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಪರಸ್ಪರ ಟಚ್ ಆಗಿ ಬೆಂಕಿ ಹತ್ತಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ನಂದಿಸಲು ಸ್ಥಳೀಯರು ಹರಸಹಾಸ ಪಟ್ಟಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ನೆಲಮಂಗಲ ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ ಮಾಡಲಾಗಿದೆ. ಎಸಿಬಿ ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಿಬ್ಬಂದಿ ಆರೋಪದಲ್ಲಿ ದಾಳಿ ನಡೆಸಲಾಗಿದೆ. ಅಧಿಕಾರಿಗಳು ನಗರಸಭೆ ಕಚೇರಿಯಲ್ಲಿ ಪರಿಶೀಲಿಸುತ್ತಿದ್ದಾರೆ.
8 ಜನ ಎಸಿಬಿ ಅಧಿಕಾರಿಗಳ ತಂಡದಿಂದ ದಾಳಿ ಮುಂದುವರೆದಿದೆ. ದಾಳಿ ವೇಳೆ ಬಿಲ್‌ಕಲೆಕ್ಟರ್ ಸಹಾಯಕ ಶಿವಕುಮಾರ್ ಸಿಕ್ಕಿಬಿದ್ದಿದ್ದಾರೆ. ಶಿವಪ್ಪ ಗೌಡ ಎನ್ನುವವರ ಸೈಟ್ ಖಾತೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಶಿವಕುಮಾರ್, 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಶಿವಕುಮಾರ್ ಹಣ ಕೊಡದಿದ್ರೆ ಖಾತೆ ನಕಾರವೆಂದು ತಿಳಿಸಿದ್ದ ಎಂದು ತಿಳಿದುಬಂದಿದೆ. ಇದರಿಂದಾಗಿ ಮನನೊಂದ ಶಿವಪ್ಪಗೌಡ ಎಸಿಬಿಗೆ ದೂರು ನೀಡಿದ್ದರು. ದೂರಿನ್ವಯ ಎಸಿಬಿ DYSP ನೇತೃತ್ವದಲ್ಲಿ ಅಧೀಕಾರಿಗಳು ದಾಳಿ ನಡೆಸಿದ್ದರು. 20 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳಿಗೆ ಶಿವಕುಮಾರ್ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಮಂಗಳೂರು: ಧಾರ್ಮಿಕ ಕೇಂದ್ರಗಳಿಗೆ ಕಾಂಡೊಮ್ ಹಾಕುತ್ತಿದ್ದ ಆರೋಪಿಯ ಬಂಧನ
ಇದನ್ನೂ ಓದಿ: Crime News: 21 ವರ್ಷದ ಮಗಳ ಮುಂದೆಯೇ ಮಹಿಳೆಯ ಹತ್ಯೆ ಪ್ರಕರಣ: 3ನೇ ಪತಿ ಸೇರಿ ಇಬ್ಬರ ಬಂಧನ
Published On - 6:51 pm, Wed, 29 December 21