ಅಪ್ರಾಪ್ರ ಬಾಲಕಿ ಮೇಲೆ 4 ದಿನಗಳ ಕಾಲ ಅತ್ಯಾಚಾರ; ಆರೋಪಿಗೆ 20 ವರ್ಷ ಜೈಲು, 95 ಸಾವಿರ ದಂಡ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿ, ಕಾಲೇಜು ಮುಗಿಸಿಕೊಂಡು ಮರಳಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಬಾಲಕಿಯನ್ನು ಆರೋಪಿ ಅಂಬರೀಶ್ ಹೊನ್ನಳ್ಳಿ ಅನ್ನೋ ಯುವಕ ಅಪಹರಿಸಿ ಕೆರದುಕೊಂಡು ಹೋಗಿದ್ದ.
ಕಲಬುರಗಿ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ, ನಾಲ್ಕು ದಿನಗಳ ಕಾಲ ಬಾಲಕಿ ಮೇಲೆ ಒತ್ತಾಯಪೂರ್ಕವಾಗಿ ಅತ್ಯಾಚಾರ ನಡೆಸಿದ್ದ ಆರೋಪಿಗೆ ಇಪ್ಪತ್ತು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 95 ಸಾವಿರ ದಂಡವನ್ನು ವಿಧಿಸಿ, ಕಲಬುರಗಿಯ ಎರಡನೇ ಅಪರ ಜಿಲ್ಲಾ ವಿಶೇಷ ಸತ್ರ ನ್ಯಾಯಾಲಯ ಆದೇಶ ಮಾಡಿದೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಮತಿ ಹೇಮಾವತಿ ಅವರು ಆದೇಶ ಹೊರಡಿಸಿದ್ದಾರೆ. ಜೊತೆಗೆ ಸುಳ್ಳು ಸಾಕ್ಷಿ ಹೇಳಿದ ನೊಂದ ಬಾಲಕಿ ಮತ್ತು ಬಾಲಕಿಯ ತಂದೆ ವಿರುದ್ಧ ಕೂಡಾ ಪ್ರಕರಣ ದಾಖಲಿಸಲು ಆದೇಶ ಹೊರಡಿಸಿದ್ದಾರೆ.
ಘಟನೆ ವಿವರ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿ, ಕಾಲೇಜು ಮುಗಿಸಿಕೊಂಡು ಮರಳಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಬಾಲಕಿಯನ್ನು ಆರೋಪಿ ಅಂಬರೀಶ್ ಹೊನ್ನಳ್ಳಿ ಅನ್ನೋ ಯುವಕ ಅಪಹರಿಸಿ ಕೆರದುಕೊಂಡು ಹೋಗಿದ್ದ. ಜೂನ್ 26, 2019 ರಂದು ಬಾಲಕಿಯನ್ನು ಅಪಹರಿಸಿ ಕರೆದುಕೊಂಡು ಹೋಗಿದ್ದ ಯುವಕ ಒತ್ತಾಯಪೂರ್ವಕವಾಗಿ ತನ್ನ ಬೈಕ್ ಮೇಲೆ ಯುವತಿಯನ್ನು ಕರೆದುಕೊಂಡು ಮಹರಾಷ್ಟ್ರದ ಸೊಲ್ಲಾಪುರದಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ. ಅಕ್ರಮವಾಗಿ ಬಂಧನದಲ್ಲಿಟ್ಟದ್ದಲ್ಲದೆ, ನಾಲ್ಕು ದಿನಗಳ ಕಾಲ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ.
ಘಟನೆ ಬಗ್ಗೆ ಬಾಲಕಿಯ ತಂದೆ, ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆಗ ಅಫಜಲಪುರ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ಮಹಾಂತೇಶ್ ಪಾಟೀಲ್, ತನಿಖೆ ನಡೆಸಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 366( ಎ)506, 376(2)(ಐ)(ಎನ್) 342, ಪೋಕ್ಸೋ ಕಾಯ್ದೆಯಡಿ ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಧೀಶರಾದ ಶ್ರೀಮತಿ ಹೇಮಾವತಿ ಅವರು, ಪ್ರಕರಣ ಆರೋಪಿಗೆ, ಕಲಂ 366(ಎ) ಅಡಿಯಲ್ಲಿನ ಅಪರಾಧಕ್ಕೆ ಹತ್ತು ವರ್ಷ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಕಲಂ 376(2)(ಐ) (ಎನ್) ಐಪಿಸಿ ಹಾಗೂ ಕಲಂ ಆರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪಿತನಿಗೆ ಇಪ್ಪತ್ತು ವರ್ಷ ಕಠಿಣ ಶಿಕ್ಷೆ ಹಾಗೂ ಐವತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ. ಕಲಂ 342 ಐಪಿಸಿ ಅಡಿಯಲ್ಲಿನ ಅಪರಾಧಕ್ಕೆ ಒಂದು ವರ್ಷ ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ವಿಧಿಸಿದೆ. ಕಲಂ 506 ಐಪಿಸಿ ಅಡಿಯಲ್ಲಿನ ಅಪರಾಧಕ್ಕೆ ಎರಡು ವರ್ಷ ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ವಿಧಿಸಲಾಗಿದೆ. 2021 ರ ಡಿಸೆಂಬರ್ 20 ರಂದು ಮಾನ್ಯ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ನೊಂದ ಬಾಲಕಿಗೆ ಪರಿಹಾರ ಇನ್ನು ಅತ್ಯಾಚಾರದಿಂದ ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಮೂರು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶ ಮಾಡಲಾಗಿದೆ. ಜೊತೆಗೆ ಆರೋಪಿಗೆ ವಿಧಿಸಿರುವ ದಂಡದ ಮೊತ್ತದಲ್ಲಿ 75 ಸಾವಿರ ರೂಪಾಯಿ ಹಣವನ್ನು ನೊಂದ ಬಾಲಿಕಿಗೆ ನೀಡಲು ಆದೇಶ ಹೊರಡಿಸಲಾಗಿದೆ.
ಸುಳ್ಳು ಕೇಸ್ ಹೇಳಿದವರ ವಿರುದ್ದ ಕೂಡಾ ಪ್ರಕರಣ ಇನ್ನು ನೊಂದ ಬಾಲಕಿಯ ತಂದೆಯೇ, ತನ್ನ ಮಗಳ ಮೇಲೆ ಅತ್ಯಾಚಾರವಾಗಿದ್ದರ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೂರಕ ವಿಚಾರಣೆ ವೇಳೆ ಕೂಡಾ ಬಾಲಕಿ ಮತ್ತು ಬಾಲಕಿಯ ತಂದೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸಾಕ್ಷಿ ನುಡದಿದ್ದರು. ಆದರೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿ ಸುಳ್ಳು ಸಾಕ್ಷಿ ನುಡಿದಿದ್ದರಿಂದ ನೊಂದ ಬಾಲಕಿ ಮತ್ತು ಬಾಲಕಿಯ ತಂದೆ ವಿರುದ್ಧ ಕೂಡಾ ಪ್ರಕರಣ ದಾಖಲಿಸಲು ಆದೇಶ ಹೊರಡಿಸಲಾಗಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಎಸ್ ಎಚ್ ಹಕೀಮ್ ಪ್ರಕರಣದ ವಾದವನ್ನು ಮಂಡಿಸಿದ್ದರು.
ವರದಿ- ಸಂಜಯ್ ಚಿಕ್ಕಮಠ
ಇದನ್ನೂ ಓದಿ: ಗರುಡ ಮಾಲ್ನಲ್ಲಿ ಮೆಡಿವಲ್ ಆರ್ಟ್ ಶೋ, ಕ್ರಿಸ್ ಸಂತೆ; ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟಿ ರಾಧಿಕಾ ನಾರಾಯಣ್