ಕೇಂದ್ರ ಸರ್ಕಾರದ ಸಂಸ್ಥೆಗೆ ತೆರಿಗೆ ಪಾವತಿಸಲು ನೊಟೀಸ್​ ಕೊಟ್ಟ ಬಿಬಿಎಂಪಿ: ಹೈಕೋರ್ಟ್​ ತಡೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 15, 2021 | 9:51 PM

ಸಂವಿಧಾನದ 285 (1)ನೇ ವಿಧಿಯಡಿ ತೆರಿಗೆ ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ಆಸ್ತಿಗಳಿಗೆ ತೆರಿಗೆ ವಿಧಿಸಲು ಅವಕಾಶವಿಲ್ಲ ಎಂದು ಸಂಸ್ಥೆಯು ವಾದಿಸಿದೆ.

ಕೇಂದ್ರ ಸರ್ಕಾರದ ಸಂಸ್ಥೆಗೆ ತೆರಿಗೆ ಪಾವತಿಸಲು ನೊಟೀಸ್​ ಕೊಟ್ಟ ಬಿಬಿಎಂಪಿ: ಹೈಕೋರ್ಟ್​ ತಡೆ
ಬಿಬಿಎಂಪಿ ಮತ್ತು ಪ್ಲೈವುಡ್ ಸಂಶೋಧನಾ ಸಂಸ್ಥೆ
Follow us on

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ಲೈವುಡ್ ಸಂಶೋಧನಾ ಸಂಸ್ಥೆಗೆ ಆಸ್ತಿ ತೆರಿಗೆ ಪಾವತಿಸುವಂತೆ ಸೂಚಿಸಿ ಬಿಬಿಎಂಪಿ ನೊಟೀಸ್ ಜಾರಿ ಮಾಡಿದೆ. ಈ ನೊಟೀಸ್ ಪ್ರಶ್ನಿಸಿ ಸಂಶೋಧನಾ ಸಂಸ್ಥೆಯು ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಮುಂದಿನ ವಿಚಾರಣೆವರೆಗೆ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಜರುಗಿಸಬಾರದು ಎಂದು ಬಿಬಿಎಂಪಿಗೆ ಸೂಚನೆ ನೀಡಿದೆ. ಸಂವಿಧಾನದ 285 (1)ನೇ ವಿಧಿಯಡಿ ತೆರಿಗೆ ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ಆಸ್ತಿಗಳಿಗೆ ತೆರಿಗೆ ವಿಧಿಸಲು ಅವಕಾಶವಿಲ್ಲ. ಆದರೆ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಡಿಮಾಂಡ್ ನೊಟೀಸ್ ನೀಡಿದೆ ಎಂದು ದೂರಿರುವ ಅರ್ಜಿದಾರರು ಬಿಬಿಎಂಪಿಯ ಅಧಿಕಾರ ವ್ಯಾಪ್ತಿ ಪ್ರಶ್ನಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿಗಳಿಗೆ ಹೈಕೋರ್ಟ್​ ನೊಟೀಸ್ ಜಾರಿ ಮಾಡಿದೆ. ಬಿಬಿಎಂಪಿ ಆದೇಶ ಪ್ರಶ್ನಿಸಿದ್ದ ಪ್ಲೈವುಡ್ ಸಂಶೋಧನಾ ಸಂಸ್ಥೆಯ ಪರವಾಗಿ ವಾದಿಸಿದ ವಕೀಲ ಎಂ.ಎನ್.ಕುಮಾರ್, ಬಿಬಿಎಂಪಿಗೆ ಇಂಥ ನೊಟೀಸ್ ಜಾರಿ ಮಾಡುವ ಅಧಿಕಾರವೇ ಇಲ್ಲ ಎಂದು ಹೇಳಿದರು.

ಕರ್ನಾಟಕ ಸರ್ಕಾರವು 1963ರಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 16.18 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಸಂಶೋಧನಾ ಸಂಸ್ಥೆ ಸ್ಥಾಪಿಸಲು ನೀಡಿತ್ತು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆಯು ಕೇಂದ್ರ ಸರ್ಕಾರದ ಕೈಗಾರಿಕಾ ಇಲಾಖೆಯಿಂದ ಅನುದಾನ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಮಗಳ ಕ್ಷೇಮಕ್ಕಾಗಿ ಪಾಲಕರು ನೀಡುವ ಉಡುಗೊರೆ ವರದಕ್ಷಿಣೆ ಅಲ್ಲ: ಕೇರಳ ಹೈಕೋರ್ಟ್
ಇದನ್ನೂ ಓದಿ: ಶೀಘ್ರದಲ್ಲೇ ಕೊಡವರಿಗೆ ಹಿಂದುಳಿದ ವರ್ಗ ಸ್ಥಾನಮಾನ? ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ಏನು?