ಬೆಂಗಳೂರು, ಏಪ್ರಿಲ್ 09: ಕೌಟುಂಬಿಕ ಕಲಹ ಹಿನ್ನೆಲೆ ಭಾವನಿಂದ ಬಾಮೈದನನ್ನು ಹತ್ಯೆ (killed) ಮಾಡಿರುವಂತಹ ಘಟನೆ ವೆಂಕಟೇಶ್ವರಪುರದಲ್ಲಿ ನಡೆದಿದೆ. ಇಸ್ಪೀಟ್ ಎಲೆ ಮೇಲೆ ಬಾಮೈದ ಕಿರಣ್ ಕುಮಾರ್ ಹೆಣವಾಗಿಬಿದಿದ್ದಾನೆ. ಆರೋಪಿ ಲಕ್ಷ್ಮಣ ಮತ್ತು ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಭಾವ, ಬಾಮೈದನ ನಡುವೆ ಇಂದು ಗಲಾಟೆ ನಡೆದಿದೆ. ಯುಗಾದಿ ಹಬ್ಬದ ಪ್ರಯುಕ್ತ ವೆಂಕಟೇಶ್ವರಪುರದ ಗಲ್ಲಿಯಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಚಾಕು ಇರಿದು ಕೊಲೆ ಮಾಡಲಾಗಿದೆ. ಕಿರಣ್ ಕುಮಾರ್ ಹತ್ಯೆಗೆ ಲಕ್ಷ್ಮಣ ಮೊದಲೇ ಸಂಚು ರೂಪಿಸಿದ್ದ. ಹಾಗಾಗಿ ಚಾಕು ಇಟ್ಟುಕೊಂಡು ಬಂದಿದ್ದ.
ಇಸ್ಪೀಟ್ ಎಲೆಗಳ ಮೇಲಿದ್ದ ಹಣ ಎತ್ತಲು ಬಗ್ಗಿದಾಗ ಕಿರಣ್ ಕುಮಾರ್ ಬೆನ್ನಿಗೆ ಭಾವ ಲಕ್ಷ್ಮಣ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ಕಿರಣ್ ಕುಮಾರ್ನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಮೈದ ಸಾವನ್ನಪ್ಪಿದ್ದಾನೆ. ಕೇಸ್ ದಾಖಲಿಸಿಕೊಂಡು ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.
ಚಿಕ್ಕಮಗಳೂರು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಹೆಡ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಕಡೂರು ತಾಲೂಕಿನ ತಂಗಲಿ ಅಂಡರ್ ಪಾಸ್ನಲ್ಲಿ ನಡೆದಿದೆ. ಸ್ಥಳ ಮಹಜರ್ಗೆ ಅಂಚೆಚೋಮನಹಳ್ಳಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಮಲ್ಲಿಕಾರ್ಜುನ್(44) ಮೃತ ಕಡೂರು ಠಾಣೆ ಹೆಡ್ ಕಾನ್ಸ್ಟೇಬಲ್. ಮಲ್ಲಿಕಾರ್ಜುನ್ ಕಡೂರು ತಾಲೂಕಿನ ಚಟ್ಟನಹಳ್ಳಿ ನಿವಾಸಿ. ಸ್ಥಳಕ್ಕೆ ಕಡೂರು ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ಮಾಡಿದ್ದಾರೆ.
ಕೋಲಾರ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಯುವಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೀರಂಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೀರಂಡಹಳ್ಳಿ ಗ್ರಾಮಕ್ಕೆ ಹಬ್ಬಕ್ಕೆಂದು ಬಂದಿದ್ದ ಇಪ್ಪತ್ತು ವರ್ಷದ ಲಿಖಿತ್ ಎಂಬಾತ ಕೃಷಿಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಮತ್ತೊಂದು ಸ್ಕ್ಯಾಮ್ ಬೆಳಕಿಗೆ: 1 ರೂ. ಕುಳುಹಿಸಿ ಸಾವಿರಾರು ರೂ. ದೋಚುತ್ತಾರೆ ವಂಚಕರು, ಹುಷಾರ್!
ಬೆಳಿಗ್ಗೆ ಹಬ್ಬ ಎಂದು ಸ್ನಾನ ಮಾಡಿ ನಂತರ ಹನ್ನೊಂದು ಗಂಟೆ ಸುಮಾರಿಗೆ ಒಬ್ಬಟ್ಟು ತಿಂದು ಈಜಾಡಲು ಹೋದ ಯುವಕ, ಈಜಾಡಿದ ನಂತರ ಕೃಷಿ ಹೊಂಡದಿಂದ ಮೇಲೆ ಬರಲಾಗದೆ ನೀರಿನಲ್ಲೇ ಮುಳುಗಿ ಸಾವನ್ನಪ್ಪಿದ್ದಾನೆ. ಸದ್ಯ ಘಟನೆ ತಿಳಿದು ಸ್ಥಳಕ್ಕೆ ಬಂಗಾಪೇಟೆ ಪೊಲೀಸರು ಭೇಟಿ ನೀಡಿದ್ದು ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಮಾಲೂರು ಮೂಲದ ರತ್ಮಮ್ಮ (೪೫) ಆತ್ಮಹತ್ಯೆಗೆ ಶರಣಾದ ಮಹಿಳೆ. ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಐದು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:51 pm, Tue, 9 April 24