ಬಯಲು ಶೌಚಾಲಯಕ್ಕೆ ಹೋದ ಬಾಲಕನ ದೊಣ್ಣೆಯಿಂದ ಹೊಡೆದು ಕೊಂದರು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 17, 2024 | 6:04 PM

ಇತ್ತೀಚೆಗೆ ಮಕ್ಕಳ ಸಾವು ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಈಗ ಶಾಲೆಗಳು ರಜೆ ಇರುವುದರಿಂದ ಮಕ್ಕಳು ಕೆರೆ, ಬಾವಿಗಳಿಗೆ ಇಳಿದು ಸಾವನ್ನಪ್ಪಿದ ಘಟನೆ​ಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದರಂತೆ ಆನೇಕಲ್ ತಾಲೂಕಿನ ನೆರಿಗಾ(Neriga) ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕನನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ ದಾರುಣ ಘಟನೆ ನಡೆದಿದೆ.

ಬಯಲು ಶೌಚಾಲಯಕ್ಕೆ ಹೋದ ಬಾಲಕನ ದೊಣ್ಣೆಯಿಂದ ಹೊಡೆದು ಕೊಂದರು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮೇ.17: ಆನೇಕಲ್ ತಾಲೂಕಿನ ನೆರಿಗಾ(Neriga) ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕನನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ ದಾರುಣ ಘಟನೆ ನಡೆದಿದೆ. ಪ್ರಾಣೇಶ್(15) ಮೃತ ಬಾಲಕ. ಮೇ.15ರಂದು ನಡೆದಿದ್ದ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೂರು ತಿಂಗಳ ಹಿಂದೆ ಗಾರೆ ಕೆಲಸಕ್ಕೆಂದು ಈ ಕುಟುಂಬ ನೆರಿಗಾ ಗ್ರಾಮಕ್ಕೆ ಬಂದು ನೆಲೆಸಿತ್ತು. ಮೂಲತಃ ಮಂತ್ರಾಲಯದ ಕೂಲಿಕಾರ್ಮಿಕ ದಂಪತಿಯ ಪುತ್ರನಾಗಿದ್ದ ಪ್ರಾಣೇಶ್​, ಶಾಲೆಗೆ ರಜೆ ಹಿನ್ನೆಲೆ ತಂದೆ-ತಾಯಿ ಬಳಿಗೆ ಬಂದಿದ್ದ.

ತಲೆ ಹಾಗೂ ಹೊಟ್ಟೆ ಭಾಗಕ್ಕೆ ಹೊಡೆದು ಕೊಲೆ

ಎಂದಿನಂತೆ ಬಯಲು ಶೌಚಾಲಯಕ್ಕೆ ಹೋದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ದೊಣ್ಣೆಯಿಂದ ಪ್ರಾಣೇಶ್​ನ ತಲೆ, ಹೊಟ್ಟೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಇತ್ತ ಮಗನನ್ನು ಕಳೆದುಕೊಂಡು ತಾಯಿಯ ಆಕ್ರಂದನ ಮುಗಿಲುಮುಟ್ಟಿದ್ದು, ನ್ಯಾಯಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಕುರಿತು ಸರ್ಜಾಪುರ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಬೆಳಗಾವಿ: ಪ್ರೇಯಸಿ ಜತೆ ಹೋಗುತ್ತಿದ್ದವನನ್ನು ಅಡ್ಡಗಟ್ಟಿ ಸ್ಕ್ರೂಡ್ರೈವರ್​ನಿಂದ ಚುಚ್ಚಿ ಬರ್ಬರ ಹತ್ಯೆ

ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವೃದ್ಧನಿಗೆ ಗಂಭೀರ ಗಾಯ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ಮಹದೇವಪುರ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವೃದ್ಧನಿಗೆ ಗಂಭೀರ ಗಾಯವಾಗಿದೆ. ಕಾಳೇನಹಳ್ಳಿ ಗ್ರಾಮದ ಶಿವಕುಮಾರ್(75) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳು ವೃದ್ಧನನ್ನು ಬೆಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಕಾರುನ್ನು ಜಪ್ತಿ ಮಾಡಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿಡಿಲು ಬಡಿದು ಜಾನುವಾರು ಸಾವು

ತುಮಕೂರು: ಪಾವಗಡ ತಾಲೂಕಿನ ರಂಗಸಮುದ್ರದಲ್ಲಿ ಸಿಡಿಲು ಬಡಿದು ಹಸುವೊಂದು ಸಾವನ್ನಪ್ಪಿದ ಘಟನೆ ಇಂದು(ಮೇ.17) ಬೆಳಿಗ್ಗೆ ನಡೆದಿದೆ. ಇನ್ನುಳಿದಂತೆ ನಾಲ್ಕು ಹಸುಗಳಿಗೆ ಗಾಯವಾಗಿದ್ದು, ಸಿಡಿಲು ಬಡಿದ ಪರಿಣಾಮ ಗುಡಿಸಲು ಸುಟ್ಟುಭಸ್ಮವಾಗಿದೆ. ಈ ಹಸುಗಳು ಕರಿಯಪ್ಪ ಎಂಬುವರಿಗೆ ಸೇರಿದ್ದಾಗಿದ್ದು, ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ