ಬೆಂಗಳೂರು, ಏಪ್ರಿಲ್ 17: ಇನ್ನು ನಮ್ಮ ಯಾತ್ರಿ ಆ್ಯಪ್ (Namma Yatri App) ಮೂಲಕ ಕ್ಯಾಬ್ (Cab) ಕೂಡ ಬುಕ್ ಮಾಡಬಹುದು. ಸದ್ಯ 25,000 ಕ್ಯಾಬ್ಗಳೊಂದಿಗೆ ಕಾರ್ಯಾಚರಣೆ ಆರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ ಒಂದು ಲಕ್ಷ ಚಾಲಕರನ್ನು (Cab Drivers) ಸೇರಿಸುವ ಗುರಿಯನ್ನು ಆ್ಯಪ್ ಹೊಂದಿದೆ. ನಮ್ಮ ಯಾತ್ರಿಯು ಹೆಚ್ಚಿನ ಕಮಿಷನ್ ಮತ್ತು ಪಾರದರ್ಶಕತೆಯ ಕೊರತೆಯ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ನಮ್ಮ ಯಾತ್ರಿಯ ಕ್ಯಾಬ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಚಾಲನೆ ನೀಡಿದರು. ಬಳಿಕ ಮಾತನಾಡಿ, ನಮ್ಮ ಯಾತ್ರಿ ಕರ್ನಾಟಕದ ಸ್ವದೇಶಿ ಆ್ಯಪ್ ಆಗಿದೆ. ಅದರ ಸಮುದಾಯ-ಕೇಂದ್ರಿತ ವಿಧಾನ ಮತ್ತು ಚಾಲಕರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳು ಶ್ಲಾಘನೀಯ. ನಾವೀನ್ಯತೆ, ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಗೆ ಅವರ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ ಮತ್ತು ಅವರಿಗೆ ಯಶಸ್ಸನ್ನು ಬಯಸುತ್ತೇನೆ ಎಂದರು.
ನಮ್ಮ ಸಮುದಾಯವನ್ನು ಸಬಲೀಕರಣಗೊಳಿಸಲು ಮತ್ತು ನ್ಯಾಯಯುತ ವೇತನ, ಪರಸ್ಪರ ಗೌರವವನ್ನು ನೀಡುವ ರೀತಿಯಲ್ಲಿ ನೇರವಾಗಿ ಚಾಲಕರನ್ನು ಸಂಪರ್ಕಿಸಬಹುದಾದ, ಮುಕ್ತ ಚಲನಶೀಲತೆಯ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ನಾವು ನಮ್ಮ ಯಾತ್ರಿಯನ್ನು ಅಭಿನಂದಿಸುತ್ತೇವೆ. ಇದು ಚಾಲಕರ ಕಲ್ಯಾಣ ಯೋಜನೆಗಳನ್ನು ವರ್ಧಿಸುತ್ತದೆ ಎಂದು ಇಂಡಿಯನ್ ಫೆಡರೇಶನ್ ಆಫ್ ಆಪ್ ಬೇಸ್ಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ (ಐಎಫ್‌ಎಟಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಕ್ ಸಲಾವುದ್ದೀನ್ ಹೇಳಿದರು.
ನಮ್ಮ ಯಾತ್ರಿ ಆ್ಯಪ್ ಆಟೋ ಸೇವೆಯಂತೆಯೇ ಕ್ಯಾಬ್‌ಗಳಲ್ಲಿಯೂ ಪಾರದರ್ಶಕತೆ ಮತ್ತು ದಕ್ಷತೆಗೆ ಆದ್ಯತೆ ನೀಡಲಿದೆ ಎಂದು ಅವರು ಹೇಳಿದರು. ಇದು ಎಸಿ ಅಲ್ಲದ ಮಿನಿ, ಎಸಿ ಮಿನಿ, ಸೆಡಾನ್ ಮತ್ತು XL ಕ್ಯಾಬ್ ಒಳಗೊಂಡಂತೆ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಪ್ಲಿಕೇಶನ್ ಶೀಘ್ರದಲ್ಲೇ ಇಂಟರ್-ಸಿಟಿ, ಬಾಡಿಗೆಗಳು ಮತ್ತು ನಿಗದಿತ ರೈಡ್‌ಗಳನ್ನು ಕೂಡ ಒದಗಿಸಲಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಆ್ಯಪ್ ಸೇವೆ ಲಭ್ಯವಾಗಲಿದೆ. ಇದು ಅಂಗವೈಕಲ್ಯ-ಸ್ನೇಹಿ ಪ್ರಯಾಣ, ಹೆಚ್ಚುವರಿ ಲಗೇಜ್ ಕೊಂಡೊಯ್ಯಲು ಅವಕಾಶ, ಸಾಕುಪ್ರಾಣಿಗಳೊಂದಿಗೆ ಪ್ರಯಾಣ ಮತ್ತು ಪ್ರವಾಸಗಳಂತಹ ವಿಶೇಷ ಸೇವೆಗಳನ್ನೂ ಸಹ ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿದೆ ರೈಲ್ವೆ ಕೋಚ್ ಎಸಿ ರೆಸ್ಟೋರೆಂಟ್! ಏನಿದರ ವಿಶೇಷ? ಇಲ್ಲಿದೆ ಮಾಹಿತಿ
ನಮ್ಮ ಯಾತ್ರಿ ಆ್ಯಪ್ ಆರಂಭದಲ್ಲಿ ಬೆಂಗಳೂರಿನಾದ್ಯಂತ ಆಟೊ ಸೇವೆಗಳನ್ನು ಒದದಗಿಸುತ್ತಿತ್ತು. ಇದೀಗ ಕ್ಯಾಬ್ ಸೇವಾ ಕ್ಷೇತ್ರಕ್ಕೂ ಕಾಲಿಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ