ಬೆಂಗಳೂರು: ಸಿಡಿಎಸ್ ಬಿಪಿನ್ ರಾವತ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಬೆಂಗಳೂರಿನ ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಟಿ.ಕೆ. ವಸಂತ್ ಕುಮಾರ್ (40) ಬಂಧನ ಮಾಡಲಾಗಿದೆ. ಬೆಂಗಳೂರಿನಲ್ಲಿ ಲ್ಯಾಬ್ ಟೆಕ್ನಿಷಯನ್ ಆಗಿ, ಖಾಸಗಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಟಿ.ಕೆ. ವಸಂತ್ ಎಂಬವರನ್ನು ಬಂಧಿಸಲಾಗಿದೆ. ಟಿ.ಕೆ. ವಸಂತ್ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ಇದೀಗ, ಐಪಿಸಿ ಸೆಕ್ಷನ್ 505ರಡಿಯಲ್ಲಿ ಎಫ್‌ಐಆರ್ ದಾಖಲಿಸಿ ಬಂಧನ ಮಾಡಲಾಗಿದೆ.
ಬಿಪಿನ್ ರಾವತ್ ಮೃತಪಟ್ಟಿದ್ದಕ್ಕೆ ಸಂಭ್ರಮಾಚರಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ ಬೆನ್ನಲ್ಲೇ ಪ್ರಕರಣ ದಾಖಲಾಗಿತ್ತು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದರು. ಸದ್ಯ 3 ಫೇಸ್ಬುಕ್ ಪೋಸ್ಟ್ಗಳ ಮೇಲೆ ಪ್ರಕರಣ ದಾಖಲಾಗಿತ್ತು. ಇವರಲ್ಲಿ ಒಬ್ಬರು ಕಾರ್ಕಳ ಮೂಲ, ಇನ್ನೊಬ್ಬರು ಬೆಂಗಳೂರು, ಮತ್ತೊಂದು ಪೋಸ್ಟ್ ಮಾಡಿದ್ದವರ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದರು.
ಫೇಸ್ ಬುಕ್ನಲ್ಲಿ ಬಿಪಿನ್ ರಾವತ್ ಸಾವಿನ ಬಗ್ಗೆ ಪ್ರಚೋದನಕಾರಿಯಾಗಿ ಬರೆದಿದ್ದಾರೆ ಎಂದು ತಿಳಿಸಿದ ಪೊಲೀಸ್ ಕಮಿಷನರ್ ಶಶಿಕುಮಾರ್, ದೂರು ಬಂದ ಹಿನ್ನೆಲೆ ಕೇಸು ದಾಖಲಿಸಿದ್ದೇವೆ. ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ. ವಿಚಾರಣೆ ಬಳಿಕ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಸಿಡಿಎಸ್ ಬಿಪಿನ್ ರಾವತ್ ನಿಧನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಕೃತ ಪೋಸ್ಟ್ ಮಾಡಿದ್ದಾರೆ. ಈ ಹಿನ್ನೆಲೆ ದೇಶ ವಿರೋಧಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕೆಂದು ಡಿಜಿ ಮತ್ತು ಐಜಿಪಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದರು ವಿಕೃತ ಪೋಸ್ಟ್ ಮಾಡುವವರನ್ನು ಸಹಿಸುವುದಿಲ್ಲ. ದುಷ್ಕರ್ಮಿಗಳ ವಿಳಾಸ ಪತ್ತೆ ಹಚ್ಚಿ ತಕ್ಕ ಶಿಕ್ಷೆ ಆಗಬೇಕು ಅಂತ ದೂರವಾಣಿ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಡಿಜಿಪಿಗೆ ಸೂಚನೆ ನೀಡಿದ್ದರು.
ಇದನ್ನೂ ಓದಿ: Bipin Rawat: ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವೇನು? ತಜ್ಞರು ಏನಂತಾರೆ?; ಇಲ್ಲಿದೆ ಮಾಹಿತಿ