ಬೆಂಗಳೂರು, ನ.07: ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೆ. ಎಸ್ ಪ್ರತಿಮಾ(Officer Pratima Murder Case) ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದವರ ವಿರುದ್ಧ ಶೀಘ್ರವೇ ಕಠಿಣ ಶಿಕ್ಷೆ ಆಗಬೇಕು ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಅವರು ಹೇಳಿದರು. ನಗರದ ಪ್ರೆಸ್ ಕ್ಲಬ್ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ನಮ್ಮ ಸೋದರಿ ಪ್ರತಿಮಾ ಭೀಕರ ಕೊಲೆ ಆಗಿರುವುದು ನಿಜಕ್ಕೂ ದುರದೃಷ್ಟಕರ, ಪ್ರಾರಂಭದಲ್ಲಿ ನಮ್ಮ ಉದ್ಯಮದ ಕೆಲವರ ಮೇಲೆಯೂ ಆಪಾದನೆ ಕೇಳಿಬಂದಿತ್ತು. ಅದು ತಪ್ಪು, ನಾವು ಯಾವತ್ತೂ ಅಷ್ಟೇ ಕಾನೂನುಬದ್ಧ ಗಣಿಗಾರಿಕೆಗೆ ಅನುವು ಕೊಟ್ಟಿದ್ದೇವೆ. ನಾವು ಗಣಿ ಮಾಪಿಯಾಗೆ ಬೆಂಬಲ ಕೊಡುವ ಮಂದಿ ಅಲ್ಲ, ಈಗ ಆರೋಪಿ ಸಿಕ್ಕಿದ್ದು, ಅದರ ಕೂಲಂಕುಷ ತನಿಖೆ ಆಗಲಿ ಎಂದರು.
ಅಧಿಕಾರಿಯ ಕಗ್ಗೊಲೆ ಕೇವಲ ಇಲಾಖೆಗೆ ಮಾತ್ರವಲ್ಲ, ನಮ್ಮ ಇಂಡಸ್ಟ್ರಿಗೂ ಕೂಡ ತುಂಬಲಾರದ ನಷ್ಟವಾಗಿದ್ದು, ಸರ್ಕಾರ ಈಗಾಗಲೇ ಈ ಪ್ರಕರಣ ಸಂಬಂಧ ವಿಶೇಷ ತನಿಖೆ ನಡೆಸುತ್ತಿದೆ. ಆದರೆ, ಅಧಿಕಾರಿ ಪ್ರತಿಮಾ ಹತ್ಯೆ ತನಿಖೆಯನ್ನು ತ್ವರಿತವಾಗಿ ಮಾಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಇದರಲ್ಲಿ ನಮ್ಮ ಅಸೋಸಿಯೇಷನ್ ಪಾತ್ರ ಇಲ್ಲ ಎನ್ನುವುದನ್ನು ಪೊಲೀಸ್ ಇಲಾಖೆ ಹೇಳಬೇಕು. ಈ ಹತ್ಯೆಯ ನಂತರ ನಮ್ಮ ಅಸೋಸಿಯೇಷನ್‌ನ್ನು ನೋಡುವ ರೀತಿ ಬದಲಾಗಿದೆ. ಕಲ್ಲುಗಾರಿಕೆಯಂದ್ರೇ ಅಕ್ರಮ ಎನ್ನುವ ರೀತಿ ಜನ ಮಾತಾಡುತ್ತಿದ್ದಾರೆ. ಇದು ಬದಲಾಗಬೇಕು ಅಂದರೆ, ಸಂಪೂರ್ಣ ತನಿಖೆಯಾಗಬೇಕು ಎಂದರು. ಇನ್ನು ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕಿರಣ್ ರಾಜ್ , ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ಇದನ್ನೂ ಓದಿ:ಪ್ರತಿಮಾ ಕೊಲೆ ಕೇಸ್: ಆರೋಪಿ ಕಿರಣ್ ನವೆಂಬರ್ 15 ರವರೆಗೆ ಪೊಲೀಸ್ ಕಸ್ಟಡಿಗೆ
ಶನಿವಾರ ನವೆಂಬರ್ 04 ರ ಸಂಜೆ ಸಂಜೆ 7:45ಕ್ಕೆ ಪ್ರತಿಮಾರನ್ನು ಕಾರು ಚಾಲಕ ಮನೆಗೆ ಡ್ರಾಪ್ ಮಾಡಿದ್ದ. ಬಳಿಕ ಮೊದಲನೆ ಮಹಡಿಯಲ್ಲಿದ್ದ ತಮ್ಮ ಮನೆಗೆ ಪ್ರತಿಮಾ ತೆರಳಿ, ಬಾಗಿಲಿಗೆ ಹಾಕಿದ್ದ ಬೀಗವನ್ನು ತೆಗೆದಿದ್ದು, ಇನ್ನೇನು ಮನೆಯೊಳಗೆ ಕಾಲಿಟ್ಟಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಹಂತಕರು, ಕೂಡಲೇ ಪ್ರತಿಮಾ ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದಿದ್ದಾನೆ. ಜೊತೆಯಲಿದ್ದ ಮತ್ತೋರ್ವ ಕಿರುಚಾಡಲು ಆಗದಂತೆ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದ್ದಾನೆ. ನಂತರ ಪ್ರತಿಮಾರನ್ನು ಮನೆಯೊಳಗೆ ಎಳೆದೊಯ್ದು ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ