ಬೆಂಗಳೂರು: ಸಮುದ್ರಮಟ್ಟದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾದ ಹಿನ್ನೆಲೆ ಮುಂದಿನ ಐದು ದಿನಗಳ ವರೆಗೆ ಕರ್ನಾಟಕದಲ್ಲಿ ಮಳೆಯಾಗಲಿದ್ದು (Karnataka Rain), ಕಾರವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಹವಾಮಾನ ಇಲಾಖೆಯು (Weather Department) ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅದರಂತೆ ದಕ್ಷಿಣ ಕನ್ನಡ (Dakshina Kannada) ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ನೆರೆಯ ಜಿಲ್ಲೆ ಉಡುಪಿಯಲ್ಲೂ (Udupi) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ.ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.
ಇಂದು ಕಾರಾವಳಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿ ರೆಡ್ ಅಲರ್ಟ್ ನೀಡಿದ್ದು, 20 ಸೆಂ ಮೀ ಮಳೆಯಾಗುವ ಸಾಧ್ಯಾತೆ. ದಕ್ಷಿಣ ಒಳನಾಡಿನ ಕೊಡಗು, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು ಉತ್ತರ ಒಳನಾಡಿಗೆ ಯಲ್ಲೋ ಅಲರ್ಟ್ ನೀಡಿದ್ದು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ರಾಯಚೂರಿಗೆ ಮಳೆ ಅಲರ್ಟ್ ನೀಡಲಾಗಿದೆ. ಇನ್ನು ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಂತರ ಜಿಲ್ಲೆಗೆ ಇನ್ನು ಐದು ದಿನ ಭಾರಿ ಮಳೆ ಅಲರ್ಟ್ ನೀಡಿದ್ದು, ತಗ್ಗು ಪ್ರದೇಶದ ಜನರು ಹಾಗೂ ರಾಜಕಾಲುವೆ ಅಕ್ಕಪಕ್ಕದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಹವಮಾನ ಇಲಾಖೆ ಸೂಚನೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಐದು ತಾಲೂಕುಗಳಲ್ಲಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಕಾರವಾರ, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ ತಾಲೂಕುಗಳಲ್ಲಿ ರಜೆ ಘೋಷಣೆ ಮಾಡಿ ಉತ್ತರ ಕನ್ನಡ ಡಿಸಿ ಪ್ರಭುಲಿಂಗ್ ಕವಲಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಬ್ಬರದ ಮಳೆಯಾಗಿದ್ದು, ಭಟ್ಕಳ ನಗರದಲ್ಲಿ ದಾಖಲೆಯ ಮಳೆ ( 112.1 ಮಿ.ಮೀ) ಯಾಗಿದೆ. ಭಟ್ಕಳದ ಬಳಿ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಜಲಾವೃತಗೊಂಡಿದ್ದು, ರಂಗಿನಕಟ್ಟೆ, ಸಂಶುದ್ದೀನ್ ವೃತ್ತ, ಶಿರಾಲಿ ಬಳಿಯೂ ಹೆದ್ದಾರಿ ಜಲಾವೃತಗೊಂಡಿದೆ. ಅದರಂತೆ ಕಾರವಾರ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಕಾರವಾರ ನಗರದ ರೈಲ್ವೆ ನಿಲ್ದಾಣ ರಸ್ತೆ, ಶಿರವಾಡ ರಸ್ತೆ, ಗುನಗಿ ವಾಡ ರಸ್ತೆಗಳು ಕೂಡ ಜಲಾವೃತಗೊಂಡಿದೆ. ನಗರದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಸೋನಾರವಾಡ, ಎಲ್.ಐಸಿ ಕಾಲೋನಿ, ಗುನಿಗಿ ವಾಡದ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 5ರಿಂದ 7ರ ವರೆಗೆ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ. ಹೀಗಾಗಿ ಅಪಾಯಕಾರಿ ಸ್ಥಳಗಳಲ್ಲಿರುವಂತಹ ಜನರಿಗೆ ಸೂಕ್ತ ತಿಳುವಳಿಕೆ ನೀಡಿ ಜನರು ಹಾಗೂ ಜಾನುವಾರುಗಳನ್ನು ಮುಂಚಿತವಾಗಿ ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಬಗ್ಗೆ ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ. ಅಲ್ಲದೆ, ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಇಲಾಖೆಯು ತಿಳಿಸಿರುವುದಾಗಿ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ ಭಾಗದಲ್ಲಿ ಗಾಳಿ ಸಹಿತ ಮಳೆಯಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ 115ರಿಂದ 204 ಮಿ.ಮೀ. ಮಳೆಯಾಗುವ ಸಾಧ್ಯತೆ ಹಿನ್ನೆಲೆ ಮುಂದಿನ ಮೂರು ದಿನಗಳ ಕಾಲ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ಸಾರ್ವಜನಿಕರು, ಪ್ರವಾಸಿಗರು ನದಿಗಳಿಗೆ ಇಳಿಯದಂತೆ ಹಾಗೂ ಹಿರಿಯರು ಮನೆಯಿಂದ ಹೊರಬರದಂತೆ, ಅನಿವಾರ್ಯವಿದ್ದರೆ ಮನೆಯವರ ಜೊತೆ ತೆರಳುವಂತೆ ಸೂಚನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:01 pm, Tue, 4 July 23