Karnataka Rain: ಕರ್ನಾಟಕದಲ್ಲಿ ಇನ್ನೂ 3 ದಿನ ಮಳೆ; ಕರಾವಳಿ ಭಾಗದ ಎಲ್ಲ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್
ರಾಜಾಧಾನಿ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ. ಹಾಗೂ ನಾಳೆ(ಡಿ 13) ಯಲಹಂಕ, ಹೆಚ್ಎಎಲ್ ಏರ್ಪೋರ್ಟ್ ಹೆಚ್ಚು ಮಳೆಯಾಗಲಿದೆ.
ಬೆಂಗಳೂರು: ರಾಜ್ಯದ ಅನೇಕ ಕಡೆ ಮಳೆಯ ಅಬ್ಬರ ಜೋರಾಗಿದೆ(Karnataka Rain). ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಬೆಂಗಳೂರು(Bengaluru Rain) ತಲ್ಲಣಗೊಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಶೀತಗಾಳಿಗೆ ಬೆಂಗಳೂರು ಮಂದಿ ನಡುಗುತ್ತಿದ್ದು, ಇನ್ನೂ ಮೂರು ದಿನ ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಮೂರು ದಿನವೂ ಬಿಟ್ಟು ಬಿಟ್ಟು ಚಳಿ, ಗಾಳಿ, ಮಳೆ ಕಾಡಲಿದೆ ಎಂದು ಹವಾಮಾನ ಇಲಾಖೆ ತಜ್ಞ ಆರ್.ಪ್ರಸಾಸ್ ಮಾಹಿತಿ ನೀಡಿದ್ದಾರೆ.
ಸೈಕ್ಲೋನ್ ಆರ್ಭಟದಿಂದ ಬೆಂಗಳೂರಿನಲ್ಲಿ ಮೈ ಕೊರೆಯೋ ಚಳಿಯಿದೆ. ಅಷ್ಟೇ ಅಲ್ಲ ಮಳೆಗಿಂತ ಚಳಿ, ಗಾಳಿಯೇ ಅತಿ ಹೆಚ್ಚಾಗಿದ್ದು, ಅತ್ಯಂತ ಕಡಿಮೆ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ನಿತ್ಯವೂ ಸುರಿಯುತ್ತಿರುವ ತುಂತುರು ಮಳೆಯಿಂದ ಬೆಂಗಳೂರು ಜನ ಕಂಗಲಾಗಿದ್ದು, ಜಿಟಿ ಜಿಟಿ ಮಳೆಯಲ್ಲಿ ಗಾಡಿ ಓಡಿಸಲು ಸರ್ಕಸ್ ಮಾಡ್ತಿದ್ದಾರೆ. ಅದರಲ್ಲೂ ಆಫೀಸ್ ಗೆ ತೆರಳುವ ವಾಹನ ಸವಾರರ ಪರದಾಟ ಹೇಳತೀರದಾಗಿದೆ. ಇನ್ನು ಸ್ಕೂಲ್, ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ಮಳೆಯ ಕಿರಿಕಿರಿಯಾಗ್ತಿದ್ದು, ಬಹುತೇಕ ಪೋಷಕರು ಮಕ್ಕಳನ್ನ ಸ್ಕೂಲಿಗೆ ಕಳುಹಿಸಲು ಹಿಂದೇಟು ಹಾಕ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಗಾಳಿ-ಮಳೆಯಿರಲಿ, ಕೊರೆಯುವ ಚಳಿಯಿರಲಿ; ಜನರಿಗೆ ಕೆಲಸಕ್ಕೆ ಹೋಗುವುದು ಮಾತ್ರ ತಪ್ಪದು!
ಕರಾವಳಿ ಭಾಗದ ಎಲ್ಲ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ
ನಿನ್ನೆ ದಕ್ಷಿಣ ಒಳನಾಡಿನಲ್ಲಿ 4 ಸೆಂ.ಮೀ ಮಳೆಯಾಗಿದೆ. ತಮಿಳುನಾಡಿನ ಉತ್ತರ ಒಳನಾಡು, ಕರ್ನಾಟಕದ ದಕ್ಷಿಣ ಒಳನಾಡು ಹಾಗು ಉತ್ತರ ಕೇರಳದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಇದರ ಪರಿಣಾಮ ರಾಜ್ಯದಲ್ಲಿ ಮುಂದುವರಿಯಲಿದ್ದು ರಾಜಾಧಾನಿ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ. ಹಾಗೂ ನಾಳೆ(ಡಿ 13) ಯಲಹಂಕ, ಹೆಚ್ಎಎಲ್ ಏರ್ಪೋರ್ಟ್ ಹೆಚ್ಚು ಮಳೆಯಾಗಲಿದೆ. ಇಂದು ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ. ಕರಾವಳಿ ಭಾಗಕ್ಕೆ ಹೆಚ್ಚಿನ ಮಳೆಯ ಅಲರ್ಟ್ ನೀಡಿದ್ದು, ಎಲ್ಲಾ ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಉತ್ತರ ಒಳನಾಡಿನಲ್ಲಿ ಇನ್ನೂ ಮೂರು ದಿನ ಮಳೆ ಇರಲಿದೆ.
ಇನ್ನು ಡಿಸೆಂಬರ್ 15 ವರೆಗೆ ಬೆಂಗಳೂರಿನಲ್ಲಿ ವಿಪರೀತ ಚಳಿ, ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಬೆಂಗಳೂರಿಗರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕ್ತಿದ್ದಾರೆ. ಇದರಿಂದ ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ ಗಳು ಸಹ ಭಣಭಣಗುಡುತ್ತಿದ್ರೆ, ಮತ್ತೊಂದೆಡೆ ಗ್ರಾಹಕರಿಲ್ಲದೇ ಬೀದಿ ಬದಿ ವ್ಯಾಪಾರಿಗಳು ಸಹ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಶೀತಗಾಳಿ, ಮಳೆ: ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ, ಆರೋಗ್ಯ ಸಚಿವರ ಸಲಹೆ ಪಾಲನೆ ಮಾಡುವುದು ಅವಶ್ಯ
ಸೈಕ್ಲೋನ್‌ನಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರು
ಬೆಂಗಳೂರಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ರೂ, ಮಕ್ಕಳು ಶಾಲೆಗೆ ಬರ್ತಿದ್ದಾರೆ. ಸ್ವೆಟರ್, ರೈನ್ ಕೋಟ್ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಬರ್ತಿದ್ದು, ಪೋಷಕರು ಮೀನಾಮೇಷ ಎಣಿಸುತ್ತಲೇ ಮಕ್ಕಳನ್ನ ಕರೆತರುತ್ತಿದ್ದಾರೆ. ಯಾಕಂದ್ರೆ ಮಳೆ, ಶೀತಗಾಳಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಪೋಷಕರು ಆತಂಕದಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸ್ತಿದ್ದಾರೆ. ಹಾಗಾಗಿ ಮಳೆ ನಿಲ್ಲೋವರೆಗೂ 1ರಿಂದ 7ನೇ ತರಗತಿವರೆಗೂ ರಜೆ ನೀಡುವಂತೆ ಪೋಷಕರು ಒತ್ತಾಯಿಸಿದ್ದಾರೆ. ಮಾಂಡೌಸ್ ಸೈಕ್ಲೋನ್ ಅಬ್ಬರದಿಂದ ಶೀತಗಾಳಿ, ಚಳಿ ಹೆಚ್ಚಾಗುತ್ತಿದ್ದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ಚಳಿಯಿಂದಾಗಿ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಕಾಡಲಿದ್ದು, ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಮಾಂಡೌಸ್ ಚಂಡಮಾರುತದಿಂದ ಆರೋಗ್ಯ ಸಮಸ್ಯೆ ತಾಂಡವ ಆಡ್ತಿದೆ. ರಾಜ್ಯದ ಹಲವೆಡೆ ಮಕ್ಕಳು, ಮಹಿಳೆಯರು, ವೃದ್ಧರಿಗೆ ಕೆಮ್ಮು, ನೆಗಡಿ, ಜ್ವರ ಕಾಡುತ್ತಿದ್ದು, ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಬ್ರಿಮ್ಸ್ ಆಸ್ಪತ್ರೆಗೆ ನಿತ್ಯ 1 ಸಾವಿರ ಆಸುಪಾಸಿನಲ್ಲಿ ಬರುತ್ತಿದ್ದ ರೋಗಿಗಳು, ಕಳೆದ ಮೂರು ದಿನಗಳಿಂದ ಹೊರರೋಗಿಗಳ ಸಂಖ್ಯೆ 1,500ಕ್ಕೇರಿದೆ. ಮಕ್ಕಳು, ವಯಸ್ಕರು ಅನಾರೋಗ್ಯದಿಂದ ಆಸ್ಪತ್ರೆ ಸೇರುತ್ತಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:41 pm, Mon, 12 December 22