ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗೆ ಹೆಚ್ಚಳ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

| Updated By: ಸುಷ್ಮಾ ಚಕ್ರೆ

Updated on: Nov 01, 2021 | 10:24 PM

ಸರ್ಕಾರವೇ ಅರ್ಹರನ್ನು ಗುರುತಿಸಿದಾಗ ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ. ಮುಂದಿನ ವರ್ಷದಿಂದ ಸರ್ಕಾರವೇ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತದೆ. ಇನ್ನು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗೆ ಹೆಚ್ಚಳ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಮುಂದಿನ ವರ್ಷದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವುದಿಲ್ಲ. ಹಾಗೇ, ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ 66 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಯ ಮೌಲ್ಯ ಹೆಚ್ಚಬೇಕು. ಹಣದ ಮೊತ್ತ ಇಲ್ಲಿ ಮಹತ್ವದ್ದಲ್ಲ. ಆದರೆ ಸರ್ಕಾರವೇ ಪ್ರಶಸ್ತಿಗೆ ಅರ್ಹರನ್ನು ಗುರುತಿಸುತ್ತದೆ. ಎರಡು ತಿಂಗಳಿಗಿಂತ ಮುಂಚಿತವಾಗಿ ಆಯ್ಕೆ ಸಮಿತಿ ಸಾಧಕರ ಹೆಸರುಗಳನ್ನು ಪಟ್ಟಿ ಮಾಡುತ್ತದೆ. ನಂತರ ಸರ್ಕಾರವೇ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತದೆ. ಇಂಥ ವ್ಯವಸ್ಥೆ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಎಂದರು.

ಸರ್ಕಾರವೇ ಅರ್ಹರನ್ನು ಗುರುತಿಸಿದಾಗ ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ. ಪ್ರಶಸ್ತಿ ಪಡೆಯುವವರ ನೋವು, ಅದರ ಹಿಂದಿರುವ ಕಠಿಣ ಪರಿಶ್ರಮವನ್ನು ಗುರುತಿಸಿ, ಸಮಾಜದಲ್ಲಿ ಸಾಧಕರಿಗೆ ಯಾವುದೇ ಕಷ್ಟವಾಗಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇನ್ನು ಮುಂದೆ ಯಾರೂ ಬಯೋಡೇಟಾ ತಯಾರು ಮಾಡಬೇಕಾದ, ಪತ್ರಿಕಾ ತುಣುಕುಗಳನ್ನು ಜೋಡಿಸಿಟ್ಟು ತೋರಿಸುವ ಅಗತ್ಯವಿಲ್ಲ ಎಂದು ಪ್ರಶಸ್ತಿ ಆಕಾಂಕ್ಷಿಗಳಿಗೆ ಸಿಎಂ ಬೊಮ್ಮಾಯಿ ಕಿವಿಮಾತು ಹೇಳಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಹಳ ಪ್ರತಿಷ್ಠಿತವಾದುದು. ಇದರ ಮೌಲ್ಯ ಹೆಚ್ಚಾಗಬೇಕಾದರೆ ಆಯ್ಕೆ ಪ್ರಕ್ರಿಯೆ ಬದಲಾಗಬೇಕು. ಮಾನದಂಡಗಳ ಪರಿಷ್ಕರಣೆಗೆ ಅಗತ್ಯ ಕ್ರಮ ವಹಿಸಲಾಗುವುದು. ಒಳ್ಳೆತನಕ್ಕೆ ಶಿಕ್ಷಣ ಬೇಕಾಗಿಲ್ಲ, ಮನಸ್ಸು ಒಳ್ಳೆಯದಿರಬೇಕು. ಪೌರಕಾರ್ಮಿಕರಿಗೆ ದೊಡ್ಡ ಪ್ರಶಸ್ತಿ ನೀಡಿದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತಾರೆ. ಆಯ್ಕೆ ಶೋಧನೆಯಿಂದಾಗಬೇಕೇ ಹೊರತು ಅರ್ಜಿಗಳಿಂದ ಅಲ್ಲ ಎಂದರು.

ಪ್ರತಿಭೆಗೆ ವಯಸ್ಸಿನ ಗಡಿ ಮಿತಿಗಳಿಲ್ಲ:
60 ವರ್ಷದ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಬೇಕೆಂದು ಈ ಹಿಂದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಪ್ರತಿಭೆ ಎನ್ನುವುದು ವಯಸ್ಸಿಗೆ ಸಂಬಂಧಿಸಿದ್ದಲ್ಲ. ತಂತ್ರಜ್ಞಾನದ ಕಾಲದಲ್ಲಿ ಅದೇಷ್ಟೋ ಮಕ್ಕಳು ಕೂಡ ಹಲವು ಕ್ಷೇತ್ರಗಳಲ್ಲಿ ಪ್ರತಿಭಾವಂತರಾಗಿದ್ದಾರೆ. ಕನ್ನಡ ನಾಡಿನಲ್ಲಿ ಎಷ್ಟು ನೀರಜ್ ಛೋಪ್ರಾರಂಥವರು ಇದ್ದಾರೋ ಗೊತ್ತಿಲ್ಲ. ಅವರೊಬ್ಬರಿಗೆ ಒಲಂಪಿಕ್ಸ್ ಚಿನ್ನದ ಪದಕ ದೊರೆತಿರುವುದರಿಂದ ಇಡೀ ದೇಶಕ್ಕೆ ಸ್ಫೂರ್ತಿ ದೊರೆತಿದೆ ಎಂದು ಅಭಿಪ್ರಾಯ ಪಟ್ಟ ಮುಖ್ಯಮಂತ್ರಿಗಳು ವಯಸ್ಸನ್ನು ಕಡಿಮೆ ಮಾಡುವ ಕುರಿತು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿ ಅನುಮತಿ ಪಡೆಯುವ ಕೆಲಸವನ್ನು ಮುಂದಿನ ವರ್ಷ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಕನ್ನಡ ಪರ್ವ ಶುರುವಾಗಲಿ; ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ವೇಳೆ ಸಿಎಂ ಬೊಮ್ಮಾಯಿ ಕರೆ

ಸಮುದ್ರದಾಳದಲ್ಲಿ ಹಾರಾಡಿದ ಕನ್ನಡ ಧ್ವಜ; ನೇತ್ರಾಣಿ ಅಡ್ವೇಂಚರ್ ಸಂಸ್ಥೆಯಿಂದ ವಿಶೇಷ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ