
ಬೆಂಗಳೂರು, ಜನವರಿ 31: ಪ್ರೊ.ಎಂ.ಗೋವಿಂದ ರಾವ್ ಅಧ್ಯಕ್ಷತೆಯ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ಅಂತಿಮ ವರದಿಯನ್ನು ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಿಸಿದೆ. ಡಾ. ಡಿ.ಎಂ. ನಂಜುಂಡಪ್ಪನವರ ಪ್ರಾದೇಶಿಕ ಅಸಮತೋಲನ ನಿವಾರಣಾ ವರದಿ ಹಳೆಯದಾಗಿದ್ದ ಕಾರಣ, ರಾಜ್ಯ ಸರ್ಕಾರವು 233 ತಾಲ್ಲೂಕುಗಳಲ್ಲಿ ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಿ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ ಗುರುತಿಸಲು ಆರ್ಥಿಕ ತಜ್ಞ ಪ್ರೊ. ಗೋವಿಂದ ರಾವ್ ಅವರನ್ನು ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಳಿಸಿ 2024ರ ಮಾರ್ಚ್ನಲ್ಲಿ ಆದೇಶಿಸಿತ್ತು.
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಅಧ್ಯಯನ ಮಾಡಲು ಮತ್ತು ಅದನ್ನು ನಿವಾರಿಸುವ ನಿಟ್ಟಿನಲ್ಲಿ 2000ನೇ ಇಸವಿಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರ್ಕಾರ ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ರಚಿಸಿತ್ತು. ಈ ಸಮಿತಿಯು 2002 ರಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿ, ರಾಜ್ಯದ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳು ಎಂದು ಗುರುತಿಸಿತ್ತು. ಅತಿ ಹೆಚ್ಚು ಹಿಂದುಳಿದ (39), ಹೆಚ್ಚು ಹಿಂದುಳಿದ (40) ಮತ್ತು ಹಿಂದುಳಿದ (35) ಎಂದು ಮೂರು ವರ್ಗಗಳಾಗಿ ವಿಂಗಡಿಸಿತ್ತು.
ಇದನ್ನೂ ಓದಿ: ಸರ್ಕಾರದಿಂದ ಮಹತ್ವದ ಆದೇಶ; ಕರ್ನಾಟಕ ನೌಕರರು ಈ ಬಟ್ಟೆ ಧರಿಸುವುದು ಕಡ್ಡಾಯ
ಆದರೆ ಈ ವರದಿ ಸುಮಾರು 22 ವರ್ಷಗಳಷ್ಟು ಹಳೆಯದ್ದಾಗಿದೆ ಎಂಬ ಕಾರಣಕ್ಕೆ ಈ ಬಗ್ಗೆ ಅಧ್ಯಯನಕ್ಕೆ 2024ರಲ್ಲಿ ಪ್ರೊ. ಎಂ. ಗೋವಿಂದ ರಾವ್ ಸಮಿತಿ ರಚನೆ ಮಾಡಲಾಗಿತ್ತು. ನಂಜುಂಡಪ್ಪ ಸಮಿತಿಯ ಶಿಫಾರಸುಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸುವುದು ಮತ್ತು ಪ್ರಸ್ತುತ ಹಿಂದುಳಿದಿರುವ ತಾಲ್ಲೂಕುಗಳನ್ನು ಅಭಿವೃದ್ಧಿಪಡಿಸಲು ಹೊಸ ಮಾನದಂಡಗಳನ್ನು ರೂಪಿಸುವುದು ಹೊಸ ಸಮಿತಿಯ ಜವಾಬ್ದಾರಿಯಾಗಿತ್ತು. ಹೀಗಾಗಿ ಸಮಿತಿಯು ತನ್ನ ಅಂತಿಮ ವರದಿಯನ್ನು ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ವೇಳೆ ಸಚಿವರಾದ ಈಶ್ವರ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸಮಿತಿ ಸದಸ್ಯರಾದ ಎಸ್.ಟಿ.ಬಾಗಲಕೋಟೆ, ಸೂರ್ಯನಾರಾಯಣ ರಾವ್, ಸಂಗೀತ ಎನ್.ಕೆ., ಎಲ್.ಕೆ.ಅತೀಕ್, ಸದಸ್ಯ ಕಾರ್ಯದರ್ಶಿ ವಿಶಾಲ್ ಉಪಸ್ಥಿತರಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.