AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯನಗರ: ತ್ರಿವಳಿ ಕೊಲೆಯ ಕಾರಣ ಬಯಲು, ಲವ್ವಿಡವ್ವಿಯಿಂದ ತಂಗಿ ಗರ್ಭಿಣಿಯಾದ್ದು ತಿಳಿದು ಕುಟುಂಬವನ್ನೇ ಮುಗಿಸಿದ ಅಣ್ಣ!

ವಿಜಯನಗರದ ಕೊಟ್ಟೂರಿನಲ್ಲಿ ನಡೆದಿದ್ದ ಭಯಾನಕ ಕೊಲೆ ಪ್ರಕರಣದ ಅಸಲಿ ಹಾಗೂ ರೋಚಕ ಕಾರಣ ಇದೀಗ ಬಯಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಆರೋಪಿ ಅಕ್ಷಯ್ ಕೊಲೆ ಮಾಡಿದ್ದು ಮೂವರನ್ನಲ್ಲ, ಬದಲಿಗೆ ನಾಲ್ವರನ್ನು ಎಂಬುದು ಬೆಳಕಿಗೆ ಬಂದಿದೆ. ಜತೆಗೆ, ಇದು ದ್ವೇಷದ ಕೊಲೆಯಲ್ಲ, ಮರ್ಯಾದಾ ಹತ್ಯೆ ಎಂಬುದೂ ಗೊತ್ತಾಗಿದೆ. ‘ಕೊಟ್ಟೂರು ಕ್ರೂರಿ’ಯ ಮಾರ್ಯದೆ ಹತ್ಯೆಯ ರೋಚಕ ಸತ್ಯ ಸಂಗತಿಗಳು ಇಲ್ಲಿವೆ.

ವಿಜಯನಗರ: ತ್ರಿವಳಿ ಕೊಲೆಯ ಕಾರಣ ಬಯಲು, ಲವ್ವಿಡವ್ವಿಯಿಂದ ತಂಗಿ ಗರ್ಭಿಣಿಯಾದ್ದು ತಿಳಿದು ಕುಟುಂಬವನ್ನೇ ಮುಗಿಸಿದ ಅಣ್ಣ!
ಸಾಂದರ್ಭಿಕ ಚಿತ್ರ (ಎಡ) ಹಾಗೂ ಆರೋಪಿ ಅಕ್ಷಯ್Image Credit source: tv9
ಗಣಪತಿ ಶರ್ಮಾ
|

Updated on: Feb 01, 2026 | 7:04 AM

Share

ವಿಜಯನಗರ, ಫೆಬ್ರವರಿ 1: ವಿಜಯನಗರ (Vijayanagara) ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ಭೀಕರ ತ್ರಿವಳಿ ಕೊಲೆ ಪ್ರಕರಣದ ಹಿಂದಿನ ಅಚ್ಚರಿಯ ಹಾಗೂ ಆಘಾತಕಾರಿ ಸತ್ಯವನ್ನು ಬೆಂಗಳೂರು (Bangalore) ಪೊಲೀಸರು ಬಯಲಿಗೆಳೆದಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಕ್ಷಯ್, ತಂಗಿಯ ಪ್ರೇಮ ಪ್ರಕರಣ ಮತ್ತು ಆಕೆ ಗರ್ಭಿಣಿಯಾಗಿರುವುದು ತಿಳಿದು ಮರ್ಯಾದಾ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ತಂಗಿಗೆ ಬೆಂಬಲ ನೀಡಿದ ತಂದೆ, ತಾಯಿಯನ್ನೂ ಕೊಲೆ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿರುವ ಅಕ್ಷಯ್, ಇದು ಕೇವಲ ದ್ವೇಷದ ಕೊಲೆಯಲ್ಲ, ಕುಟುಂಬದ ಗೌರವ ಉಳಿಸಿಕೊಳ್ಳಲು ಮಾಡಿದ ಕೃತ್ಯ ಎಂದು ಹೇಳಿಕೊಂಡಿದ್ದಾನೆ.

ತಂಗಿ ಅಮೃತ (18) ಮೂರು ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದ ನಂತರ ಆತ ತೀವ್ರ ಕೋಪಗೊಂಡಿದ್ದ. ತಂಗಿಯ ಪ್ರಿಯತಮ ಅನ್ಯ ಸಮುದಾಯಕ್ಕೆ ಸೇರಿದವನಾಗಿರುವುದೂ ಅಕ್ಷಯ್ ಕೋಪಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪಿಯುಸಿ ಓದುತ್ತಿದ್ದ ಹುಡುಗನೊಂದಿಗೆ ಲವ್: ಮೊಬೈಲ್ ಪರಿಶೀಲನೆಯಿಂದ ಹುಟ್ಟಿದ ಅನುಮಾನ

ನಾಲ್ಕು ತಿಂಗಳ ಹಿಂದೆ ಅಕ್ಷಯ್ ತಂಗಿಯ ಮೊಬೈಲ್ ಪರಿಶೀಲಿಸಿದ ವೇಳೆ ಪಿಯುಸಿ ಓದುತ್ತಿದ್ದ ಯುವಕನೊಂದಿಗೆ ಅವಳು ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಬಳಿಕ ಆ ಯುವಕನಿಗೆ ಕರೆ ಮಾಡಿದ ಅಕ್ಷಯ್, ಇಬ್ಬರ ನಡುವೆ ಪ್ರೇಮ ಸಂಬಂಧ ಇರುವುದನ್ನು ತಿಳಿದುಕೊಂಡಿದ್ದ. ಇದರಿಂದ ಕೋಪಗೊಂಡ ಅಕ್ಷಯ್ ತಂಗಿಗೆ ಹಲ್ಲೆ ಮಾಡಿ ಬೆದರಿಸಿದ್ದಾನೆ. ಬಳಿಕ ಅಮೃತ ‘ನಾನು ಪ್ರೀತಿ ಮಾಡುವುದಿಲ್ಲ’ ಎಂದು ಕ್ಷಮೆ ಕೇಳಿದ್ದರೂ, ಜನವರಿ 26ರಂದು ಅವಳು ಗರ್ಭಿಣಿಯಾಗಿದ್ದಾಳೆ ಎಂಬ ವಿಚಾರ ಹೊರಬಿದ್ದಿದೆ.

ತಂಗಿ ಪರ ವಹಿಸಿದ್ದಕ್ಕೆ ತಂದೆ-ತಾಯಿ ಮೇಲೆ ಸಿಟ್ಟು

ಈ ವಿಷಯವನ್ನು ತಾಯಿ ಅಕ್ಷಯ್‌ಗೆ ತಿಳಿಸಿದ್ದರಿಂದ ಆತ ಇನ್ನಷ್ಟು ಕೋಪಗೊಂಡಿದ್ದಾನೆ. ಗರ್ಭಪಾತ ಮಾಡಿಸೋಣ ಎಂದು ಅಕ್ಷಯ್ ಹೇಳಿದ್ದರೂ, ತಂದೆ-ತಾಯಿ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ತನ್ನ ಮಾತಿಗೆ ಬೆಲೆ ಇಲ್ಲವೆಂದು ಭಾವಿಸಿದ ಅಕ್ಷಯ್, ತಂಗಿಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಾನೆ.

ಒಂದೊಂದಾಗಿ ನಡೆಯಿತು ಭೀಕರ ಹತ್ಯೆ

ಪೊಲೀಸ್ ತನಿಖೆ ವೇಳೆ ದೊರೆತಿರುವ ಮಾಹಿತಿ ಪ್ರಕಾರ, ಜನವರಿ 26ರಂದು ಮೊದಲು ಅಕ್ಷಯ್ ತನ್ನ ತಾಯಿಯನ್ನು ಕೊಂದಿದ್ದಾನೆ. ಕೊಲೆ ಬಳಿಕ ಸ್ನಾನ ಮಾಡಿ ರಕ್ತಸಿಕ್ತ ಬಟ್ಟೆಗಳನ್ನು ನಾಶಪಡಿಸಿದ್ದಾನೆ. ಸಂಜೆ ತಂಗಿ ಮನೆಗೆ ಬಂದಾಗ ಆಕೆಯನ್ನೂ ಹತ್ಯೆ ಮಾಡಿ, ತಾಯಿಯ ಮೃತದೇಹದ ಪಕ್ಕದಲ್ಲೇ ಮಲಗಿಸಿದ್ದಾನೆ. ಮತ್ತೆ ಸ್ನಾನ ಮಾಡಿ ಅದೇ ಬಟ್ಟೆ ಧರಿಸಿದ್ದಾನೆ.

ರಾತ್ರಿ 10.30ರ ಸುಮಾರಿಗೆ ಕುಡಿದು ಮನೆಗೆ ಬಂದ ತಂದೆ ಸೋಫಾದ ಮೇಲೆ ಕೂತಿದ್ದಾಗ, ಅಕ್ಷಯ್ ಅವರ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾನೆ. ತಂದೆಯ ಮೃತದೇಹವನ್ನೂ ತಾಯಿ ಹಾಗೂ ತಂಗಿಯ ಪಕ್ಕ ಇಟ್ಟಿದ್ದಾನೆ. ನಂತರ ಆ ಕೊಠಡಿಗೆ ಬೀಗ ಹಾಕಿ, ಮತ್ತೆ ಸ್ನಾನ ಮಾಡಿ ಬೇರೆ ಬಟ್ಟೆ ಧರಿಸಿದ್ದಾನೆ.

ಸಾಕ್ಷಿ ನಾಶಕ್ಕೆ ಸಂಚು, ಮಾವನ ಸಹಾಯ

ಮೂರು ಕೊಲೆಗಳ ಬಳಿಕ ರಾತ್ರಿಯಿಡೀ ಟಿವಿ ನೋಡುತ್ತಾ, ತಪ್ಪಿಸಿಕೊಳ್ಳುವ ಮಾರ್ಗಗಳ ಬಗ್ಗೆ ಯೋಚಿಸಿದ್ದಾನೆ. ಬೆಳಗ್ಗೆ ತಾಯಿ ಹಾಗೂ ತಂಗಿಯ ಮೊಬೈಲ್‌ಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದ ಅಕ್ಷಯ್ (ಆತನ ಮೊಬೈಲ್ ಮನೆಯಲ್ಲೇ ಬಿಟ್ಟುಬಂದಿದ್ದ), ಜಯದೇವ ಆಸ್ಪತ್ರೆ ಬಳಿ ಫೋಟೋ ತೆಗೆದು ತನ್ನ ಮೊಬೈಲ್​ಗೆ ಕಳುಹಿಸಿದ್ದಾನೆ. ನಂತರ ಆ ಮೊಬೈಲ್‌ಗಳನ್ನು ಆಸ್ಪತ್ರೆ ಸಮೀಪದ ಡಸ್ಟ್‌ಬಿನ್‌ನಲ್ಲಿ ಎಸೆದಿದ್ದಾನೆ.

ಶವಗಳನ್ನು ಹೂತು ‘ಮಿಸ್ಸಿಂಗ್’ ನಾಟಕವಾಡಲು ತಂತ್ರ

ಈ ಸಂದರ್ಭದಲ್ಲಿ ಅಕ್ಷಯ್ ತನ್ನ ಮಾವ ವಸಂತನನ್ನು ಭೇಟಿ ಮಾಡಿ ಎಲ್ಲ ವಿಚಾರ ತಿಳಿಸಿದ್ದಾನೆ. ಶವಗಳನ್ನು ಹೂತು ‘ಮಿಸ್ಸಿಂಗ್’ ನಾಟಕ ಆಡೋಣ ಎಂಬ ಐಡಿಯಾ ಮಾವನೇ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ ಜನವರಿ 27ರ ರಾತ್ರಿ ಕೊಟ್ಟೂರಿಗೆ ವಾಪಸ್ ಆಗಿದ್ದ ಅಕ್ಷಯ್, ಟೈಲ್ಸ್ ಕಟರ್ ಹಾಗೂ ಡ್ರಿಲ್ಲಿಂಗ್ ಯಂತ್ರ ತರಿಸಿ, 5×5 ಅಳತೆಯ ಗುಂಡಿ ತೋಡಿ ಮೂವರ ಶವಗಳನ್ನು ಹೂತಿದ್ದಾನೆ.

ವಿಫಲವಾಯ್ತು ಮಿಸ್ಸಿಂಗ್ ನಾಟಕ

ಜನವರಿ 29ರಂದು ಅಕ್ಷಯ್ ಮಾವನೊಂದಿಗೆ ತಿಲಕನಗರ ಪೊಲೀಸ್ ಠಾಣೆಗೆ ಬಂದು ತಂದೆ-ತಾಯಿ-ತಂಗಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾನೆ. ಆದರೆ ಬೆಂಗಳೂರು ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ನಾಟಕ ಬಯಲಾಗಿದ್ದು, ಕೊನೆಗೆ ಅಕ್ಷಯ್ ಮತ್ತು ವಸಂತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ವಿಜಯನಗರ ತ್ರಿವಳಿ ಕೊಲೆಗೆ ಟ್ವಿಸ್ಟ್​​: ಮೂವರನ್ನ ಮನೆಯಲ್ಲೇ ಹೂತುಹಾಕಿದ್ದ, ಲವ್​​ ಮ್ಯಾಟರ್​ ಹತ್ಯೆಗೆ ಕಾರಣವಾಯ್ತಾ?

ಸದ್ಯ ಕೊಲೆ, ಸಾಕ್ಷಿ ನಾಶ ಸೇರಿದಂತೆ ಹಲವು ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತಿಲಕನಗರ ಪೊಲೀಸರು ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಶೀಘ್ರವೇ ಪ್ರಕರಣವನ್ನು ಕೊಟ್ಟೂರು ಪೊಲೀಸರಿಗೆ ವರ್ಗಾವಣೆ ಮಾಡಲಾಗುತ್ತದೆ. ತಂಗಿ ನಿಜವಾಗಿಯೂ ಗರ್ಭಿಣಿಯಾಗಿದ್ದಳೇ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿಯಬೇಕಿದೆ. ಆಕೆ ಅಪ್ರಾಪ್ತೆಯಾಗಿದ್ದರೆ ಆಕೆಯ ಪ್ರಿಯತಮನ ವಿರುದ್ಧವೂ ಫೋಕ್ಸೋ ಪ್ರಕರಣವೂ ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More