Karnataka Covid Case: ತೊಲಗಿದ ಮಹಾಮಾರಿ ಕೊರೊನಾ, ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಶೂನ್ಯ ಕೇಸ್

| Updated By: Digi Tech Desk

Updated on: Jul 24, 2023 | 11:46 AM

ಕರ್ನಾಟಕ ರಾಜ್ಯದಲ್ಲಿ ಭಾನುವಾರ 24 ಗಂಟೆಗಳಲ್ಲಿ ಯಾವುದೇ ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Karnataka Covid Case: ತೊಲಗಿದ ಮಹಾಮಾರಿ ಕೊರೊನಾ, ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಶೂನ್ಯ ಕೇಸ್
ಕೊರೊನಾ
Follow us on

ಬೆಂಗಳೂರು, ಜುಲೈ 24: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ, ಭೂಮಿ ಮೇಲೆ ನರಕದ ಪರಿಚಯ ಮಾಡಿಸಿದ ಮಹಾಮಾರಿ ಕೊರೊನಾ(Coronavirus) ಸದ್ಯ ತನ್ನ ಆರ್ಭಟ ನಿಲ್ಲಿಸಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಶೂನ್ಯವಾಗುತ್ತಿದೆ(Karnataka Coronavirus Cases). ಕರ್ನಾಟಕ ರಾಜ್ಯದಲ್ಲಿ ಭಾನುವಾರ 24 ಗಂಟೆಗಳಲ್ಲಿ ಯಾವುದೇ ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(Health and Family Welfare Department) ದೈನಂದಿನ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದೆ.

ಗುಪ್ತಗಾಮಿನಿಯಂತೆ ಜನರ ದೇಹ ಹೊಕ್ಕಿ ಜೀವ ಹಿಂಡುತ್ತಿದ್ದ ಕೊರೊನಾ ಸದ್ಯ ಕಡಿಮೆಯಾಗಿದೆ. ರಾಜ್ಯದಲ್ಲೀಗ ಕೇವಲ 9 ಸಕ್ರಿಯ ಕೋವಿಡ್-19 ಪ್ರಕರಣಗಳಿವೆ. ದೈನಂದಿನ ಪರೀಕ್ಷಾ ಪಾಸಿಟಿವ್ ದರವು 0% ಆಗಿದ್ದು, ವಾರದ ಕೊರೊನಾ ಪರಿಕ್ಷೆಯ ಪಾಸಿಟಿವ್ ದರವು 0.14% ಇದೆ. ಕಳೆದ 24 ಗಂಟೆಗಳಲ್ಲಿ ನಾಲ್ವರು ಚೇತರಿಸಿಕೊಂಡಿದ್ದಾರೆ. ಈ ತಿಂಗಳ ಜುಲೈ 11 ರಂದು ಕೂಡ ರಾಜ್ಯದಲ್ಲಿ ಶೂನ್ಯ ಕೋವಿಡ್ -19 ಸೋಂಕುಗಳು ವರದಿಯಾಗಿದ್ದವು. ಜೂನ್‌ನಲ್ಲಿ ದಿನಕ್ಕೆ 1 ರಿಂದ 25 ಸೋಂಕುಗಳು ಕಂಡು ಬರುತ್ತಿದ್ದವು.

ಇದನ್ನೂ ಓದಿ: ಕೊರೊನಾ ಎಫೆಕ್ಟ್​.. 2ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಠಿಕತೆ: ಶಾಕಿಂಗ್​ ರಿಪೋರ್ಟ್​ ಬಹಿರಂಗ

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಪ್ರತಿ ದಿನ ಒಂದೊಂದು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಸದ್ಯ ಜುಲೈ 23ರ ಭಾನುವಾರದಿಂದ ಸೋಮವಾರದ ವರೆಗಿನ 24 ಗಂಟೆಗಳ ಅವಧಿಯಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕೇವಲ 9 ಪ್ರಕರಣಗಳು ಮಾತ್ರ ಇದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಸೋಂಕಿತರು ಕೂಡ ಡಿಸ್ಚಾರ್ಜ್ ಆಗಲಿದ್ದು ರಾಜ್ಯದಲ್ಲಿ ಕೊರೊನಾ ಹೆಸರು ಅಳಿಸಿಹೋಗಲಿದೆ.

ಕೋವಿಡ್ 19 ಅಥವಾ ನಾವೆಲ್ ಕೊರೊನಾ ವೈರಸ್ ಎಂದೂ ಕರೆಯಲ್ಪಡುವ ಈ ವೈರಸ್ ಮೊದಲಿಗೆ ಚೈನಾದ ವುಹಾನ್ ನಗರದಲ್ಲಿ ಡಿಸೆಂಬರ್ 2019ರಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಕಾಯಿಲೆ ಎಂದು ಗುರುತಿಸಿ 11 ಮಾರ್ಚ್ 2020 ರಂದು ಘೋಷಿಸಿತು. 2020ರಲ್ಲೇ ಭಾರತಕ್ಕೂ ಕಾಲಿಟ್ಟ ಕೊರೊನಾ ಕೇರಳದಲ್ಲಿ ತನ್ನ ಮೊದಲ ಖಾತೆ ತೆರೆಯಿತು. ಬಳಿಕ ಕಲಬುರಗಿಯಲ್ಲಿ ಮೊದಲ ಕೊರೊನಾ ಸೋಂಕಿತ ವ್ಯಕ್ತಿಯ ಸಾವು ಸಂಭವಿಸಿತ್ತು. ಹೀಗೆ ದಿನೇ ದಿನೇ ತನ್ನ ಕಬಂಧಬಾಹುಗಳನ್ನು ಚಾಚಿದ್ದ ಕೊರೊನಾಗೆ ಬಡವರು, ಶ್ರೀಮಂತರು ಎನ್ನದೇ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವುದಕ್ಕೂ ಸಮಸ್ಯೆ ಉಂಟಾಗುವಷ್ಟು ಶವಗಳ ಸರತಿ ಪ್ರತಿ ದಿನ ಇರ್ತಿತ್ತು. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಚಿಕಿತ್ಸೆ ಪಡೆಯುವುದೂ ಕಷ್ಟ ಆಗಿತ್ತು. ಉಸಿರಾಟದ ಸಮಸ್ಯೆಯಾಗಿ ಜೀವ ಹಿಂಡಿ ಪ್ರಾಣ ತೆಗೆಯುತ್ತಿದ್ದ ಕೊರೊನಾ ಸದ್ಯ ನಶಿಸುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 10:48 am, Mon, 24 July 23