ಕೋಗಿಲು ನಿರಾಶ್ರಿತರ ಮೇಲೆ ಬಹುದೊಡ್ಡ ಅನುಮಾನ: ಒತ್ತುವರಿದಾರರ ಜನ್ಮಜಾಲಾಡಲು ಮುಂದಾದ ಜಿಲ್ಲಾಡಳಿತ, ಪೊಲೀಸ್

ಕೋಗಿಲು ಲೇಔಟ್ ಒತ್ತುವರಿ ತೆರವು ಬಳಿಕ ನಿರಾಶ್ರಿತರಿಗೆ ಮನೆ ನೀಡಲು ಮುಂದಾಗಿರುವ ಸರ್ಕಾರಕ್ಕೀಗ ಬಾಂಗ್ಲಾದೇಶ ಮೂಲದವರ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿ ಪರಿಶೀಲನೆಗೆ ಮುಂದಾಗಿವೆ. ನಕಲಿ ಆಧಾರ್, ಮತದಾರರ ಚೀಟಿಗಳ ಬಳಕೆಯ ಕುರಿತು ಕಟ್ಟುನಿಟ್ಟಿನ ತನಿಖೆ ನಡೆಯಲಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಪುನರ್ವಸತಿ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಕೋಗಿಲು ನಿರಾಶ್ರಿತರ ಮೇಲೆ ಬಹುದೊಡ್ಡ ಅನುಮಾನ: ಒತ್ತುವರಿದಾರರ ಜನ್ಮಜಾಲಾಡಲು ಮುಂದಾದ ಜಿಲ್ಲಾಡಳಿತ, ಪೊಲೀಸ್
ಕೋಗಿಲು ಬಡಾವಣೆ
Edited By:

Updated on: Jan 02, 2026 | 11:04 AM

ಬೆಂಗಳೂರು, ಜನವರಿ 2: ಕೋಗಿಲು ಲೇಔಟ್‌ನಲ್ಲಿನ (Kogilu Layout) ಸರ್ಕಾರಿ ಜಾಗ ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪುನರ್ವಸತಿ ಒದಗಿಸುವ ಕರ್ನಾಟಕ (Karnataka) ಕಾಂಗ್ರೆಸ್ ಸರ್ಕಾರದ ಯೋಜನೆಯ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವವರ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಪರಿಶೀಲನೆಗೆ ಮುಂದಾಗಿವೆ. ಪುನರ್ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ವಸೀಮ್ ಲೇಔಟ್ ಹಾಗೂ ಫಕೀರ್ ಲೇಔಟ್‌ನ ಸಂತ್ರಸ್ತರ ಪೈಕಿ ಕೆಲವರು ಬಾಂಗ್ಲಾದೇಶ (Bangladesh) ಮೂಲದವರಾಗಿರಬಹುದೆಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆ ಜಿಲ್ಲಾಡಳಿತವು ಪುನರ್ವಸತಿ ನೀಡುವ ಮುನ್ನ ಪೊಲೀಸ್ ವೇರಿಫಿಕೇಶನ್ ನಡೆಸಲು ತೀರ್ಮಾನಿಸಿದೆ.

ಈ ಸಂಬಂಧ ಪೊಲೀಸ್ ಇಲಾಖೆಗೆ ಅಧಿಕೃತ ಪತ್ರ ಬರೆಯಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಅರ್ಜಿ ಸಲ್ಲಿಸಿರುವ ಸಂತ್ರಸ್ತರ ಮೂಲ ಎಲ್ಲಿ ಎಂಬುದನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗುತ್ತದೆ ಎನ್ನಲಾಗಿದೆ.

ಜಿಲ್ಲಾಡಳಿತದಿಂದ ದಾಖಲೆಗಳ ಕೂಲಂಕಷ ಪರಿಶೀಲನೆ

ಇದರ ಜೊತೆಗೆ ಪೊಲೀಸ್ ವೇರಿಫಿಕೇಶನ್‌ಗೆ ಮುನ್ನವೇ ಜಿಲ್ಲಾಡಳಿತದಿಂದ ದಾಖಲೆಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿದೆ. ಅರ್ಜಿದಾರರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ನಕಲಿ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಬಳಕೆ ಮಾಡಿಕೊಂಡಿರುವವರು ಇದ್ದಾರೆಯೇ ಎಂಬುದನ್ನೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕಾನೂನುಬದ್ಧವಾಗಿ ಅರ್ಹರಾದವರಿಗೆ ಮಾತ್ರ ಪುನರ್ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಈ ಪರಿಶೀಲನೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಗಿಲು ನಿರಾಶ್ರಿತರಿಗೆ ತಕ್ಷಣವೇ ಮನೆ ಸಿಗೋದು ಡೌಟ್! ಎದುರಾಯ್ತು ದೊಡ್ಡ ತೊಡಕು

ಕೋಗಿಲು ಬಡಾವಣೆ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರತಿಪಕ್ಷ ಬಿಜೆಪಿ ನಿಯೋಗ ಕೂಡ, ಸ್ಥಳದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೆ, ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವ ಬಗ್ಗೆಯೂ ಸಂಶಯ ವ್ಯಕ್ತಪಡಿಸಿತ್ತು. ಮತ್ತೊಂದೆಡೆ, ರಾಜೀವ್ ಗಾಂಧಿ ವಸತಿ ಸ್ಕೀಂನ ಆಶ್ರಯ ಯೋಜನೆ ಅಡಿ ಮನೆಗಳನ್ನು ವಿತರಿಸುವುದಕ್ಕೆ ಅಧಿಕಾರಿಗಳಿಗೆ ನಿಯಮಗಳ ತೊಡಕು ಎದುರಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೋಗಿಲು ಬಡಾವಣೆಯ ನಿವಾಸಿಗಳ ಮೂಲ ಪತ್ತೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ