ಬೆಂಗಳೂರು: ಉಪಚುನಾವಣೆಗೂ, ಶ್ರೀಗಳ ಜತೆ ಸಭೆಗೂ ಸಂಬಂಧವಿಲ್ಲ. ಉಪಚುನಾವಣೆ ಇದೆ ಅಂತ ಊಟ ಮಾಡಲ್ವಾ? ಶ್ರೀಗಳು ಬರುತ್ತೇವೆ ಅಂದಾಗ ಬೇಡವೆಂದು ಹೇಳಕ್ಕಾಗುತ್ತಾ? ಸ್ವಾಮೀಜಿಗಳು ಬಂದಿರೋದೇ ನಮ್ಮ ಸೌಭಾಗ್ಯ. ಇದರಲ್ಲೂ ರಾಜಕಾರಣ ಹುಡುಕಿದ್ರೆ ಏನೂ ಮಾಡಲಾಗಲ್ಲ ಎಂದು ಸ್ವಾಮೀಜಿಗಳ ಜತೆ ಸಭೆ ಬಳಿಕ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ನಾಳೆಯಿಂದ ಎರಡು ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳ ಜೊತೆಗೆ ಸಚಿವ ಕೆ.ಎಸ್. ಈಶ್ವರಪ್ಪ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಇಂದು (ಅಕ್ಟೋಬರ್ 23) ಸಭೆ ನಡೆಸಲಾಗಿದೆ. ಆ ಬಳಿಕ ಅವರು ಮಾತನಾಡಿದ್ದಾರೆ.
ನನ್ನ ಪಾಲಿನ ಸೌಭಾಗ್ಯ ಇಂದು ದೇವರು ಬಂದ ಹಾಗೆ ಎಲ್ಲಾ ಸ್ವಾಮೀಜಿಗಳು ಬಂದಿದ್ದಾರೆ. ಸರ್ಕಾರ ಮಾಡುವ ಕೆಲಸವನ್ನು ಈ ಮಠಾಧೀಶರು ಮಾಡುತ್ತಿದ್ದಾರೆ. ನಾವು ಸರ್ಕಾರ ಏನೆಲ್ಲಾ ಸಹಾಯ, ಸೌಲಭ್ಯಗಳನ್ನು ಮಾಡಬಹದು ಎಂದು ಚರ್ಚೆ ಮಾಡುತ್ತೇವೆ. ಅಗತ್ಯವಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಕೂಡ ಚರ್ಚೆ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳ ಜೊತೆ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಸಭೆಯಲ್ಲಿ ಸ್ವಾಮೀಜಿಗಳ ಅಭಿಪ್ರಾಯವನ್ನು ಆಲಿಸಿದ್ದೇವೆ. ಎಲ್ಲಾ ಸಮುದಾಯಕ್ಕೆ ಶಿಕ್ಷಣ, ಸೌಲಭ್ಯ ಸಿಗಬೇಕು. ಅತ್ಯಂತ ಹಿಂದುಳಿದ ಸಮುದಾಯದವರು ಇದ್ದೇವೆ. ಹಿಂದುಳಿದ ವರ್ಗಗಳಿಗೆ ಇರುವ ಸೌಲಭ್ಯ ತಲುಪಿಸಬೇಕು. ಸಮಾಜದ ಮಠ ಮಂದಿರಗಳ ಸಲಹೆ ಸೂಚನೆ ಆಲಿಸುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಠಗಳು ಸಮಾಜಕ್ಕೆ ಕೆಲಸ ಮಾಡುತ್ತವೆ. ಸಮಾಜದ ಮಠ ಮಂದಿರಗಳ ಸಲಹೆ ಸೂಚನೆಗಳನ್ನು ಆಲಿಸುತ್ತೇವೆ. ಯಾವ ಮಠಗಳಿಗೆ ಮುಂದೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮಠಾಧೀಶರುಗಳು ಸಲಹೆ ನೀಡಬೇಕು. ಎಲ್ಲರೂ ಒಂದೇ ಕುಟುಂಬ ಎಂದು ಬದುಕಬೇಕು. ಆ ದೃಷ್ಟಿಯಿಂದ ನಾವುಗಳು ಕೆಲಸ ಮಾಡಬೇಕಿದೆ. ನಮ್ಮ ಇಲಾಖೆಯ ಮೂಲಕ ಯಾವೆಲ್ಲಾ ಕೆಲಸ ಮಾಡಬಹುದು ಎಂದು ನಮ್ಮ ಅಜೆಂಡಾಗಳಲ್ಲಿ ಕೂಡ ಗಮನಿಸುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೂಡ ಆರ್ಥಿಕ ಸಹಾಯ ಹೇಗೆ ನೀಡಬಹುದು ಎಂದು ನೋಡುತ್ತೇವೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಹಿಂದುಳಿದ ಮಠಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕಿದೆ
ನಾವು ಒಂದು ಕಡೆ ಸಭೆ ಮಾಡೋಣ ಎಂದುಕೊಂಡಿದ್ದೆವು. ಸಾಕಷ್ಟು ಮಠಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಹಿಂದುಳಿದ-ದಲಿತ ಮಠಾಧೀಶರ ಒಕ್ಕೂಟ ಮಾಡಿಕೊಂಡಿದ್ದೇವೆ. ಇದನ್ನು ಈಶ್ವರಪ್ಪ ಗಮನಿಸಿ ನಮ್ಮನ್ನು ಕರೆಸಿ ಸಭೆ ಮಾಡಿದರು ಎಂದು ಕಾಗಿನೆಲೆ ಗುರು ಪೀಠದ ನಿರಂಜನಾನಂದಪುರಿಶ್ರೀಗಳ ತಿಳಿಸಿದ್ದಾರೆ.
ಹಿಂದುಳಿದ ಸಮುದಾಯದ ಬೇಡಿಕೆ ಈಡೇರಬೇಕೆಂದು ಈ ಭೇಟಿ ಮಾಡಲಾಗಿದೆ. ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಸಮುದಾಯಕ್ಕೆ ಜಾಗೃತಿ ಆಗಬೇಕಿದೆ. ಎಲ್ಲ ಹಿಂದುಳಿದ ಮಠಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕಿದೆ. ದಾಸೋಹ, ಶೈಕ್ಷಣಿಕ ಕಾರ್ಯಕ್ರಮಕ್ಕೆ, ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಾಮಾಜಿಕ ನ್ಯಾಯ ನೀಡಬೇಕು ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಬಹುತೇಕ ಸಮುದಾಯಗಳು ಮೀಸಲಾತಿ ಪಡೆಯುತ್ತಿವೆ. ಇನ್ನೂ ಹಲವಾರು ಜಾತಿಗಳಿಗೆ ಮೀಸಲಾತಿ ಸರಿಯಾಗಿ ಸಿಕ್ಕಿಲ್ಲ. ಸಿಎಂ ಬಸವರಾಜ ಬೊಮ್ಮಾಯಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ. ಅವರು ನಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ಆಲಿಸಿಕೊಂಡಿದ್ದಾರೆ, ಧಾರ್ಮಿಕವಾಗಿ ಎಲ್ಲ ಮಠಗಳ ಅಭಿವೃದ್ಧಿ ಕೆಲಸ ಮಾಡಲಿ ಎಂದು ಸಭೆಯಲ್ಲಿ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ಪಂಚಮಸಾಲಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ಹಿನ್ನೆಲೆ, ಪಂಚಮಸಾಲಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು ಎಂದು ಹಿಂದುಳಿದ ವರ್ಗಗಳ ಸಮಾಜದ ಶ್ರೀಗಳ ಸಭೆಯಲ್ಲಿ ಚರ್ಚೆ ಆಗಿದೆ ಎಂದು ತಿಳಿದುಬಂದಿದೆ. ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಈ ಬಗ್ಗೆ ಸಭೆ ನಡೆಸಲಾಗಿದೆ. ಪಂಚಮಸಾಲಿಗಳ ಮೀಸಲು ಹೋರಾಟವನ್ನು ವಿರೋಧಿಸಿ ಅತಿ ಹಿಂದುಳಿದ ವರ್ಗಗಳ ಎಲ್ಲ ಶ್ರೀಗಳು ಬೆಂಬಲಿಸಬೇಕು. ಪ್ರತಿ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವಂತೆ ಸಭೆಯಲ್ಲಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳಿಗೆ ಮನವಿ ಮಾಡಲಾಗಿದೆ. 2ಎ ಮೀಸಲಾತಿ ನೀಡದಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಶ್ರೀಗಳಿಗೆ ಮನವಿ ಮಾಡಲಾಗಿದೆ. ಪರಿಷತ್ನ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್, ಡಾ.ದ್ವಾರಕಾನಾಥ್ ಸೇರಿದಂತೆ ಇತರರು ಸಭೆಯಲ್ಲಿ ಭಾಗಿ ಆಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪಂಚಮಸಾಲಿ ಸೇರಿ 10 ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಸದ್ಯದಲ್ಲೇ ಸರ್ಕಾರಕ್ಕೆ ಶಿಫಾರಸು
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೆ ಅಹಿಂದ ಕಡೆಗೆ; ಜಾತಿಗಣತಿ ಮುಂದಿಟ್ಟು ಕೊಂಡು ಹಿಂದುಳಿದ ಜಾತಿಗಳ ಸೆಳೆಯಲು ಮಾಸ್ಟರ್ ಪ್ಲಾನ್
Published On - 6:12 pm, Sat, 23 October 21