
ಬೆಂಗಳೂರು, ಸೆಪ್ಟೆಂಬರ್ 01: ಕೆಪಿಎಸ್‌ಸಿ ಅಕ್ರಮ ಪ್ರಕರಣದ ಬೆನ್ನುಬಿದ್ದಿರುವ ಸಿಐಡಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರಮುಖ ಸೂತ್ರಧಾರಿಗಳನ್ನು ಬಂಧಿಸಿದ್ದಾರೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಾಂಗ್ವಾರ್ ಬಂಧನದ ಬೆನ್ನಲ್ಲೇ, ಮತ್ತೊಬ್ಬ ಮಾಸ್ಟರ್ ಮೈಂಡ್ ಬಸವರಾಜ್ ಕನ್ನಾಳೆಯನ್ನು ಸಿಐಡಿ ಲಾಕ್ ಮಾಡಿದೆ.
ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಹಾಗೂ ಭಾಲ್ಕಿಯ ಮುಖಂಡ ಬಸವರಾಜ್ ಕನ್ನಾಳೆಯನ್ನು ದೆಹಲಿಯಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು, ಬೆಂಗಳೂರಿಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಬಳಿಕ ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಇಬ್ಬರನ್ನೂ 1ನೇ ACJM ಕೋರ್ಟ್‌ಗೆ ಹಾಜರುಪಡಿಸಲಾಯಿತು.
ವಿಚಾರಣೆ ವೇಳೆ ಜ್ಞಾನೇಂದ್ರ ಪರ ವಕೀಲರು, “ಆರೋಪಿಯು ಅಸ್ತಮಾ ಹಾಗೂ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದು, ಫಿಸಿಯೋಥೆರಪಿ ಅಗತ್ಯವಿದೆ. ಹೀಗಾಗಿ ಜಾಮೀನು ನೀಡಬೇಕು” ಎಂದು ಕೋರಿದರು. ಆದರೆ ಸರ್ಕಾರಿ ಅಭಿಯೋಜಕರು (Public Prosecutor) ಇದನ್ನು ತೀವ್ರವಾಗಿ ಆಕ್ಷೇಪಿಸಿ, ಪ್ರಶ್ನೆ ಪತ್ರಿಕೆ ಲೀಕ್ ಹಾಗೂ ಅಕ್ರಮದ ಗಂಭೀರ ಆರೋಪಗಳಿರುವುದರಿಂದ ಹೆಚ್ಚಿನ ತನಿಖೆಗೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದಾರೆ.
ಸಿಐಡಿ ತನಿಖೆಯ ವೇಳೆ ಕ್ರಿಮಿನಲ್ ಜಾಲ ಬಯಲಾಗಿದೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ನಾಯಕರ ಜೊತೆ ಒಡನಾಟ ಹೊಂದಿದ್ದನು. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ, ಒಂದಕ್ಕೆ ಸುಮಾರು 40 ಲಕ್ಷದವರೆಗೆ ಪಡೆದು ಅಭ್ಯರ್ಥಿಗಳಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, OMR ಶೀಟ್ ತಿದ್ದುಪಡಿ, ಸಾಕ್ಷ್ಯ ನಾಶ ಹಾಗೂ ಸ್ಟ್ರಾಂಗ್ ರೂಮ್‌ನ CCTV ದೃಶ್ಯಾವಳಿಗಳನ್ನು ನಾಶಪಡಿಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಇಬ್ಬರು ಪ್ರಮುಖ ತಿಮಿಂಗಿಲಗಳು ಬಲೆಗೆ ಬಿದ್ದಿದ್ದು, ಅಕ್ರಮದಲ್ಲಿ ಭಾಗಿಯಾದ ಇತರ ಆರೋಪಿಗಳಲ್ಲೀಗ ನಡುಕ ಶುರುವಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿದ ಸಿಎಂ ಡಿ ಕೆ ಶಿವಕುಮಾರ್, ಕೆಪಿಎಸ್‌ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾನು ಮುಖ್ಯಮಂತ್ರಿಯಾಗಿ ಸಂಪೂರ್ಣ ತನಿಖಾ ವರದಿ ಬರುವವರೆಗೆ ಯಾವುದೇ ಉದ್ವೇಗದ ಹೇಳಿಕೆ ನೀಡಲು ಬಯಸುವುದಿಲ್ಲ. ಬಿಜೆಪಿ ಹಾಗೂ ವಿಪಕ್ಷಗಳ ನಾಯಕರು ಏನೇನೋ ಮಾತನಾಡುತ್ತಿದ್ದಾರೆ, ಅದಕ್ಕೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ . ಕೆಪಿಎಸ್‌ಸಿಯಲ್ಲಿ ಹಿಂದೆ ಯಾರ್ಯಾರನ್ನು ನೇಮಕ ಮಾಡಲಾಗಿತ್ತು, ಅಕ್ರಮದ ಹಿಂದ ಯಾರಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಸಿಐಡಿ ತನಿಖೆಯಿಂದ ಹೊರಬರಲಿದೆ. ವಿಪಕ್ಷಗಳು ಪಾದಯಾತ್ರೆ ಮಾಡುವುದಿದ್ದರೆ ಮಾಡಲಿ, ನಮ್ಮ ಸರ್ಕಾರದ ಉತ್ತರ ಏನೆಂಬುದನ್ನು ಕಾಲವೇ ಉತ್ತರಿಸಲಿದೆ ಎಂದಿದ್ದಾರೆ.
ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದ ಸಿಐಡಿ ತಂಡವು ಬೆಂಗಳೂರಿನ ಸಂಜಯ್ ನಗರದ ವಿನಾಯಕ ಲೇಔಟ್‌ನಲ್ಲಿರುವ ಆರೋಪಿ ಬಸವರಾಜ ಕನ್ನಾಳೆ ಅವರ ಮನೆ ಮೇಲೆ ದಾಳಿ ನಡೆಸಿ, ಸಂಪೂರ್ಣ ಶೋಧನೆ ನಡೆಸಿ ಮನೆಯನ್ನು ಸೀಜ್ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ ಕೆಲವು ಅಭ್ಯರ್ಥಿಗಳೊಂದಿಗೆ ಹಣಕಾಸು ಹಾಗೂ ನೇಮಕಾತಿ ಕುರಿತು ಮಾತುಕತೆ ನಡೆಸಿರುವ ನಿರ್ಣಾಯಕ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಅಧಿಕಾರಿಗಳು ಅವರ ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:42 am, Tue, 1 September 26