ಕೆಪಿಎಸ್​​ಸಿ ಹಗರಣ: ಎರಡು ಟೀಂಗಳಿಂದ ನಡೆಯುತ್ತಿತ್ತು ಡೀಲ್!​​; ಜ್ಞಾನೇಂದ್ರ ವಿಚಾರಣೆ ವೇಳೆ ಹಲವು ಪ್ರಮುಖ ವಿಚಾರ ಬಯಲು

ಕೆಪಿಎಸ್‌ಸಿ ನೇಮಕಾತಿ ಅಕ್ರಮದಲ್ಲಿ ಎರಡು ಪ್ರತ್ಯೇಕ ತಂಡಗಳು ಮಧ್ಯವರ್ತಿಗಳ ಮೂಲಕ ಡೀಲ್ ನಡೆಸುತ್ತಿದ್ದವು. ಕಳೆದ 3-4 ವರ್ಷಗಳಲ್ಲಿ 13ಕ್ಕೂ ಹೆಚ್ಚು ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ತನಿಖೆಯಲ್ಲಿ ಜ್ಞಾನೇಂದ್ರ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಹಗರಣದಲ್ಲಿ ಕೆಪಿಎಸ್ಸಿ ಮಾಜಿ ಅಧ್ಯಕ್ಷರ ಹಾಗೂ ಸದಸ್ಯರ ಟೀಮ್ ಬಗ್ಗೆ ಈಗ ಸಾಕ್ಷಿಗಳು ಸಿಕ್ಕಿದ್ದು, ಅವರ ವಿರುದ್ಧ ಕ್ರಮಕ್ಕೆ ಸರ್ಕಾರದ ಅನುಮತಿಗೆ CID ಕಾಯುತ್ತಿದೆಯಂತೆ. ಆದರೆ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರೂ ಉಲ್ಲೇಖವಾಗುವ ಸಾಧ್ಯತೆ ಇರುವ ಕಾರಣ ಒತ್ತಡಕ್ಕೆ ಸಿಲುಕಿರುವ ಸರ್ಕಾರ ಅನುಮತಿಗೆ ಮೀನಾಮೇಷ ಎಣಿಸುತ್ತಿದೆ ಎನ್ನಲಾಗಿದೆ.

ಕೆಪಿಎಸ್​​ಸಿ ಹಗರಣ: ಎರಡು ಟೀಂಗಳಿಂದ ನಡೆಯುತ್ತಿತ್ತು ಡೀಲ್!​​; ಜ್ಞಾನೇಂದ್ರ ವಿಚಾರಣೆ ವೇಳೆ ಹಲವು ಪ್ರಮುಖ ವಿಚಾರ ಬಯಲು
ಕೆಪಿಎಸ್​​ಸಿ
Image Credit source: kpsc.kar.nic.in
Edited By:

Updated on: Oct 05, 2026 | 9:30 AM

ಬೆಂಗಳೂರು, ಅಕ್ಟೋಬರ್​​ 05: ತನಿಖೆ ವೇಳೆ ಕರ್ನಾಟಕ ಲೋಕ ಸೇವಾ ಆಯೋಗದ (KPSC) ಮತ್ತಷ್ಟು ಕರ್ಮಕಾಂಡಗಳು ಬಯಲಾಗಿವೆ. ಕೆಪಿಎಸ್ಸಿಯ 2 ತಂಡಗಳು ಸರ್ಕಾರಿ ಹುದ್ದೆ ನೇಮಕಾತಿ ವೇಳೆ ಮಧ್ಯವರ್ತಿಗಳ ಮೂಲಕ ಡೀಲ್​​ ನಡೆಸುತ್ತಿದ್ದವು. ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಮತ್ತು ಬಸವರಾಜ್ ಕನ್ನಾಳೆಯಂತಹ ಮಧ್ಯವರ್ತಿಗಳದ್ದೇ ಒಂದು ಟೀಂ ಆಗಿದ್ದರೆ, KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯರದ್ದು ಮತ್ತೊಂದು ತಂಡವಿತ್ತು. ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳನ್ನ ಸಂಪರ್ಕಿಸುತ್ತಿದ್ದ ಇವರು, ಹಣ ಪಡೆದು ಡೀಲ್​​ ಮುಗಿಸುತ್ತಿದ್ದರು ಎಂಬುದು ಸಿಐಡಿ ಮತ್ತು ಇಡಿ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ.

ಒಂದೆರಡಲ್ಲ ಬರೋಬ್ಬರಿ 13 ನೇಮಕಾತಿಗಳಲ್ಲಿ ಅಕ್ರಮ?

ಐಎಎಸ್​​ ಅಧಿಕಾರಿ ಜ್ಞಾನೇಂದ್ರ ವಿಚಾರಣೆ ವೇಳೆ ನೀಡಿರುವ ಮಾಹಿತಿಯ ಪ್ರಕಾರ ಕಳೆದ 3-4 ವರ್ಷಗಳಲ್ಲಿ ಕೆಪಿಎಸ್​​ಸಿ ಮುಖಾಂತರ ನಡೆದಿರುವ ಬರೋಬ್ಬರಿ 13 ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ. ಪಶುವೈದ್ಯಧಿಕಾರಿಗಳ ನೇಮಕಾತಿ, KAS ಅಧಿಕಾರಿಗಳ ನೇಮಕಾತಿ, ಸಾರಿಗೆ ಇಲಾಖೆಯ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್‌ಗಳು, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಎಂಜಿನಿಯರ್‌ಗಳು ಸೇರಿರಿದಂತೆ ಹಲವು ಇಲಾಖೆ ನೇಮಕಾತಿಗಳ ವೇಳೆ ಸರ್ಕಾರಿ ಹುದ್ದೆಯ ಮಾರಾಟ ನಡೆದಿರುವ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿವೆಯಂತೆ.

ಇದನ್ನೂ ಓದಿ: ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಕೆಪಿಎಸ್​ಸಿಯ ನಾಲ್ವರು ಸದಸ್ಯರಿಗೆ ಇಡಿ ಸಂಕಷ್ಟ ಸಾಧ್ಯತೆ

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದಕ್ಕೂ ಮುನ್ನವೇ ಕೆಪಿಎಸ್ಸಿ ಸದಸ್ಯರು ಸೋರಿಕೆ ಮಾಡುತ್ತಿದ್ದರು. ನಂತರ ಆ ಪಟ್ಟಿಯಲ್ಲಿದ್ದ ಕೆಲವು ಅಭ್ಯರ್ಥಿಗಳೊಂದಿಗೆ ಮಧ್ಯವರ್ತಿಗಳ ಮೂಲಕ ಸಂಪರ್ಕ ಸಾಧಿಸಿ, ಕೋಟಿ ಕೋಟಿಗೆ ಡೀಲ್ ಮಾಡುತ್ತಿದ್ದರು. ಮೌಲ್ಯಮಾಪನ ಪ್ರಕ್ರಿಯೆ ಮುಗಿದ ನಂತರ ಕೆಲವು ಕೆಪಿಎಸ್‌ಸಿ ಸದಸ್ಯರು ತಮ್ಮನ್ನು ಭೇಟಿಯಾಗುತ್ತಿದ್ದರು ಎಂದು ವಿಚಾರಣೆ ವೇಳೆ ಜ್ಞಾನೇಂದ್ರ ಬಾಯ್ಬಿಟ್ಟಿದ್ದಾರಂತೆ. ಪ್ರಕರಣ ಸಂಬಂಧ ಐಎಎಸ್ ಅಧಿಕಾರಿ ಜ್ಞಾನೇಂದ್ರ ಮತ್ತು ಟೀಮ್ ಈಗಾಗಲೇ ಬಂಧನವಾಗಿದೆ. ಆದರೆ ಕೆಪಿಎಸ್ಸಿ ಮಾಜಿ ಅಧ್ಯಕ್ಷರ ಹಾಗೂ ಸದಸ್ಯರ ಟೀಮ್ ಬಗ್ಗೆ ಈಗ ಸಾಕ್ಷಿಗಳು ಸಿಕ್ಕಿದ್ದು, ಅವರ ವಿರುದ್ಧ ಕ್ರಮಕ್ಕೆ ಸರ್ಕಾರದ ಅನುಮತಿಗೆ CID ಕಾಯುತ್ತಿದೆಯಂತೆ. ಆದರೆ ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರೂ ಉಲ್ಲೇಖವಾಗುವ ಸಾಧ್ಯತೆ ಇರುವ ಕಾರಣ ಒತ್ತಡಕ್ಕೆ ಸಿಲುಕಿರುವ ಸರ್ಕಾರ ಅನುಮತಿಗೆ ಮೀನಾಮೇಷ ಎಣಿಸುತ್ತಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಕಿರಣ ಹೆಚ್​. ವಿ.
Loading...
Unable to load recommendations.
Follow Us