ಬೆಂಗಳೂರಲ್ಲಿ ಕಸದ ವಾಹನದ ಕಳ್ಳಾಟಕ್ಕೆ ಬ್ರೇಕ್: ಕೃಷ್ಣಬೈರೇಗೌಡ ಮಾಡಿದ ಪ್ಲ್ಯಾನ್ ಏನು ನೋಡಿ
ಬೆಂಗಳೂರು ಕಸ ನಿರ್ವಹಣೆಯಲ್ಲಿನ ಅವ್ಯವಹಾರ ತಡೆಯಲು ಸಚಿವ ಕೃಷ್ಣಬೈರೇಗೌಡ ಕೆಲ ಮಹತ್ವದ ಸುಧಾರಣೆಗೆ ಮುಂದಾಗಿದ್ದಾರೆ. ನಕಲಿ ಹಾಜರಾತಿ ತಡೆಯಲು ಫೇಸ್ ರೆಕಗ್ನಿಷನ್, ಜಿಪಿಎಸ್ ಮೂಲಕ ಕಸದ ವಾಹನಗಳ ಟ್ರ್ಯಾಕಿಂಗ್ ಕಡ್ಡಾಯಗೊಳಿಸಿದ್ದಾರೆ. ಆ ಮೂಲಕ ಕಸದ ವಾಹನಗಳ ಸಿಬ್ಬಂದಿಯ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ.

ಮುಖ್ಯಾಂಶಗಳು
- ಕಸದ ವಾಹನ ಸಿಬ್ಬಂದಿ ಕಳ್ಳಾಟಕ್ಕೆ ಬ್ರೇಕ್ ಹಾಕಲು ಪ್ಲ್ಯಾನ್
- ಫೇಸ್ ರೆಕಗ್ನಿಷನ್ ಕಡ್ಡಾಯ ಎಂದ ಸಚಿವ ಕೃಷ್ಣಬೈರೇಗೌಡ
- ರಸ್ತೆ, ಕಸ, ಒಳಚರಂಡಿ ಸಮಸ್ಯೆ ಪರಿಹಾರಕ್ಕೆ ಸೂಚನೆ
ಬೆಂಗಳೂರು, ಅಕ್ಟೋಬರ್ 28: ಸಿಲಿಕಾನ್ ಸಿಟಿಯಲ್ಲಿ ಕಸ ನಿರ್ವವಹಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಲವು ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಇದೀಗ ಕೆಲ ಕಸದ ವಾಹನದ ಸಿಬ್ಬಂದಿ ಕೆಲಸಕ್ಕೆ ಬಾರದೆ ನಕಲಿ ಹಾಜರಾತಿ ತೋರಿಸಿರುವುದು ಕಂಡುಬಂದ ಹಿನ್ನೆಲೆ ಈ ಕಳ್ಳಾಟಕ್ಕೆ ಬ್ರೇಕ್ ಹಾಕಲು ಪ್ಲ್ಯಾನ್ ಮಾಡಲಾಗಿದೆ. ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಫೇಸ್ ರೆಕಗ್ನಿಷನ್ ಕಡ್ಡಾಯಗೊಳಿಸಿದ್ದಾರೆ.
9000 ಟನ್ಗೆ ಏರಿಕೆ ಮಾಡಲು ಪ್ಲ್ಯಾನ್
ಇನ್ನು ಕಸ ಸಂಗ್ರಹ ಸಾಮರ್ಥ್ಯ ಹೆಚ್ಚಿರುವ ವಾಹನಗಳಿಗೆ ಆದ್ಯತೆ ನೀಡಲಾಗಿದೆ. ಹೊಸ ವಾಹನದಲ್ಲಿ ಜಿಪಿಎಸ್ ಇರುವುದರಿಂದ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ. ಆ ಮೂಲಕ ಹೆಚ್ಚು ಕಸ ಸಂಗ್ರಹ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಇಷ್ಟು ದಿನ ದಿನಕ್ಕೆ 5600 ಟನ್ ಕಸ ಸಂಗ್ರಹ ಮಾಡಲಾಗುತ್ತಿದ್ದು, ಇದನ್ನ 9000 ಟನ್ಗೆ ಏರಿಕೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಸದ್ಯ 5200 ವಾಹನಗಳಿವೆ ಎಂದು ಲೆಕ್ಕ ತೋರಿಸಲಾಗಿದೆ.
ಕಸದ ವಾಹನಗಳಲ್ಲಿ ಜಿಪಿಎಸ್ ಕಡ್ಡಾಯ
ಕಸದ ವಿಚಾರವಾಗಿ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ‘ಕಸದ ವಾಹನಗಳಲ್ಲಿ ಜಿಪಿಎಸ್ ಇಲ್ಲದ್ದಕ್ಕೆ ಕೆಲಸಕ್ಕೆ ಬಂದಿಲ್ವಾ? ನಿಗದಿಪಡಿಸಿದ ಮಾರ್ಗದಲ್ಲೇ ಹೋಗುತ್ತಿದ್ದಾರೆಂದು ಗೊತ್ತಾಗುತ್ತಿರಲಿಲ್ಲ, ಹೀಗಾಗಿ ಕಸದ ವಾಹನಗಳಲ್ಲಿ ಜಿಪಿಎಸ್ ಕಡ್ಡಾಯ ಮಾಡಿದ್ದೇವೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಕಸ, ತ್ಯಾಜ್ಯ ವರ್ಗಾವಣೆ ಕೇಂದ್ರಗಳ ಟೆಂಡರ್‌ನಲ್ಲಿ ಅಕ್ರಮ ಆರೋಪ: ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ಸಿಎಂಗೆ ಅಶೋಕ್ ಪತ್ರ
ಇನ್ನು ‘ಹಳೆಯ ವಾಹನದ ಬದಲು ಹೊಸ ವಾಹನ ಖರೀದಿ ಮಾಡಬೇಕು. ಪ್ರತಿ ವಾಹನದಲ್ಲೂ ಜಿಪಿಎಸ್ ಕಡ್ಡಾಯವಾಗಿ ಇರಬೇಕು’ ಎಂದು ಟೆಂಡರ್ ಕೊಡುವಾಗಲೇ ಷರತ್ತು ಹಾಕಿದ್ದೇವೆ. ಗುತ್ತಿಗೆದಾರರು ಒಂದೂವರೆ ತಿಂಗಳು ಸಮಯ ಕೇಳಿದ್ದಾರೆ. 5 ಪ್ಯಾಕೇಜ್ ವರ್ಕ್ ಆರ್ಡರ್ ಆಗಿದೆ. ಸಚಿವ ಸಂಪುಟದಲ್ಲಿ 10 ಪ್ಯಾಕೇಜ್‌ಗೆ ಅನುಮೋದನೆ ನೀಡಿದರೆ ಅವರಿಗೂ ವರ್ಕ್ ಆರ್ಡರ್ ಕೊಡುತ್ತೇವೆ. ಹೊಸ ವಾಹನ ಖರೀದಿ, ಜಿಪಿಎಸ್ ಅಳವಡಿಕೆ ಮಾಡಬೇಕು, ಆದ್ದರಿಂದ ಅವರಿಗೂ ಎರಡು ತಿಂಗಳ ಸಮಯಬೇಕು’ ಎಂದು ಅವರು ಮಾಹಿತಿ ನೀಡಿದರು.
ಕಸ ಸೇರಿದಂತೆ ಹಲವು ಸಮಸ್ಯೆ ಸರಿಪಡಿಸಲು ಸೂಚನೆ
‘ಕಳೆದ 25 ದಿನಗಳಿಂದ ಎಂಎನ್ಸಿ ಚುನಾವಣೆಯಿತ್ತು. ಕಾಮಗಾರಿಗಳಿಗೆ ವೇಗ ನೀಡುವುದಕ್ಕೆ ಆಗಿರಲಿಲ್ಲ. ಇದರ ಬಗ್ಗೆ ಎಲ್ಲ ಆಯುಕ್ತರ ಜೊತೆ ಮಾತನಾಡಿದ್ದೇನೆ. ಮಳೆ ಬಂದು ರಸ್ತೆ ಅದಗೆಟ್ಟಿದೆ. ರಸ್ತೆ ಸಮಸ್ಯೆ, ಕಸದ ಸಮಸ್ಯೆ, ಒಳಚರಂಡಿ ವ್ಯವಸ್ಥೆ, ಗುಂಡಿಗಳ ಸಮಸ್ಯೆ, ಬೀದಿ ದೀಪಗಳು ಸರಿಪಡಿಸಲು ಸೂಚನೆ ಕೊಟ್ಟಿದ್ದೇನೆ. ಮಳೆಯಿಂದ ಮರಗಳು ಫುಟ್‌ಪಾತ್ ಮೇಲೆ ಬಿದಿದ್ರೆ ಎತ್ತುವ ಕೆಲಸವಾಗಬೇಕಿದೆ. ಇದನ್ನ ನವೆಂಬರ್ 1ರಂದು ಆರಂಭ ಮಾಡಿ 30ರೊಳಗೆ ಮಾಡಬೇಕು. ನವೆಂಬರ್ ಪೂರ್ತಿ ಡ್ರೈವ್ ಮಾಡಿ ಕೆಲವು ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಅಂತ ಸಿಎಂ ಡಿಕೆ ಶಿವಕುಮಾರ್ ಕೂಡ ಸಲಹೆ ಕೊಟ್ಟಿದ್ದಾರೆ. ಅವರ ಸಲಹೆ ಪಡೆದು ಕಮಿಷನರ್ ಜೊತೆ ಸಭೆ ಮಾಡಿ ಹೇಳಿದ್ದೇನೆ’ ಎಂದರು.
‘ಮೊದಲು ವಾರ್ಡ್ನಲ್ಲಿ ಏನು ಸಮಸ್ಯೆ ಇದೆ ಅಂತ ತಿಳಿದುಕೊಳ್ಳುತ್ತೇವೆ. ಸಿಎಂ ಕೂಡ ಏನು ಸಮಸ್ಯೆ ಇದೆ ಅಂತ ಮಾಹಿತಿ ನೀಡಿದ್ದಾರೆ. ನವೆಂಬರ್ ತಿಂಗಳು ಎಲ್ಲಾ ಇಲಾಖೆ ಅಧಿಕಾರಿಗಳು ಸೇರಿಸಿಕೊಂಡು ಒನ್ ಡ್ರೈವ್ ಮಾಡುತ್ತಿದ್ದೇವೆ. ಈಗಾಗಲೇ ಬೆಂಗಳೂರನ್ನು ಸ್ವಚ್ಛ ಮಾಡುವಂತ ಕೆಲಸ ಮಾಡಿದೆ. ಈಗ ಮುಂದುವರೆದ ಭಾಗವಾಗಿ ವಾರ್ಡ್ಗಳಲ್ಲಿ ಸಮಸ್ಯೆ ಬಗ್ಗೆ ಹರಿಸಲು ಮುಂದಾಗಿದ್ದೇವೆ. ಪ್ರತ್ಯೇಕವಾಗಿ ಒಂದೊಂದು ವಾರ್ಡ್ ಆಯ್ಕೆ ಮಾಡಿ ಅಲ್ಲಿಯ ಮೂಲಭೂತ ಸೌಕರ್ಯಗಳನ್ನು ಬಗೆಹರಿಸಲು ಸೂಚನೆ ಕೊಟ್ಟಿದ್ದೇನೆ. ಟಾಸ್ಕ್ ನಾಳೆಯಿಂದ ಆರಂಭ ಮಾಡುತ್ತೇವೆ. ಸರ್ವೆ ಮಾಡುವುದಕ್ಕೆ 4ರಿಂದ 5 ದಿನ ಬೇಕಾಗುತ್ತೆ. ಹಾಗಾಗಿ ಸರ್ವೆ ಮೊದಲು ಮಾಡಿ, ಬಳಿಕ ಡ್ರೈವ್ ಮಾಡುತ್ತೇವೆ’ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.
ರಸ್ತೆ ಸ್ವಲ್ಪ ಸರಿ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆ ಆಗುತ್ತೆ ಎಂದ ಕೃಷ್ಣಬೈರೇಗೌಡ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ವಿಚಾರವಾಗಿ ಮಾತನಾಡಿದ ಅವರು, ‘ರಸ್ತೆ ಸ್ವಲ್ಪ ಸರಿ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆ ಆಗುತ್ತೆ. ಟ್ರಾಫಿಕ್ ಸಮಸ್ಯೆ ಬಹಳ ಗಂಭೀರವಾಗಿರುವಂತದ್ದು. ಬರೀ ಬೆಂಗಳೂರು ಅಷ್ಟೇ ಅಲ್ಲಾ ಎಲ್ಲಾ ದೊಡ್ಡ ದೊಡ್ಡ ನಗರಗಳಲ್ಲೂ ಟ್ರಾಫಿಕ್ ಸಮಸ್ಯೆ ಇದೆ. ಬೆಂಗಳೂರಲ್ಲಿ ಸ್ವಲ್ಪ ಜಾಸ್ತಿ ಟ್ರಾಫಿಕ್ ಸಮಸ್ಯೆ ಇರಬಹುದು, ನಾನು ಕೆಲವೊಮ್ಮೆ ದೆಹಲಿ ಕೆಲಸಕ್ಕೆ ಹೋದಂತಹ ಸಮಯದಲ್ಲಿ ಅಲ್ಲಿಯೂ ಸಹ ಟ್ರಾಫಿಕ್ ಇದೆ’ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:23 pm, Wed, 28 October 26




