ಕಸ, ತ್ಯಾಜ್ಯ ವರ್ಗಾವಣೆ ಕೇಂದ್ರಗಳ ಟೆಂಡರ್‌ನಲ್ಲಿ ಅಕ್ರಮ ಆರೋಪ: ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ಸಿಎಂಗೆ ಅಶೋಕ್ ಪತ್ರ
ಬೆಂಗಳೂರಿನ ತ್ಯಾಜ್ಯ ವರ್ಗಾವಣೆ ಕೇಂದ್ರಗಳ ₹133 ಕೋಟಿ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ವಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದಿದ್ದಾರೆ. ಬೆಂಗಳೂರು ನಗರದ ಕಸ ವಿಲೇವಾರಿ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದ ಯೋಜನೆಯಲ್ಲಿಯೇ ಗಂಭೀರ ಅಕ್ರಮಗಳು ನಡೆದಿರುವ ಆರೋಪಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ ಎಂದವರು ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 27: ಬೆಂಗಳೂರಿನ ಕಸ ಮತ್ತು ತ್ಯಾಜ್ಯ ವರ್ಗಾವಣೆ ಕೇಂದ್ರಗಳ 133 ಕೋಟಿ ರೂ. ಟೆಂಡರ್‌ನಲ್ಲಿ ಅಕ್ರಮಗಳ ಆರೋಪ ಹಿನ್ನೆಲೆ ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದಿದ್ದಾರೆ. ಆರ್ಥಿಕ ಇಲಾಖೆಯ ಸೂಚನೆಗಳನ್ನು ನಿರ್ಲಕ್ಷಿಸಿ ಟೆಂಡರ್ ಪ್ರಕ್ರಿಯೆ ಮುಂದುವರಿಸಿರುವುದರ ಬಗ್ಗೆಯೂ ಸಮಗ್ರ ತನಿಖೆಗೆ ಆಗ್ರಹಿಸಿರುವ ಅವರು, ಟೆಂಡರ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಿಎಂಗೆ ಅಶೋಕ್ ಬರೆದ ಪತ್ರದಲ್ಲಿ ಏನಿದೆ?
ಬೆಂಗಳೂರಿನ ಕಸ ಮತ್ತು ತ್ಯಾಜ್ಯ ವರ್ಗಾವಣೆ ಕೇಂದ್ರಗಳ ₹133 ಕೋಟಿ ಟೆಂಡರ್‌ನಲ್ಲಿ ಗಂಭೀರ ಅಕ್ರಮಗಳ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ @DKShivakumar ಅವರಿಗೆ ಪತ್ರ ಬರೆದು ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದೇನೆ.
ಟೆಂಡರ್ ಪಡೆದಿರುವ ಸಂಸ್ಥೆಯ ಅರ್ಹತೆ, ನಿಗದಿತ ವಹಿವಾಟಿನ ಮಾನದಂಡಗಳ ಪಾಲನೆ ಹಾಗೂ ಸುಮಾರು ₹12.99 ಕೋಟಿ ಹೆಚ್ಚುವರಿ ಭದ್ರತಾ ಠೇವಣಿ ಪಡೆಯದಿರುವ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಆರ್ಥಿಕ ಇಲಾಖೆಯ ಸೂಚನೆಗಳನ್ನು ನಿರ್ಲಕ್ಷಿಸಿ ಟೆಂಡರ್ ಪ್ರಕ್ರಿಯೆ ಮುಂದುವರಿಸಿರುವುದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು.
ಬೆಂಗಳೂರಿನ ಕಸದ ಸಮಸ್ಯೆಯ ಹೆಸರಿನಲ್ಲಿ ಸಾರ್ವಜನಿಕ ಹಣದ ಬಳಕೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡಲಾಗದು. ಟೆಂಡರ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕ ಹಣಕ್ಕೆ ಲೆಕ್ಕ ಕೊಡಲೇಬೇಕು. ಸತ್ಯ ಹೊರಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
@CMofKarnataka
#GarbageTenderScam
— R. Ashoka (@RAshokaBJP) October 27, 2026
ಬೆಂಗಳೂರು ನಗರದ ಕಸ ವಿಲೇವಾರಿ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದ ಯೋಜನೆಯಲ್ಲಿಯೇ ಗಂಭೀರ ಅಕ್ರಮಗಳು ನಡೆದಿರುವ ಆರೋಪಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ. ಜಿಬಿಎ ವ್ಯಾಪ್ತಿಯಲ್ಲಿ ಕಸ ಮತ್ತು ತ್ಯಾಜ್ಯ ವರ್ಗಾವಣೆ ಕೇಂದ್ರಗಳಿಗೆ ಸಂಬಂಧಿಸಿದ ಸುಮಾರು 133 ಕೋಟಿ ಮೊತ್ತದ ಟೆಂಡರ್‌ಗಳನ್ನು ವಹಿಸಿಕೊಟ್ಟಿರುವ ಪ್ರಕ್ರಿಯೆಯಲ್ಲಿ ಅರ್ಹತಾ ಮಾನದಂಡಗಳ ಉಲ್ಲಂಘನ, ಹೆಚ್ಚುವರಿ ಭದ್ರತಾ ಠೇವಣಿ ಪಡೆಯದಿರುವುದು ಹಾಗೂ ಆರ್ಥಿಕ ಇಲಾಖೆಯ ಸೂಚನೆಗಳನ್ನು ನಿರ್ಲಕ್ಷಿಸಿರುವಂತಹ ಗಂಭೀರ ಲೋಪಗಳು ಕಂಡುಬಂದಿವೆ. ಈ ಕುರಿತು ನಾನು ಈಗಾಗಲೇ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡ ಮಾಡಿ, ಟೆಂಡರ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಸಾರ್ವಜನಿಕರ ಗಮನ ಸೆಳೆದಿದ್ದೇನೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ ಸ್ವತಂತ್ರ ತನಿಖೆಗೆ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಡಿಸಿಎಂ ಆರೋಗ್ಯದಲ್ಲಿ ಏರುಪೇರು: ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಡಾ.ಜಿ. ಪರಮೇಶ್ವರ್ ದಾಖಲು
ಈ ಟೆಂಡರ್ ಪುಕ್ರಿಯೆಯಲ್ಲಿ ಅತ್ಯಂತ ಗಂಭೀರವಾದ ಅಂಶವೆಂದರೆ, ಹೆಚ್ಚುವರಿ ಭದ್ರತಾ ಠೇವಣಿ ಪಡೆಯದಿರುವುದು. ಪ್ಯಾಕೇಜ್-2ರ ಅಂದಾಜು ವೆಚ್ಚ 55.04 ಕೋಟಿ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸುಮಾರು 76.79 ಕೋಟಿ ಹೆಚ್ಚುವರಿ ಭದ್ರತಾ ಠೇವಣಿ ಪಡೆಯಬೇಕಿತ್ತು. ಪ್ಯಾಕೇಜ್-5ಕ್ಕೆ ಸಂಬಂಧಿಸಿದಂತೆ ಸುಮಾರು 15.99 ಕೋಟಿ ಠೇವಣಿ ಪಡೆಯಬೇಕಿತ್ತು. ಒಟ್ಟಾರೆಯಾಗಿ ಸುಮಾರು 112.99 ಕೋಟಿ ಹೆಚ್ಚುವರಿ ಭದ್ರತಾ ಠೇವಣಿ ಪಡೆಯದಿರುವ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಆರ್ಥಿಕ ಇಲಾಖೆಯ ಸೂಚನೆಗಳನ್ನು ನಿರ್ಲಕ್ಷಿಸಿ, ಯಾವ ಆಧಾರದ ಮೇಲೆ ಕಾರ್ಯಾದೇಶ ನೀಡಲಾಯಿತು? ಸರ್ಕಾರದ ಹಣಕಾಸಿನ ಹಿತಾಸಕ್ತಿಗೆ ಧಕ್ಕೆಯಾಗುವ ಈ ನಿರ್ಧಾರಕ್ಕೆ ಹೊಣೆಗಾರರು ಯಾರು? ಎಂಬುದನ್ನು ಪತ್ತೆಹಚ್ಚಬೇಕು ಎಂದು ಅಶೋಕ್ ಹೇಳಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಇತರ ಸಂಸ್ಥೆಗಳ ಅರ್ಹತೆ, ದರಗಳು ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಹೇಗೆ ಮೌಲ್ಯಮಾಪನ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಅರ್ಹ ಸಂಸ್ಥೆಗಳನ್ನು ಕಡೆಗಣಿಸಿ ನಿರ್ದಿಷ್ಟ ಸಂಸ್ಥೆಗೆ ಅನಗತ್ಯ ಅನುಕೂಲ ಕಲ್ಪಿಸಲಾಗಿದೆಯೇ ಎಂಬುದನ್ನು ತನಿಖೆ ಮಾಡಬೇಕು. ಇದಲ್ಲದೆ, ಒಟ್ಟು 21 ಪ್ಯಾಕೇಜ್‌ಗಳ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವ ಮೊದಲು ತ್ಯಾಜ್ಯ ವರ್ಗಾವಣೆ ಕೇಂದ್ರಗಳಿಗಾಗಿ ಅಗತ್ಯ ಸ್ಥಳಗಳನ್ನು ಗುರುತಿಸಲಾಗಿತ್ತೇ, ಅಗತ್ಯ ಅನುಮತಿಗಳನ್ನು ಪಡೆಯಲಾಗಿತ್ತೇ ಮತ್ತು ಯೋಜನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲಾಗಿತ್ತೇ ಎಂಬುದನ್ನೂ ತನಿಖೆಗೆ ಒಳಪಡಿಸಬೇಕು ಎಂದವರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:23 pm, Tue, 27 October 26




