ಬೆಂಗಳೂರು, ಜನವರಿ 25: ಗಣರಾಜ್ಯೋತ್ಸವದ (Republic Day) ಸಂದರ್ಭದಲ್ಲಿ ಬೆಂಗಳೂರಿನ ಸಿಟಿ ಇನ್ಸಿಟ್ಯೂಟ್ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ (Krishna Raja Wadiyar IV) ಪ್ರತಿಮೆ ಅನಾವರಣಗೊಳಿಲಾಗುವುದು ಎಂದು ಇನ್ಸಿಟ್ಯೂಟ್ ಅಧ್ಯಕ್ಷ ಕೆ ಸುಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆಧುನಿಕ ಭಾರತದ ಇತಿಹಾಸದಲ್ಲಿ ಮೈಸೂರು ರಾಜ ಸಂಸ್ಥಾನದ ಆಡಳಿತವನ್ನು ಸುವರ್ಣಾಕ್ಷರಗಳಲ್ಲಿ ಬರೆದಿದಿಡಬೇಕಾಗಿದೆ. ಜನಪರ ಆಡಳಿತಕ್ಕೆ ಅಂದು ವಿಶ್ವ ಪ್ರಸಿದ್ಧವಾಗಿದ್ದ ಮೈಸೂರಿನ ರಾಜ ವಂಶಸ್ಥರು, ಈ ದೇಶದಲ್ಲಿ ಪ್ರಜಾಪ್ರಭುತ್ವ, ಕೈಗಾರಿಕೀಕರಣ, ನೀರಾವರಿ, ಆಧುನಿಕ ಶಿಕ್ಷಣ, ವೈಜ್ಞಾನಿಕ ನಗರ ನಿರ್ಮಾಣ, ಆಡಳಿತ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಬೀರಿದ್ದಾರೆ ಎಂದರು.
ಮೈಸೂರು ರಾಜ ಸಂಸ್ಥಾನದವರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆ ಹಾಗೂ ನಾಡಿಗೆ ಅವರ ಕೊಡುಗೆ ಅದ್ವಿತೀಯ. ಕರ್ನಾಟಕದ ಮನೆ-ಮನಗಳಲ್ಲೂ ಪ್ರಾತಸ್ಮರಣಿಯರಾಗಿರುವ ನಾಲ್ವಡಿಯವರ ಪ್ರತಿಮೆ, ಗಣರಾಜ್ಯೋತ್ಸವದಂದು (ಜನವರಿ 26) ನಗರದ ಸಿಟಿ ಇನ್ಸಿಟ್ಯೂಟ್ನಲ್ಲಿ ಅನಾವರಣಗೊಳ್ಳಲಿದೆ ಎಂದು ಅವರು ಹೇಳಿದರು.
ಸಿಟಿ ಇನ್ಸಿಟ್ಯೂಟ್ ಉಪಾಧ್ಯಕ್ಷ ಎಸ್ಸಿ ಚಂದ್ರಶೇಖರ್, ಗೌರವ ಕಾರ್ಯದರ್ಶಿ ಲಕ್ಷ್ಮೀಶ ಚಂದ್ರ, ಗೌರವ ಖಜಾಂಚಿ ವಿರೂಪಾಕ್ಷ ಬಿಪಿ ಉಪಸ್ಥಿತರಿದ್ದರು.
ಶುಕ್ರವಾರ ಸಂಜೆ 6.30ಕ್ಕೆ ನಡೆಯಲಿರುವ ಈ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶಸ್ಥೆ, ರಾಜಮಾತೆ ಗೌರವಾನ್ವಿತ ಡಾ ಪ್ರಮೋದಾದೇವಿ ಒಡೆಯರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳೆತ್ತರದ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ, ಹಾಗೂ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಸಂಸ್ಥೆಯ ಗೌರವ ಸದಸ್ಯತ್ವ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪೀಣ್ಯ – ನಾಗಸಂದ್ರ ನಡುವೆ ಮೂರು ದಿನ ಮೆಟ್ರೋ ರೈಲು ಸಂಚಾರ ಸ್ಥಗಿತ
ಇದೇ ಸಂದರ್ಭದಲ್ಲಿ ನಾದ ಬ್ರಹ್ಮ ಹಂಸಲೇಖ ನಿರ್ದೇಶಿಸಿರುವ ‘ಜಯಹೇ ನಾಲ್ವಡಿ ಕೃಷ್ಣರಾಜ ಒಡೆಯರ್’ ಕಿರು ಚಿತ್ರದ ಪ್ರದರ್ಶನ ನಡೆಯಲಿದೆ. ಈ ಕಿರು ಚಿತ್ರ ನಾಲ್ವಡಿ ಅವರ ಸಾಧನೆಗಳನ್ನು ಬೆಳ್ಳಿತೆರೆಯಲ್ಲಿ ಪ್ರಸ್ತುತಪಡಿಸಲಿದ್ದು, ಅವರಿಗೆ ಈ ನಾಡಿನ ಕೃತಜ್ಞತೆ ಅರ್ಪಿಸಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ