ಶೆಟ್ಟರ್ ಬಿಜೆಪಿಗೆ ವಾಪಸ್ ಬೆನ್ನಲ್ಲೇ ಲಕ್ಷ್ಮಣ ಸವದಿ ಘರ್ ವಾಪಸಿ ಮಾಡ್ತಾರಾ? ಸಾಹುಕಾರ್ ಹೇಳಿದ್ದೇನು?
ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಕೈಕೊಟ್ಟು ವಾಪಸ್ ಬಿಜೆಪಿ ಸೇರ್ಪಡೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಶೆಟ್ಟರ್ ಬೆನ್ನಲ್ಲೇ ಇದೀಗ ಲಕ್ಷ್ಮಣ ಸವದಿ ಅವರು ಸಹ ಘರ್ ವಾಪಸಿ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಇದೀಗ ಇದಕ್ಕೆ ಸವದಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, (ಜನವರಿ 25): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಚ್ಚರಿ ಎಂಬಂತೆ ಕಾಂಗ್ರೆಸ್‌ಗೆ ಕೈಕೊಟ್ಟು ವಾಪಸ್ ಬಿಜೆಪಿಗೆ ಸೇರ್ಪಡೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಲಕ್ಷ್ಮಣ ಸವದಿ ಅವರು ಸಹ ಬಿಜೆಪಿಗೆ ವಾಪಸ್ ಆಗುತ್ತಾರಾ ಎನ್ನುವ ಚರ್ಚೆಗಳು ನಡೆದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಇದೀಗ ಇದಕ್ಕೆ ಸ್ವತಃ ಲಕ್ಷ್ಮಣ ಸವಧಿ ಪ್ರತಿಕ್ರಿಯಿಸಿದ್ದು, ಮತ್ತೆ ಬಿಜೆಪಿ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ನಾನು ಮತ್ತೆ ಬಿಜೆಪಿಗೆ ಹೋಗಲ್ಲ. ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗಿದ್ದು ಏಕೆಂದು ಗೊತ್ತಿಲ್ಲ. ಶೆಟ್ಟರ್ ಬಿಜೆಪಿಗೆ ಹೋಗಿದ್ದರಿಂದ ಕಾಂಗ್ರೆಸ್‌ಗೆ ಡ್ಯಾಮೇಜ್ ಆಗಲ್ಲ. ರಾಷ್ಟ್ರೀಯ ಪಕ್ಷಗಳು ಎಂದೂ ಒಬ್ಬರ ಮೇಲೆ ಅವಲಂಬಿತವಾಗಿರಲ್ಲ. ಶೆಟ್ಟರ್ ರಾಜೀನಾಮೆ ನೀಡಿದ್ದು ವೈಯಕ್ತಿಕ, ಈ ಬಗ್ಗೆ ಮಾತನಾಡಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಅವರು ಕಾಂಗ್ರೆಸ್ ಬರುವಾಗ ಒಟ್ಟಿಗೆ ನಿರ್ಧಾರ ಮಾಡಿರಲಿಲ್ಲ. ನಾನು ಮೊದಲು ಕಾಂಗ್ರೆಸ್ ಸೇರ್ಪಡೆಯಾಗಿದ್ದು .ಆಮೇಲೆ ಅವರು ಕಾಂಗ್ರೆಸ್ ಗೆ ಬಂದಿದ್ದು. ಅವರಿಗೆ ಯಾವತ್ತು ಟಿಕೆಟ್ ನಿರಾಕರಣೆ ಆಯ್ತಲ್ಲ ಅವಾಗ ಅವರು ಬಂದಿದ್ದು. ಅದಕ್ಕಿಂತ ಮುಂಚೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದು. ನನ್ನದು ಮುಗಿದ ಮೇಲೆ ಅವರು ಬಂದಿದ್ದು. ಶೆಟ್ಟರ್ ಯಾಕೆ ಬಿಜೆಪಿಗೆ ಹೋದ್ರು ಅಂತ ಅವರನ್ನೇ ಕೇಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್‌ಗೆ ಕೈಕೊಟ್ಟ ಜಗದೀಶ್ ಶೆಟ್ಟರ್ ಮಾತೃಪಕ್ಷ ಬಿಜೆಪಿಗೆ ಘರ್ವಾಪಸಿ ಆದರು
ಅವರ ವಿಚಾರ ನಾನು ಉತ್ತರ ಕೊಡಲು ಹೇಗೆ ಸಾಧ್ಯ? ಯಾವ ಕಾರಣದಿಂದ ಬಂದರೂ ಯಾವ ಕಾರಣಕ್ಕೆ ಬಿಟ್ಟು ಹೋದರು ಅವರೇ ಉತ್ತರ ಕೊಡಬೇಕು. ಬಿಜೆಪಿಯವರು ಸಂಪರ್ಕ ಮಾಡುವ ಪ್ರಶ್ನೆ ನನ್ನ ಮುಂದೆ ಬರಲ್ಲ . ನಾನು ಒಂದು ಸಲ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ನಲ್ಲಿ ಮುಂದುವರೆಯುತ್ತೇನೆ. ಕಾಂಗ್ರೆಸ್ ಬಿಡುವ ಪ್ರಶ್ನೆ ನನ್ನ ಮುಂದೆ ಬರುವುದಿಲ್ಲ . ಪ್ರತಿ ದಿನವೂ ಜಗದೀಶ್ ಶೆಟ್ಟರ್ ಮಾತಾಡುತ್ತಾರೆ. ಮಾತನಾಡುವುದಕ್ಕೇನು ಕೊರತೆ ಇಲ್ಲ . ನಾವು ಸ್ನೇಹಿತರು ಹಲವಾರು ವಿಚಾರ ಮಾತಾಡುತ್ತಿರುತ್ತೇವೆ ಕೇಳುತ್ತಿರುತ್ತೇವೆ. ಆದರೆ ಅವರವರ ಇಚ್ಛಾನುಸಾರ ರಾಜಕಾರಣ ಮಾಡ್ತಾ ಇರ್ತಾರೆ ನಾನು ಅವರ ನಿರ್ಧಾರದ ಪರವು ಅಲ್ಲ ವಿರೋಧವೂ ಇಲ್ಲ ಎಮದು ಹೇಳಿದರು.
ನಾನು ಶೆಟ್ಟರ್ ಜೊತೆಗೆ ಕೂತು ಮಾತನಾಡಿ ನಿರ್ಧಾರ ಮಾಡಿ ಬಂದಿದ್ದಲ್ಲ .ಒಟ್ಟಿಗೆ ಹೋಗೋ ಪ್ರಶ್ನೆಯೇ ಇಲ್ಲ. ಬಿಜೆಪಿಯವರಿಗೆ ಈಗ ಅಗತ್ಯ ಇದೆ. ಲೋಕಸಭಾ ಚುನಾವಣೆಯ ಅಗತ್ಯತೆ ಇದೆ ಮತ್ತು ಅನಿವಾರ್ಯತೆ ಇದೆ . ಅದ್ದರಿಂದ ಎಲ್ಲರನ್ನೂ ಸಂಪರ್ಕ ಮಾಡ್ತಾರೆ ಎಲ್ಲರನ್ನೂ ಬನ್ನಿ ಆದದ್ದಾಯ್ತು ಹೋದದ್ದು ಹೋಯಿತು ಅಂತ ಕೇಳ್ತಾರೆ. ಅವರವರ ಇಚ್ಚಾನುಸಾರ ಅವರವರು ತೀರ್ಮಾನ ಮಾಡುತ್ತಾರೆ. ನನ್ನ ತೀರ್ಮಾನ ನಾನು ಎಲ್ಲಿಯೂ ಹೋಗಲ್ಲ. ಇದಿಷ್ಟೇ ನನ್ನ ತೀರ್ಮಾನ ಎಂದು ಕಡ್ಡಿ ಮುರಿದಂತೆ ಹೇಳಿದರು.
ನನಗೆ ಸಚಿವ ಸ್ಥಾನ ನೀಡುವ ವಿಚಾರ ಮುಂದಿನ ದಿನಮಾನಗಳಲ್ಲಿ ನೋಡೋಣ .ಅದರ ಬಗ್ಗೆ ಚರ್ಚೆ ಬೇಡ. ಇಂತ ಸಂದರ್ಭದಲ್ಲಿ ಅಂತ ಚರ್ಚೆಗಳು ಅನಾವಶ್ಯಕ. ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಡುವ ವಿಚಾರ ಮಾಡಿಲ್ಲ. ರಾಷ್ಟ್ರೀಯ ಪಕ್ಷಗಳು ಎಲ್ಲಾ ಬ್ಯಾಲೆನ್ಸ್ ಆಗಿರುತ್ತವೆ, ಒಬ್ಬರು ಬರ್ತಿರ್ತಾರೆ ಇನ್ನೊಬ್ರು ಹೋಗ್ತಿರುತ್ತಾರೆ . ಅದೆಲ್ಲವೂ ರಾಷ್ಟ್ರೀಯ ಪಕ್ಷದಲ್ಲಿ ನಡೆಯುತ್ತಿರುತ್ತದೆ . ಅದರ ಬಗ್ಗೆ ಬಹಳ ದೊಡ್ಡ ಭ್ರಮೆ ಯಲ್ಲಿ ಇರಬಾರದು / ನನ್ನಿಂದಲೇ ಎಲ್ಲಾ ಎಂಬ ಭ್ರಮೆಯಲ್ಲಿ ಇರಬಾರದು .ಎಲ್ಲ ಪ್ರಶ್ನೆಗಳಿಗೂ ಜಗದೀಶ್ ಶೆಟ್ಟರ್ ಮತ್ತು ಕೆಪಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಕೇಳಿ ಉತ್ತರ ಪಡೆದುಕೊಳ್ಳಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ