AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು ಎಲ್ಲಿಯೇ ಕೆಎಸ್​ಆರ್​ಟಿಸಿ ಬಸ್​ ಅಪಘಾತವಾದರೂ ಬರುತ್ತೆ ತುರ್ತು ಸ್ಪಂದನ ವಾಹನ!

ಪ್ರಯಾಣಿಕರ ಸುರಕ್ಷತೆ ಹಾಗೂ ಬಸ್ ಸೇವೆ ಸುಧಾರಿಸಲು ಕೆಎಸ್‌ಆರ್‌ಟಿಸಿ 'ಅಪಘಾತ ತುರ್ತು ಸ್ಪಂದನಾ ವಾಹನ'ಗಳನ್ನು ಆರಂಭಿಸಿದ್ದು, ಅಪಘಾತ ಮತ್ತು ತಾಂತ್ರಿಕ ದೋಷಗಳಿಂದ ನಿಂತ ಬಸ್‌ಗಳಿಗೆ ತ್ವರಿತ ದುರಸ್ತಿ ನೆರವು ನೀಡುವ ಉದ್ದೇಶದಿಂದ ಈ ವಾಹನಗಳು ಕಾರ್ಯನಿರ್ವಹಿಸಲಿವೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಸೇವೆಗೆ ಚಾಲನೆ ನೀಡಿದ್ದು, ಬೆಂಗಳೂರು, ಮೈಸೂರಿನಲ್ಲಿ ಸೇವೆ ಆರಂಭವಾಗಿದೆ.

ಇನ್ನು ಎಲ್ಲಿಯೇ ಕೆಎಸ್​ಆರ್​ಟಿಸಿ ಬಸ್​ ಅಪಘಾತವಾದರೂ ಬರುತ್ತೆ ತುರ್ತು ಸ್ಪಂದನ ವಾಹನ!
ಇನ್ನು ಎಲ್ಲಿಯೇ ಕೆಎಸ್​ಆರ್​ಟಿಸಿ ಬಸ್​ ಅಪಘಾತವಾದರೂ ಬರತ್ತೆ ತುರ್ತು ಸ್ಪಂದನ ವಾಹನ!
ಭಾವನಾ ಹೆಗಡೆ
|

Updated on: Dec 14, 2025 | 8:57 AM

Share

ಬೆಂಗಳೂರು, ಡಿಸೆಂಬರ್ 14: ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುವ ಹಾಗೂ ಬಸ್ ಸೇವೆಯಲ್ಲಿ ಉಂಟಾಗುವ ವ್ಯತ್ಯಯಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಸೇವೆ ಆರಂಭಿಸಿದ್ದು, ‘ಕೆಎಸ್ಆರ್ಟಿಸಿ ಅಪಘಾತ ತುರ್ತು ಸ್ಪಂದನಾ ವಾಹನ’ ಆರಂಭಿಸಿದೆ. ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಈ ನೂತನ ಸೇವೆಗೆ ಚಾಲನೆ ನೀಡಿದ್ದಾರೆ.

ಹೇಗೆ ಕಾರ್ಯನಿರ್ವಹಿಸಲಿದೆ ತುರ್ತು ವಾಹನ?

ಈ ತುರ್ತು ಸೇವಾ ವಾಹನಗಳು ಮಾರ್ಗಮಧ್ಯದಲ್ಲಿ ಅಪಘಾತಕ್ಕೀಡಾದ ಕೆಎಸ್ಆರ್ಟಿಸಿ ಬಸ್​ಗಳ ದುರಸ್ತಿ ಕಾರ್ಯದಲ್ಲಿ ನೆರವಾಗಲಿದೆ. ಮೊದಲ ಹಂತದಲ್ಲಿ ಎರಡು ತುರ್ತು ಸ್ಪಂದನ ವಾಹನಗಳನ್ನು ಬೆಂಗಳೂರು ಹಾಗೂ ಮೈಸೂರು ಕೇಂದ್ರಗಳಲ್ಲಿ ನಿಯೋಜಿಸಲಾಗಿದ್ದು, ಬೆಂಗಳೂರು ಸುತ್ತಮುತ್ತಲಿನ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಉಂಟಾಗುವ ಅವಘಡಗಳಿಗೆ ಶೀಘ್ರವಾಗಿ ಸ್ಪಂದಿಸಲು ಈ ವಾಹನಗಳು ಸಿದ್ಧವಾಗಿವೆ.

ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣಗಳಿಂದ ರಾಜ್ಯದೊಳಗೆ ಮತ್ತು ಅಂತಾರಾಜ್ಯ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳು ಕೆಲವೊಮ್ಮೆ ತಾಂತ್ರಿಕ ದೋಷದಿಂದ ರಸ್ತೆಯಲ್ಲೇ ನಿಂತು ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತವೆ. ಈ ಸಂದರ್ಭಗಳಲ್ಲಿ ಅಗತ್ಯ ಬಿಡಿಭಾಗಗಳು ಮತ್ತು ಉಪಕರಣಗಳೊಂದಿಗೆ ತಾಂತ್ರಿಕ ಸಿಬ್ಬಂದಿಯನ್ನು ತಕ್ಷಣ ಸ್ಥಳಕ್ಕೆ ಕರೆದೊಯ್ಯಲು ಈ ತುರ್ತು ವಾಹನಗಳು ಸಹಕಾರಿಯಾಗಲಿವೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

7.22 ಲಕ್ಷ ರೂ. ವೆಚ್ಚದ ಯೋಜನೆ

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ತಕ್ಷಣ ನೆರವು ನೀಡುವುದರ ಜೊತೆಗೆ ಗಾಯಗೊಂಡ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಸಹ ಈ ವಾಹನಗಳು ಉಪಯುಕ್ತವಾಗಲಿವೆ. ಪ್ರತಿಯೊಂದು ವಾಹನದ ವೆಚ್ಚ 7.22 ಲಕ್ಷ ರೂ ಆಗಿದ್ದು, 2026ರ ಜನವರಿ ಅಂತ್ಯದೊಳಗೆ ಇನ್ನೂ 10 ಹೊಸ ವಾಹನಗಳು ಸೇವೆ ಒದಗಿಸಲು ಸಿದ್ಧವಾಗಲಿವೆ. ಅಷ್ಟೇ ಅಲ್ಲದೆ ರಾಜ್ಯದ ಇತರ ಜಿಲ್ಲೆಗಳಿಗೆ ಹಂತ ಹಂತವಾಗಿ ತುರ್ತು ಸೇವೆಯ ವಾಹನಗಳನ್ನು ನಿಯೋಜಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.