ಪ್ರಯಾಣಿಕರೇ ಗಮನಿಸಿ: ಕ್ರಿಸ್ಮಸ್​​ ಹಿನ್ನೆಲೆ ರಸ್ತೆಗಿಳಿಯಲಿವೆ ಹೆಚ್ಚುವರಿ KSRTC ಬಸ್​​ಗಳು

ಕ್ರಿಸ್ಮಸ್ ಹಬ್ಬದ ಹಿನ್ನಲೆ ಪ್ರಯಾಣಿಕರಿಗೆ KSRTC ಸಿಹಿಸುದ್ದಿ ನೀಡಿದೆ. ಡಿ.19, 20, 24 ರಂದು ಬೆಂಗಳೂರಿನಿಂದ ರಾಜ್ಯದಾದ್ಯಂತ ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ. ನಗರದಿಂದ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ ಸೇವೆ ಲಭ್ಯವಿದ್ದು, ಡಿ.26, 28ರಂದು ಮರಳಿ ಬರುವವರಿಗೂ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಮಾದರಿಯ ಬಸ್​​ಗಳೂ ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರೇ ಗಮನಿಸಿ: ಕ್ರಿಸ್ಮಸ್​​ ಹಿನ್ನೆಲೆ ರಸ್ತೆಗಿಳಿಯಲಿವೆ ಹೆಚ್ಚುವರಿ KSRTC ಬಸ್​​ಗಳು
KSRTC ಬಸ್​​ ನಿಲ್ದಾಣ
Edited By:

Updated on: Dec 19, 2025 | 2:51 PM

ಬೆಂಗಳೂರು, ಡಿಸೆಂಬರ್​​ 19: ಕ್ರಿಸ್ಮಸ್​​ ಹಿನ್ನೆಲೆ ಊರುಗಳಿಗೆ, ಪ್ರವಾಸಕ್ಕೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಗುಡ್​​ನ್ಯೂಸ್​​ ಕೊಟ್ಟಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಡಿ.19, 20 ಮತ್ತು 24ರಂದು ಹೆಚ್ಚುವರಿಯಾಗಿ 1,000 ಬಸ್​​ಗಳು ಸಂಚಾರ ನಡೆಸಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ವಿಶೇಷ ಬಸ್‌ಗಳ ಸಂಚಾರ ನಡೆಯಲಿದ್ದು, ಸಾಮಾನ್ಯ ಸಾರಿಗೆ, ಐರಾವತ ಹಾಗೂ ಸ್ಲೀಪರ್ ಕೋಚ್ ಸೇರಿದಂತೆ ಎಲ್ಲಾ ಐಷಾರಾಮಿ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಕ್ರಿಸ್ಮಸ್ ಹಬ್ಬ ಮುಗಿದ ಬಳಿಕವೂ ವಿಶೇಷ ಬಸ್​ಗಳ ಕಾರ್ಯಾಚರಣೆ ನಡೆಯಲಿದ್ದು, ಡಿ.26 ಹಾಗೂ 28ರಂದು ವಾಪಸ್ ಬರುವ ಪ್ರಯಾಣಿಕರಿಗೂ ವ್ಯವಸ್ಥೆಇದೆ. ರಾಜ್ಯ ಹಾಗೂ ಅಂತಾರಾಜ್ಯದಿಂದಲೂ ಕೆಎಸ್​​ಆರ್​​ಟಿಸಿ ಬಸ್​ಗಳು ಲಭ್ಯ ಇವೆ ಎಂದು KSRTC ತಿಳಿಸಿದೆ.

ಇದನ್ನೂ ಓದಿ:  ಕ್ರಿಸ್ಮಸ್​​, ಹೊಸ ವರ್ಷದ ಹಿನ್ನೆಲೆ ಈ ಮಾರ್ಗಗಳಲ್ಲಿ ವಿಶೇಷ ರೈಲು

ಕೆಂಪೇಗೌಡ ಬಸ್‌ ನಿಲ್ದಾಣ (ಮೆಜೆಸ್ಟಿಕ್​​)ದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಬಸ್​​ಗಳು ವಿಶೇಷ ಕಾರ್ಯಾಚರಣೆ ನಡೆಸಲಿವೆ. ಮೈಸೂರು ರಸ್ತೆ ಬಸ್ ನಿಲ್ದಾಣ (ಸ್ಯಾಟಲೈಟ್​)ದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಯ ಬಸ್​​ಗಳು ತೆರಳಲಿವೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುವುದು, ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟನ್ನು ಒಟ್ಟಿಗೆ ಕಾಯ್ದಿರಿಸಿದರೆ ಬರುವ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:26 pm, Fri, 19 December 25