ಕುರುವ, ಕೊರಮ, ಕೊರಚ ಸಮಾಜ ಪರಿಶಿಷ್ಟ ಜಾತಿಗೆ ಸೇರಿವೆ: ಎಸ್‌ಸಿ ಕೆಟಗರಿಯಿಂದ ತೆಗೆಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ವಸಂತ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕುರುವ, ಕೊರಮ, ಕೊರಚ ಸಮಾಜ ಪರಿಶಿಷ್ಟ ಜಾತಿಗೆ ಸೇರಿದ್ದು, ಯಾವುದೇ ಕಾರಣಕ್ಕೂ ಎಸ್‌ಸಿ ಕೆಟಗರಿಯಿಂದ ತೆಗೆಯಲು ಯಾರಿಗೂ ಸಾಧ್ಯವಿಲ್ಲ. ಈ ಬಗ್ಗೆ ಆತಂಕವಿದ್ದರೆ ದೂರ ಮಾಡಿಬಿಡಿ ಎಂದು ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 31: ಕುರುವ, ಕೊರಮ, ಕೊರಚ ಸಮಾಜ ಪರಿಶಿಷ್ಟ ಜಾತಿಗೆ ಸೇರಿದ್ದು, ಯಾವುದೇ ಕಾರಣಕ್ಕೂ ಎಸ್‌ಸಿ ಕೆಟಗರಿಯಿಂದ ತೆಗೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಸಂತ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ (Nulia Chandaiya Jayanti) ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಬಗ್ಗೆ ಆತಂಕವಿದ್ದರೆ ದೂರ ಮಾಡಿಬಿಡಿ ಎಂದರು. ಕುರುವ, ಕೊರಮ, ಕೊರಚ ಸಮಾಜಕ್ಕೆ ಮೀಸಲಾತಿ ಇದೆ. ಶಿಕ್ಷಣ, ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಈ ಜನಾಂಗಕ್ಕೆ ಇದೆ. ಆದರೆ ಇದರ ಉಪಯೋಗ ಎಲ್ಲರಿಗೂ ಸಿಗುತ್ತಿಲ್ಲ, ಕೆಲವರಿಗೆ ಸಿಗುತ್ತಿದೆ ಎಂದು ಹೇಳಿದರು.
ಬಸವ ಶರಣರು ವೈಜ್ಞಾನಿಕವಾಗಿ ಬೆಳೆಯಬೇಕು. ಜಾತಿ ಪದ್ದತಿ ಹೋಗಬೇಕು. ಮನುಷ್ಯರೆಲ್ಲರೂ ಒಂದೇ. ಸ್ವಾರ್ಥಿಗಳು ಜಾತಿ ಮಾಡಿದ್ದಾರೆ. ನಾವು ಕುರಿ ಕಾಯತ್ತಾ ಇದ್ದೇವು, ಕುರುಬರು ಅಂತಾ ಮಾಡಿದರು. ದನ ಕಾಯೋರಿಗೆ ಗೊಲ್ಲರು ಅಂದರು. ವೃತ್ತಿಗೆ ಅನುಗುಣವಾಗಿ ಜಾತಿ ಮಾಡಿದರು. ಇವತ್ತಿನ ಸಮಾಜದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಹೇಗಿದ್ದೇವೆ ಅನ್ನೋದು ಮುಖ್ಯ.
ಇದನ್ನೂ ಓದಿ: ಸರ್ಕಾರದಿಂದ ರಾಜ್ಯ, ಜಿಲ್ಲಾ ಮಟ್ಟದಲ್ಲಿ ನಾರಾಯಣ ಗುರುಗಳ ಜಯಂತಿ ಆಚರಣೆ ಮಾಡಲಾಗುವುದು: ಸಿಎಂ ಸಿದ್ದರಾಮಯ್ಯ
ಎಷ್ಟು ಕಾಯಕ ಮಾಡುತ್ತೇವೆ ಅಷ್ಟೇ ಬೆಲೆ ಇರಬೇಕು. ಶ್ರಮಕ್ಕೆ ಫಲ ಇರಬೇಕು. ಬಸವಾದಿ ಶರಣರಲ್ಲಿ ಅಗ್ರಗಣ್ಯರು ನುಲಿಯ ಚಂದಯ್ಯ. ಅನುಭವಮಂಟಪ ಪ್ರಜಾಪ್ರಭುತ್ವಕ್ಕೆ ಆದಿ. ಅನುಭವ ಮಂಟಪದಲ್ಲಿ ಎಲ್ಲಾ ಜಾತಿಯವರು ಸಮಾನವಾಗಿ ಕುಳಿತುಕೊಳ್ಳುತ್ತಿದ್ದರು.
ಮನುಷ್ಯರಲ್ಲಿ ಅಂತಸ್ತುಗಳನ್ನು ತೊಡೆದು ಹಾಕುವುದೇ ಸಾಮಾಜಿಕ ಕ್ರಾಂತಿ. ಧರ್ಮ ಅಂದರೆ ಎಲ್ಲರಿಗೂ ಒಳ್ಳೆಯದು ಬಯಸುವುದು. ದಯವೇ ಧರ್ಮದ ಮೂಲವಯ್ಯ. ಮನುಷ್ಯ ಮನುಷ್ಯರನ್ನ ಪ್ರೀತಿಸುವುದೇ ಧರ್ಮ. ಮನುಷ್ಯ ಮನುಷ್ಯನನ್ನು ನೋಯಿಸುವುದೇ ಅಧರ್ಮ. ಅದಕ್ಕೆ ಎಲ್ಲರೂ ಮನುಷ್ಯರಾಗಿ ಇರಬೇಕು ಎಂದು ಹೇಳಿದರು.
ಬಡವರೂ ಊಟ ಮಾಡಬೇಕು, ಹೀಗಾಗಿ ಅನ್ನಭಾಗ್ಯ ಯೋಜನೆ ಜಾರಿ
ವಚನಗಳ ಮೂಲಕ ಜನರನ್ನು ತಲುಪುವ ಕೆಲಸ ಮಾಡಿದರು. ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಅಂಬೇಡ್ಕರ್ ಹೇಳಿದಂತೆ ಇತಿಹಾಸ ಗೊತ್ತಿಲ್ಲದವರು, ಇತಿಹಾಸ ನಿರ್ಮಿಸಲಾರದು. ಶ್ರೀಮಂತರು ಮಾತ್ರ ಊಟ ಮಾಡಬೇಕಾ, ಬಡವರೂ ಊಟ ಮಾಡಬೇಕು, ಹೀಗಾಗಿ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ. ಹತ್ತು ಕೆ.ಜಿ ಅಕ್ಕಿ ಕೋಡೋಕೆ ತೀರ್ಮಾನ ಮಾಡಿದೇವು. ಕೇಂದ್ರ ಸರ್ಕಾರದವರು ಕೊಡಲಿಲ್ಲ. ಬಡವರಿಗೆ ಅಕ್ಕಿ ಕೊಟ್ಟರೆ ಇವರಿಗೆ ಒಳ್ಳೆ ಹೆಸರು ಬರುತ್ತೆ ಅಂತಾ ಕೊಡಲಿಲ್ಲ. ಅಕ್ಕಿ ಬದಲು ಹಣ ಕೊಡುತ್ತೇವೆ. ಅಕ್ಕಿ ಸಿಕ್ಕಾಗ ಕೊಡುತ್ತೇವೆ. ಮೂರು ಹೊತ್ತು ಊಟ ಮಾಡಬೇಕು ಅಂತ ಕೊಡುತ್ತಿದ್ದೇವೆ. ಅಕ್ಕಿ ಮಾರಿ ಕೊಂಡರೆ ಮಾರಿಕೊಳ್ಳಿ ಬಿಡಿ ಎಂದರು.
ಇದನ್ನೂ ಓದಿ: 40 – 45 ಜನ ಸಂಪರ್ಕದಲ್ಲಿದ್ದಾರೆ, ಒಪ್ಪಿಗೆ ಸಿಕ್ಕರೆ ಒಂದು ದಿನದ ಕೆಲಸ, ಆದರೆ; ಬಿಎಲ್ ಸಂತೋಷ್ ಸ್ಫೋಟಕ ಹೇಳಿಕೆ
ಶಕ್ತಿ ಯೋಜನೆ ಬಗ್ಗೆ ಮಾತನಾಡಿದ ಅವರು, ಇದುವರೆಗೂ 48,500 ಕೋಟಿ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ದಿನಕ್ಕೆ 50 ಲಕ್ಷ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ಬಡವರ ಜೇಬಿನಲ್ಲಿ ದುಡ್ಡಿರಬೇಕು ಅಂತಾ ಮನೆ ಯಜಮಾನಿಗೆ ಎರಡು ಸಾವಿರ ಕೊಡುತ್ತಿದ್ದೇವೆ. ಇದರಿಂದ ಜೀವನ ಆಗದೇ ಇರಬಹುದು, ತಿಂಗಳಿಗೆ ನಾಲ್ಕರಿಂದ ಐದು ಸಾವಿರ ಸಿಗುತ್ತದೆ. ಈ ದೇಶದ ಸಂಪತ್ತು ಎಲ್ಲರಿಗೂ ಹಂಚಿಕೆ ಆಗಬೇಕೆಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದ್ದೇವೆ. ವೋಟ್ ಹಾಕೋಕೆ ಮಾತ್ರ ಸ್ವಾತಂತ್ರ್ಯವಲ್ಲ, ಎಲ್ಲಾ ರೀತಿಯ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:15 pm, Thu, 31 August 23