AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shakti scheme: ಉಚಿತ ಪ್ರಯಾಣಕ್ಕೆ ಐಡಿ ಕೇಳಿದ ಬಿಎಂಟಿಸಿ ಕಂಡಕ್ಟರ್ ಜತೆ ಯುವತಿ ಜಗಳ; ವಿಡಿಯೋ ವೈರಲ್

ಯುವತಿಯು ತಾನು ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರಿ ಉದ್ಯೋಗಿ ಎಂದು ಹೇಳಿಕೊಂಡು ಕಂಡಕ್ಟರ್ ಜೊತೆ ಜಗಳವಾಡಿರುವುದು ವಿಡಿಯೋದಲ್ಲಿದೆ.

TV9 Web
| Edited By: |

Updated on:Jul 26, 2023 | 6:54 PM

Share

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯ ಲಾಭ ಪಡೆಯಲು ಯುವತಿಯೊಬ್ಬರು ಬಿಎಂಟಿಸಿ ಬಸ್ (BMTC Bus) ಕಂಡಕ್ಟರ್ ಜೊತೆ ಜಗಳವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಗುರುತಿನ ಚೀಟಿಯನ್ನು ಕೇಳಿದಾಗ ನೀಡದ ಹಿನ್ನೆಲೆಯಲ್ಲಿ ಯುವತಿ ಮತ್ತು ಕಂಡಕ್ಟರ್ ನಡುವೆ ವಾಗ್ವಾದ ಪ್ರಾರಂಭವಾಯಿತು. ಕರ್ನಾಟಕ ನಿವಾಸದ ವಿಳಾಸವನ್ನು ಹೊಂದಿರದ ಯುವತಿ ಫೋನ್‌ನಿಂದ ಐಡೆಂಟಿಟಿ ಕಾರ್ಡ್ ಚಿತ್ರವನ್ನು ತೋರಿಸಿದ್ದಾರೆ. ಆದರೆ ಅದನ್ನು ಒಪ್ಪದ ಕಂಡಕ್ಟರ್ ಆಧಾರ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ ತೋರಿಸುವಂತೆ ಕೇಳಿದ್ದಾರೆ.

ಯುವತಿಯು ತಾನು ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರಿ ಉದ್ಯೋಗಿ ಎಂದು ಹೇಳಿಕೊಂಡು ಕಂಡಕ್ಟರ್ ಜೊತೆ ಜಗಳವಾಡಿರುವುದು ವಿಡಿಯೋದಲ್ಲಿದೆ. ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಸಂಬಂಧಿಸಿದ ಗುರುತಿನ ಚೀಟಿಯಲ್ಲಿ ನಿವಾಸದ ವಿಳಾಸವಿದೆ. ಆ ವಿಳಾಸ ಕರ್ನಾಟಕದದ್ದು. ಅದನ್ನು ಪರಿಗಣಿಸಿ ಪ್ರಯಾಣಕ್ಕೆ ಅನುಮತಿ ನೀಡದಿದ್ದರೆ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಆಕೆ ಹೇಳುತ್ತಿರುವುದು ವೀಡಿಯೊದಲ್ಲಿದೆ.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ನೀಡಬೇಕಿದ್ದರೆ ಅವರು ಕರ್ನಾಟಕದ ವಸತಿ ವಿಳಾಸಗಳೊಂದಿಗೆ ಸರ್ಕಾರಿ ಗುರುತಿನ ಪುರಾವೆಗಳನ್ನು ಒದಗಿಸಬೇಕು ಎಂದು ಬಸ್‌ನಲ್ಲಿದ್ದ ಪ್ರಯಾಣಿಕರು ಯುವತಿಗೆ ತಿಳಿಸಿದರು. ಆಗ ಬಸ್‌ನಲ್ಲಿದ್ದ ಪ್ರಯಾಣಿಕರೊಂದಿಗೆ ಕೂಡ ಯುವತಿ ಜಗಳವಾಡುತ್ತಿರುವುದು ಕಂಡು ಬಂದಿದೆ. ಬನಶಂಕರಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Mysuru Bengaluru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಸಣ್ಣ ವಾಹನಗಳ ನಿಷೇಧ ಸಮರ್ಥಿಸಿದ ಅಲೋಕ್ ಕುಮಾರ್

ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ಶಕ್ತಿ ಯೋಜನೆಯು ಕರ್ನಾಟಕದ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣದ ಅವಕಾಶ ಕಲ್ಪಿಸುತ್ತದೆ. ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಉಚಿತ ಬಸ್ ಸೇವೆಯನ್ನು ಪಡೆಯಲು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಪಾಸ್‌ಪೋರ್ಟ್ ಅಥವಾ ಇತರ ಸರ್ಕಾರದಿಂದ ಅನುಮೋದಿತ ಐಡಿಯನ್ನು ಒದಗಿಸುವುದು ಅತ್ಯಗತ್ಯ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Wed, 26 July 23