ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ನಾಳೆಯೇ ಕೊನೆ; ಈವರೆಗೆ 4 ಲಕ್ಷ ಮಂದಿ ಭೇಟಿ
Lal Bagh Flower show; ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು ಕರ್ನಾಟಕದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಗೆ ಅರ್ಪಿಸಲಾಗಿದೆ. ವಿಧಾನಸೌಧದ 18 ಅಡಿ ಪ್ರತಿಕೃತಿ, 14 ಅಡಿಯ ಕೆಂಗಲ್ ಹನುಮಂತಯ್ಯ ಪ್ರತಿಮೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷವಾಗಿದೆ.
ಬೆಂಗಳೂರು: ನಗರದ ಲಾಲ್‌ಬಾಗ್‌ನಲ್ಲಿ (Lal Bagh) ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ (Flower Show) ಈವರೆಗೆ ಸುಮಾರು ನಾಲ್ಕು ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಫಲಪುಷ್ಪ ಪ್ರದರ್ಶನವು ಆಗಸ್ಟ್ 15ರ ಮಂಗಳವಾರದಂದು ಮುಕ್ತಾಯಗೊಳ್ಳಲಿದ್ದು, ಅಂದು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. 214ನೇ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 4 ರಂದು ಉದ್ಘಾಟಿಸಿದ್ದರು. ತೋಟಗಾರಿಕಾ ಇಲಾಖೆಯು ಈವರೆಗೆ ಪ್ರದರ್ಶನಕ್ಕೆ ಭೇಟಿ ನೀಡಿದ ಜನರಿಗೆ ಒಟ್ಟು 1.8 ಕೋಟಿ ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಲಾಲ್ಬಾಗ್ ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಹಿರಿಯರಿಗೆ 70 ರೂ., ಮಕ್ಕಳಿಗೆ 30 ರೂ. ಹಾಗೂ ಗುರುತಿನ ಚೀಟಿ ಹೊಂದಿರುವ ವಿದ್ಯಾರ್ಥಿಗಳಿಗೆ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ 20,000 ವಿದ್ಯಾರ್ಥಿಗಳು ಸೇರಿದಂತೆ ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು.
ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು ಕರ್ನಾಟಕದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಗೆ ಅರ್ಪಿಸಲಾಗಿದೆ. ವಿಧಾನಸೌಧದ 18 ಅಡಿ ಪ್ರತಿಕೃತಿ, ಕೆಂಗಲ್ ಹನುಮಂತಯ್ಯ ಅವರ 14 ಅಡಿಯ ಪ್ರತಿಮೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷವಾಗಿದೆ.
ಸೋಮವಾರ ಫಲಪುಷ್ಪ ಪ್ರದರ್ಶನಕ್ಕೆ ಕನ್ನಡ ನಟಿ ರಚಿತಾ ರಾಮ್ ಭೇಟಿ ನೀಡಿದ್ದು, ಸ್ವಚ್ಛತಾ ಕಾರ್ಮಿಕನಿಗೆ ಅವರ ಕಾರು ಡಿಕ್ಕಿ ಹೊಡೆದಿದೆ. ಆದರೆ ಘಟನೆಯ ನಂತರ ಕಾರು ನಿಲ್ಲಿಸದೆ ಅವರು ಫಲಪುಷ್ಪ ಪ್ರದರ್ಶನದತ್ತ ಸಾಗಿದ್ದರು.
ಇದನ್ನೂ ಓದಿ: Independence Day: ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ, 18 ಪೊಲೀಸರಿಗೆ ವಿಶಿಷ್ಟ ಸೇವಾ ಪದಕ ಘೋಷಣೆ
ಲಾಲ್‌ಬಾಗ್‌ನಲ್ಲಿ ವರ್ಷಕ್ಕೆ ಎರಡು ಬಾರಿ ಗಣರಾಜ್ಯ ಮತ್ತು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಫಲಪುಷ್ಪ ಪ್ರದರ್ಶನವು 200 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಇದುವರೆಗೆ ಎರಡು ಬಾರಿ ಮಾತ್ರ ಆಯೋಜನೆಯಾಗಿರಲಿಲ್ಲ. ವಿಶ್ವಯುದ್ಧ 2 ರ ಸಮಯದಲ್ಲಿ ಮತ್ತು ಕೋವಿಡವ-19 ಸಾಂಕ್ರಾಮಿಕ ಸಮಯದಲ್ಲಿ ಫಲಪುಷ್ಪ ಪ್ರದರ್ಶನ ನಿಲ್ಲಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ