
ಬೆಂಗಳೂರು, ಜೂನ್ 11: ಬೆಂಗಳೂರಿನ (Bengaluru) ಹಸಿರು ಹೃದಯ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಲಾಲ್‌ಬಾಗ್ (Lalbagh) ಸಸ್ಯಕಾಶಿಯಲ್ಲಿ ವೀಕ್ಷಕರಿಗಾಗಿ ಮತ್ತೊಂದು ವಿಶೇಷ ಆಕರ್ಷಣೆ ಸಜ್ಜಾಗಿದೆ. ಪರಿಸರ ಪ್ರಿಯರು ಹಾಗೂ ಸಾರ್ವಜನಿಕರ ದೀರ್ಘಕಾಲದ ನಿರೀಕ್ಷೆಯಾಗಿದ್ದ ಅತ್ಯಾಧುನಿಕ ‘ಬೋನ್ಸಾಯ್ ಪಾರ್ಕ್ (Bonsai Park)’ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದ್ದು, ಪ್ರವಾಸಿಗರನ್ನು ಸೆಳೆಯಲು ಸಿದ್ಧಗೊಂಡಿದೆ. ಆದರೆ, ಮತ್ತೊಂದೆಡೆ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ (ಆಗಸ್ಟ್ 15) ಅಂಗವಾಗಿ ಜಾಗತಿಕ ಗಮನ ಸೆಳೆಯುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ (Flower Show) ಸಿದ್ಧತೆಗಳಿಗೆ ಈ ಬಾರಿ ಆರಂಭದಲ್ಲೇ ಭಾರಿ ಹಿನ್ನಡೆಯಾಗಿದೆ. ತೋಟಗಾರಿಕೆ ಇಲಾಖೆಗೆ ಇನ್ನೂ ಸಚಿವರ ನೇಮಕವಾಗದ ಕಾರಣ ಪ್ರದರ್ಶನದ ಪ್ರಮುಖ ಆಕರ್ಷಣೆಯಾದ ‘ವಿಶೇಷ ಥೀಮ್’ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.
ಬೋನ್ಸಾಯ್ ಪಾರ್ಕ್
ಲಾಲ್‌ಬಾಗ್‌ಗೆ ಆಗಮಿಸುವ ವಾಯುವಿಹಾರಿಗಳು ಹಾಗೂ ದೇಶ-ವಿದೇಶಗಳ ಪ್ರವಾಸಿಗರಿಗೆ ಹೊಸ ಅನುಭವ ನೀಡಲು ತೋಟಗಾರಿಕೆ ಇಲಾಖೆ ಸರ್ವಸನ್ನದ್ಧವಾಗಿದೆ. ಇಲ್ಲಿ ನಿರ್ಮಾಣಗೊಂಡಿರುವ ನೂತನ ಬೋನ್ಸಾಯ್ ಪಾರ್ಕ್‌ನಲ್ಲಿ ಅತ್ಯಂತ ಅಪರೂಪದ ಹಾಗೂ ವಿವಿಧ ತಳಿಗಳ ಕುಬ್ಜ ಗಿಡಗಳನ್ನು (Bonsai Plants) ಅತ್ಯಂತ ಆಕರ್ಷಕವಾಗಿ ಪೋಷಿಸಿ ಪ್ರದರ್ಶನಕ್ಕಿಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಲಾಲ್‌ಬಾಗ್ ಅಪರ ನಿರ್ದೇಶಕರಾದ ಡಾ. ಎಂ. ಜಗದೀಶ್, ‘ವಿಶಿಷ್ಟ ತಳಿಗಳನ್ನೊಳಗೊಂಡ ಈ ಪಾರ್ಕ್ ಪ್ರಕೃತಿ ಪ್ರಿಯರು ಮತ್ತು ಸಸ್ಯ ಸಂಶೋಧಕರ ಜ್ಞಾನಾರ್ಜನೆಗೆ ಹಾಗೂ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಕೇಂದ್ರ ಬಿಂದುವಾಗಲಿದೆ’ ಎಂದು ತಿಳಿಸಿದ್ದಾರೆ.
ಒಂದೆಡೆ ಹೊಸ ಪಾರ್ಕ್ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಆಗಸ್ಟ್‌ನಲ್ಲಿ ನಡೆಯಬೇಕಿರುವ ಪ್ರತಿಷ್ಠಿತ ಫಲಪುಷ್ಪ ಪ್ರದರ್ಶನದ ಯೋಜನೆಗೆ ತಾಂತ್ರಿಕ ಅಡ್ಡಿ ಎದುರಾಗಿದೆ. ಸಾಮಾನ್ಯವಾಗಿ ಪ್ರದರ್ಶನಕ್ಕೆ ಮೂರ್ನಾಲ್ಕು ತಿಂಗಳುಗಳ ಮುಂಚೆಯೇ ಅಧಿಕಾರಿಗಳು, ತಜ್ಞರು ಮತ್ತು ಸಚಿವರ ಮಟ್ಟದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಒಂದು ನಿರ್ದಿಷ್ಟ ಥೀಮ್ ಅನ್ನು (Theme) ಅಂತಿಮಗೊಳಿಸಲಾಗುತ್ತದೆ. ಆ ಥೀಮ್ ಆಧಾರದ ಮೇಲೆಯೇ ಹೂವುಗಳ ಮಾದರಿ ವಿನ್ಯಾಸ, ಬೃಹತ್ ಕಲಾಕೃತಿಗಳ ನಿರ್ಮಾಣ, ವಿಶೇಷ ಸಸ್ಯಗಳ ಆಮದು ಹಾಗೂ ಅಲಂಕಾರಿಕ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಪ್ರಸ್ತುತ ಹೊಸ ಸಂಪುಟದಲ್ಲಿ ತೋಟಗಾರಿಕೆ ಇಲಾಖೆಗೆ ಇನ್ನೂ ಸಚಿವರನ್ನು ನೇಮಕ ಮಾಡದ ಕಾರಣ, ಹೈ ಪ್ರೊಫೈಲ್ ಸಭೆಗಳೇ ನಡೆದಿಲ್ಲ. ಪರಿಣಾಮವಾಗಿ, ಈ ವರ್ಷದ ಪ್ರದರ್ಶನ ಯಾವುದರ ಆಧಾರದ ಮೇಲೆ ನಡೆಯಬೇಕು ಎಂಬ ಮೂಲ ಯೋಜನೆಯೇ ಇನ್ನೂ ನಿರ್ಧಾರವಾಗಿಲ್ಲ.
ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರನ್ನು ಆಕರ್ಷಿಸುವ ಈ ಪ್ರದರ್ಶನದಲ್ಲಿ ಥೀಮ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಥೀಮ್ ಘೋಷಣೆಯಾಗದ ಕಾರಣ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಂಗಾಲಾಗಿದ್ದಾರೆ. ಡಾ. ಎಂ. ಜಗದೀಶ್ ಅವರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದು, ಥೀಮ್ ಘೋಷಣೆ ಮತ್ತಷ್ಟು ವಿಳಂಬವಾದರೆ ಹೂವುಗಳನ್ನು ಬೆಳೆಸಲು ಮತ್ತು ಕಲಾಕೃತಿಗಳನ್ನು ವಿನ್ಯಾಸಗೊಳಿಸಲು ಕನಿಷ್ಠ ಅವಧಿಯೂ ಸಿಗುವುದಿಲ್ಲ. ಇದು ನೇರವಾಗಿ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನದ ಭವ್ಯತೆ ಹಾಗೂ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಇಲಾಖೆಗೆ ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು