ಲಾಲ್​ಬಾಗ್ ಬಂಡೆಯಿಂದಲೇ ಬೆಂಗಳೂರು ರಕ್ಷಣೆ! ಸುರಂಗ ರಸ್ತೆ ನಿರ್ಮಾಣಕ್ಕೆ ಅಸಮಾಧಾನ, ತಜ್ಞರು ಹೇಳಿದ್ದೇನು ನೋಡಿ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಸುರಂಗ ಮಾರ್ಗ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕೆ ಬೆಂಗಳೂರು ಇತಿಹಾಸಕಾರರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ, ಈ ಸುರಂಗ ರಸ್ತೆಯು ಲಾಲ್​ಬಾಗ್ ಕೆಳಗಡೆಯಿಂದ ಹಾದುಹೋಗಲಿದ್ದು ಅದರಿಂದ ತೊಂದರೆಯಾಗುವ ಸಾಧ್ಯತೆಯಿದೆ. ಲಾಲ್​ಬಾಗ್​ನಲ್ಲಿರುವ ಬಂಡೆ ಬೆಂಗಳೂರಿನಲ್ಲಿ ಭೂಕಂಪ ಆಗದಂತೆ ತಡೆಯುತ್ತಿದೆ ಎನ್ನುತ್ತಿದ್ದಾರೆ ತಜ್ಞರು!

ಲಾಲ್​ಬಾಗ್ ಬಂಡೆಯಿಂದಲೇ ಬೆಂಗಳೂರು ರಕ್ಷಣೆ! ಸುರಂಗ ರಸ್ತೆ ನಿರ್ಮಾಣಕ್ಕೆ ಅಸಮಾಧಾನ, ತಜ್ಞರು ಹೇಳಿದ್ದೇನು ನೋಡಿ
ಲಾಲ್​ಬಾಗ್ ಬಂಡೆಯಿಂದಲೇ ಬೆಂಗಳೂರು ರಕ್ಷಣೆ! ಸುರಂಗ ರಸ್ತೆ ನಿರ್ಮಾಣಕ್ಕೆ ಅಸಮಾಧಾನ
Updated By: Ganapathi Sharma

Updated on: Oct 28, 2025 | 7:35 AM

ಬೆಂಗಳೂರು, ಅಕ್ಟೋಬರ್ 28: ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ ಸುರಂಗ ರಸ್ತೆಯನ್ನು (Bengaluru Tunnel Road) ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶ. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕನಸಿನ ಯೋಜನೆಯಾಗಿರುವ ಇದು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಕೇವಲ ಕಾರುಗಳಿಗಾಗಿಯೇ ಮಾಡಬೇಕೆಂದಿರುವ ಈ ಸುರಂಗಕ್ಕೆ ಸಾವಿರಾರು ಕೋಟಿ ರೂ. ವ್ಯಯ ಏಕೆ? ಅಲ್ಲದೆ ಈ ಸುರಂಗವು ಲಾಲ್ ಬಾಗ್ ಕೆಳಗಡೆಯಿಂದ ಹಾದುಹೋಗಲಿದ್ದು, ಅದರಿಂದ ಲಾಲ್ ಬಾಗ್ ಉದ್ಯಾನಕ್ಕೆ ಹಾನಿಯಾಗುತ್ತದೆ ಎಂದು ವಿಪಕ್ಷಗಳು, ಪರಿಸರವಾದಿಗಳು ದನಿಯೆತ್ತಿದ್ದಾರೆ.

ಲಾಲ್​ಬಾಗ್​ನಲ್ಲಿ ಎಕ್ಸಿಟ್ ರಾಂಪ್ ವೇ ನಿರ್ಮಾಣಕ್ಕೆ ಸಿದ್ಧತೆ‌ ಮಾಡಿಕೊಳ್ಳಲಾಗಿದೆ. ಲಾಲ್​ಬಾಗ್​ನಲ್ಲಿ ಯಾವುದೇ ಕಾರಣಕ್ಕೂ ಟನಲ್ ನಿರ್ಮಾಣ ಬೇಡವೆಂಬ ಒತ್ತಾಯ ಕೇಳಿ ಬರುತ್ತಿದ್ದು, ಖ್ಯಾತ ಇತಿಹಾಸಕಾರ ಸುರೇಶ್ ಮೂನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತಿಹಾಸ ತಜ್ಞ ಸುರೇಶ್ ಮೂನ ಹೇಳಿದ್ದೇನು?

ಲಾಲ್​ಬಾಗ್ ಇತಿಹಾಸ ಪ್ರಸಿದ್ಧ ಸ್ಥಳ ಎಂಬುದು ಒಂದು ಕಾರಣವಾದರೆ, ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಗರವರನ್ನು ಅಳೆದು-ತೂಗಿ ನೋಡಿಯೇ ಕಟ್ಟಿದ್ದಾರೆ. ಲಾಲ್​ಬಾಗ್​ನಲ್ಲಿರುವ ಶಿಲಾಪದರ ನೋಡಿ ಸುರಕ್ಷಿತ ನಗರ ನಿರ್ಮಾಣ ಮಾಡಿದ್ದಾರೆ. ಟನಲ್ ನಿರ್ಮಾಣಕ್ಕೆ ಸಿದ್ಧಾಪುರ ಕಡೆಯಿಂದ ಬರುವ ಯೋಜನೆ ಸಿದ್ಧ ಮಾಡಲಾಗುತ್ತಿದೆ. ಸಿದ್ಧಾಪುರ ಪಕ್ಕವೇ ಇರುವ ಲಾಲ್​ಬಾಗ್​​ನಲ್ಲಿ ಬಂಡೆ ಇದೆ. ಇದು ಬೃಹದಾಕಾರದ ಬಂಡೆ. ಇದು ಸಾಮಾನ್ಯ ಬಂಡೆಯಲ್ಲ. 1975 ರಲ್ಲಿ ಈ ಬಂಡೆಯನ್ನು ನ್ಯಾಷನಲ್ ರೇರೆಸ್ಟ್ ಜಿಯೊಲಾಜಿಕಲ್ ಮಾನ್ಯುಮೆಂಟ್ ಎಂದು ಘೋಷಿಸಿದ್ದಾರೆ‌ ಎಂದು ಇತಿಹಾಸಕಾರ ಸುರೇಶ್ ಮೂನಾ ಹೇಳಿದ್ದಾರೆ.

ಭೂಗರ್ಭ ಶಾಸ್ತ್ರಜ್ಞರು ಹೇಳೋದೇನು?


ಭೂಗರ್ಭ ಶಾಸ್ತ್ರಜ್ಞರು ಅಥವಾ ಭೂವಿಜ್ಞಾನಿಗಳ ಪ್ರಕಾರ, ಬೆಂಗಳೂರನ್ನು ಬಹಳ ಕಠಿಣವಾದ ಶಿಲಾಪದರದ ಮೇಲೆ ಕಟ್ಟಲಾಗಿದೆ. ಶಿಲಾಪದರವನ್ನು ಕೊರೆಯಲು ಕಷ್ಟವಿದೆ, ಇದು ಅತ್ಯಂತ ಕಠಿಣವಾಗಿದೆ‌‌. ಮೆಟ್ರೋ ಸುರಂಗ ಮಾರ್ಗ ಮಾಡುವಾಗಲೇ ಕಷ್ಟ ಏನೆಂಬುದು ಗೊತ್ತಾಗಿದೆ. ಅಭಿವೃದ್ಧಿಗೆಂದು ಪಾರಂಪರಿಕ ಸ್ಥಳಕ್ಕೆ ಧಕ್ಕೆ ತರಬಾರದು. ಲಾಲ್ ಬಾಗ್ ಬಂಡೆ ಮೇಲೆ ಹೈದರಾಲಿ ಕುಳಿತು ನೋಡುತ್ತಿದ್ದ ಬಗ್ಗೆಯೂ ಉಲ್ಲೇಖ ಇದೆ. ಕೆಂಪೇಗೌಡರ ಗೋಪುರಕ್ಕೂ ಟನಲ್ ಪ್ರಾಜೆಕ್ಟ್ ಡ್ಯಾಮೇಜ್ ತರುವ ಭೀತಿ ಇದೆ.

ಈ ಬಗ್ಗೆ ಮಾತನಾಡಿದ ಪರಿಸರ ಪ್ರೇಮಿಗಳು ಮತ್ತು ವಾಯುವಿಹಾರಿಗಳು, ಯಾವುದೇ ಕಾರಣಕ್ಕೂ ಲಾಲ್​ಬಾಗ್​ನಲ್ಲಿ ಟನಲ್ ರೋಡ್ ಕಾಮಗಾರಿ ಬೇಡ. ಇದರಿಂದ ಮರಗಳಿಗೆ ಹಾನಿಯಾಗುತ್ತದೆ. ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಬೆಂಗಳೂರಿನ ಎರಡು ಕಣ್ಣುಗಳಿಂದಂತೆ, ಇದನ್ನು ನಾವು ಕಾಪಾಡಿಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಲಾಲ್​ಬಾಗ್​ನ 6 ಎಕರೆ ಅಲ್ಲ, 6 ಇಂಚನ್ನೂ ಸುರಂಗ ಮಾಡಲು ಬಿಡಲ್ಲ: ಗುಡುಗಿದ ತೇಜಸ್ವಿ ಸೂರ್ಯ

ಈ ಮಧ್ಯೆ, ಸುರಂಗ ರಸ್ತೆ ಯೋಜನೆ ಬಗ್ಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಅಭಿಪ್ರಾಯ ಪಡೆಯುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಸಂಸದರು ಹಾಗೂ ಸಚಿವರ ನಡುವಣ ಸಭೆ ಇಂದು ನಿಗದಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ