ರೋಹಿಣಿ ಸಿಂಧೂರಿ ಪತಿ ವಿರುದ್ದ ಯಲಹಂಕದಲ್ಲಿ ಭೂ ಕಬಳಿಕೆ ಆರೋಪ: ಡಿಜಿಪಿ ಪ್ರವೀಣ್ ಸೂದ್​ಗೆ ಟ್ವೀಟ್ ಮೂಲಕ ದೂರು

| Updated By: ಆಯೇಷಾ ಬಾನು

Updated on: Dec 05, 2022 | 1:44 PM

ಬಾಲಿವುಡ್ ಕಮೆಡಿಯನ್ ಮಹಮೂದ್ ಆಲಿ ಪುತ್ರ ಲಕ್ಕಿ ಆಲಿ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಸುಧೀರ್ ರೆಡ್ಡಿ ಹಾಗು ಮಧು ರೆಡ್ಡಿ ಎಂಬುವವರಿಂದ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಲಕ್ಕಿ ಆಲಿ ಆರೋಪಿಸಿದ್ದಾರೆ.

ರೋಹಿಣಿ ಸಿಂಧೂರಿ ಪತಿ ವಿರುದ್ದ ಯಲಹಂಕದಲ್ಲಿ ಭೂ ಕಬಳಿಕೆ ಆರೋಪ: ಡಿಜಿಪಿ ಪ್ರವೀಣ್ ಸೂದ್​ಗೆ ಟ್ವೀಟ್ ಮೂಲಕ ದೂರು
ರೋಹಿಣಿ ಸಿಂಧೂರಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ(Rohini Sindhuri) ಪತಿ ವಿರುದ್ದ ಆರೋಪ ಕೇಳಿ ಬಂದಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿಯಿಂದ ತನ್ನ ಜಮೀನನ್ನು ಒತ್ತುವರಿ(Land Encroachment) ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟ, ಹಾಡುಗಾರರೊಬ್ಬರು ಡಿಜಿಪಿ ಪ್ರವೀಣ್ ಸೂದ್( ಅವರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ.

ಬಾಲಿವುಡ್ ಕಮೆಡಿಯನ್ ಮಹಮೂದ್ ಆಲಿ ಪುತ್ರ ಲಕ್ಕಿ ಆಲಿ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಸುಧೀರ್ ರೆಡ್ಡಿ ಹಾಗು ಮಧು ರೆಡ್ಡಿ ಎಂಬುವವರಿಂದ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಲಕ್ಕಿ ಆಲಿ ಆರೋಪಿಸಿದ್ದಾರೆ. ಯಲಹಂಕ ಬಳಿ ಇರುವ ಕೆಂಚೇನಹಳ್ಳಿ ಬಳಿಯ ಲಕ್ಕಿ ಆಲಿ ಅವರ ಪ್ರಾಪರ್ಟಿಯನ್ನು ತಮ್ಮ ಪತ್ನಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಸಹಾಯದಿಂದ ಜಾಗ ಒತ್ತುವರಿಯಾಗಿದೆ ಎನ್ನಲಾಗುತ್ತಿದೆ. ಆದ್ರೆ ಲಕ್ಕಿ ಆಲಿ ಅವರ ದೂರಿಗೆ ಎಸಿಪಿಯವರು ಇನ್ನೂ ರೆಸ್ಪಾನ್ಸ್ ಮಾಡಿಲ್ಲ.

ಇನ್ನು ಈ ಆರೋಪದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಈ ವಿಚಾರವನ್ನು ನಾನು ನೋಡಿದ್ದೇನೆ. ಯಾವ ಕಾರಣಕ್ಕೆ ಪೊಲೀಸ್ ದೂರು ಸ್ವೀಕರಿಸಲು ನಿರಾಕರಿಸಿದ್ದರು. ಯಾವ ಪೊಲೀಸ್ ಠಾಣೆ ಅನ್ನೊ ಬಗ್ಗೆ ಮಾಹಿತಿ ತರಿಸಿಕೊಳ್ಳೊತ್ತೇನೆ. ಈ ಬಗ್ಗೆ ಡಿಜಿ ಜೊತೆ ನಾನು ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ: ಭೂ ಹಗರಣ ಆರೋಪ: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಶಾಸಕ ಸಾರಾ ಮಹೇಶ್

ರೋಹಿಣಿ ವಿರುದ್ಧ ಪೀಠೋಪಕರಣ ತೆಗೆದುಕೊಂಡು ಹೋದ ಆರೋಪ

ಇನ್ನು ಮತ್ತೊಂದೆಡೆ ಮೈಸೂರು ಜಿಲ್ಲಾಧಿಕಾರಿಯಾಗಿ ಬಂದಾಗ ವಸತಿ ಗೃಹದಲ್ಲಿ ಉಳಿದಿದ್ದ ರೋಹಿಣಿ ಸಿಂಧೂರಿ ಅವರು ಅತಿಥಿಗೃಹದಿಂದ ಪೀಠೋಪಕರಣ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆಡಳಿತ ತರಬೇತಿ ಸಂಸ್ಥೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ರವಾನಿಸಲಾಗಿದೆ. ಆಡಳಿತ ತರಬೇತಿ ಸಂಸ್ಥೆ ಬರೆದ ಪತ್ರ ಟಿವಿ9ಗೆ ಲಭ್ಯವಾಗಿದೆ.

40 ದಿನ ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದ ರೋಹಿಣಿ ಸಿಂಧೂರಿ, ಅತಿಥಿಗೃಹದಿಂದ ಜಿಲ್ಲಾಧಿಕಾರಿ ನಿವಾಸಕ್ಕೆ ಹೋಗುವಾಗ ಅತಿಥಿ ಗೃಹದ 12 ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಅತಿಥಿ ಗೃಹದ ಸಾಮಾಗ್ರಿಗಳನ್ನು ವಾಪಸ್ಸು ಕೊಡುವಂತೆ ಆಡಳಿತ ತರಬೇತಿ ಸಂಸ್ಥೆ ಅಧಿಕಾರಿಗಳು 2020 ರಿಂದ ಈ ವೆರೆಗೆ ಮೂರು ಪತ್ರ ಬರೆದಿದ್ದಾರಂತೆ. ಈಗ ಆಡಳಿತ ತರಬೇತಿ ಸಂಸ್ಥೆ ಅಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದ ಸಾಮಾಗ್ರಿಗಳು ಜಿಲ್ಲಾಧಿಕಾರಿಗಳ ವಸತಿ ಗೃಹದಲ್ಲಿ ಇದ್ದಲ್ಲಿ ವಾಪಸ್ಸು ಕೊಡಿ. ಸಾಮಾಗ್ರಿಗಳು ಇಲ್ಲದಿದ್ದರೆ ಮಾಹಿತಿ ಕೊಡಿ ಅಂತಾ ಪತ್ರ ಬರೆದಿದ್ದಾರೆ. ಟೆಲಿಫೋನ್ ಟೇಬಲ್, ಬೆತ್ತದ ಕುರ್ಚಿ, ಮೈಕ್ರೋವೇವ್ ಓವನ್, ಮಂಚ, ಹಾಸಿಗೆ, ಯೋಗಾ ಮ್ಯಾಟ್ ಹೀಗೆ 12 ಸಾಮಾಗ್ರಿ ಇದ್ದರೆ ವಾಪಸ್ಸು ಕೊಡಿ ಅಂತಾ ಪತ್ರ ಬರೆದಿದ್ದಾರೆ.

ಆರೋಪಗಳಿಗೆ ರೋಹಿಣಿ ಸಿಂಧೂರಿ ಪ್ರತಿಕ್ರಿಯೆ

ಇನ್ನು ಆರೋಪಗಳಿಗೆ ರೋಹಿಣಿ ಸಿಂಧೂರಿಯವರು ಪ್ರತಿಕ್ರಿಯಿಸಿದ್ದಾರೆ. ಆಡಳಿತ ತರಬೇತಿ ಸಂಸ್ಥೆಯ 12 ವಸ್ತು ಡಿಸಿ ಕಚೇರಿಯಲ್ಲಿರಬಹುದು. ಈ ಬಗ್ಗೆ ಮೈಸೂರು ಡಿಸಿ ಡಾ.ರಾಜೇಂದ್ರ ಜತೆ ಮಾತನಾಡುತ್ತೇನೆ ಎಂದು ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ದಾಸರಿ ಟಿವಿ9ಗೆ ತಿಳಿಸಿದ್ದಾರೆ.

ಲಕ್ಕಿ ಅಲಿ ಆರೋಪದ ಬಗ್ಗೆ ನನ್ನ ಪತಿ ಸುಧೀರ್​ ರೆಡ್ಡಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಭೂವ್ಯಾಜ್ಯಕ್ಕೆ ನನ್ನ ಪತಿ ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದರು.

Published On - 12:45 pm, Mon, 5 December 22