ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಚಿರತೆ (Leopard attack) ಕಾಟ ಶುರುವಾಗಿದೆ. ಈ ಹಿಂದೆ ನೈಸ್ ರಸ್ತೆಯ ತುರಹಳ್ಳಿ ಅರಣ್ಯ ಪ್ರದೇಶದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು. ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಾಗ ಜಿಂಕೆ ಬೇಟೆಯಾಡಿದ್ದು, ಈಗ ಹಸುವನ್ನ ಬೇಟೆಯಾಡಿರುವಂತಹ ಘಟನೆ ಬಿ.ಎಂ.ಕಾವಲು ಅರಣ್ಯ ಪ್ರದೇಶದ ಬಳಿಯಿರುವ ಸಿದ್ದನಪಾಳ್ಯದಲ್ಲಿ ನಡೆದಿದೆ. ನಾಗಣ್ಣ ಎನ್ನುವವರಿಗೆ ಸೇರಿದ ಹಸುವನ್ನು ನಿನ್ನೆ ರಾತ್ರಿ ಮನೆ ಬಳಿ ಕಟ್ಟಿಹಾಕಿದ್ದಾಗ ಕೊಂದಿದೆ. ಈ ಹಿಂದೆ ಸಂಜೆ ವೇಳೆ ಹಸುವಿನ ಮೇಲೆ ದಾಳಿಗೆ ಚಿರತೆ ಯತ್ನಿಸಿತ್ತು. ಆದರೆ ಚಿರತೆ ದಾಳಿ ನಡೆಸಿದಾಗ ಮನೆಯವರು ಪಟಾಕಿ ಸಿಡಿಸಿ ಓಡಿಸಿದ್ದರು. ಕಳೆದ ರಾತ್ರಿ ಹಸು ಕೊಂದಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
ಬೆಂಗಳೂರು ನಗರದ ಜನರಿಗೆ ಇಷ್ಟು ದಿನ ರಸ್ತೆ ಗುಂಡಿಗಳ ಚಿಂತೆಯಾಗಿತ್ತು. ಆದರೆ ಈಗ ಸಿಲಿಕಾನ್ ಸಿಟಿ ಜನರಿಗೆ ಚಿರತೆ ಕಾಟ ಶುರುವಾದಂತ್ತಾಗಿದೆ. ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿರುವಂತಹ ಘಟನೆ ಈ ಮುಂಚೆ ನಡೆದಿತ್ತು. ಕೆಂಗೇರಿ ಸುತ್ತಮುತ್ತಲಿನ ಜನರು ಚಿರತೆ ದಾಳಿ ಭೀತಿಯಲ್ಲಿದ್ದಾರೆ. ತುರಹಳ್ಳಿ ಅರಣ್ಯ ಪ್ರದೇಶದಿಂದ ಚಿರತೆಗಳು ಬಂದಿದ್ದವು. ಮುಖ್ಯರಸ್ತೆಗೆ ನುಗ್ಗಿ ಜಿಂಕೆ ಕೊಂದು ಚಿರತೆ ತಿಂದುಹೋಗಿರುವುದರಿಂದ ಆ ಭಾಗದಲ್ಲಿ ಜನರಲ್ಲಿ ಆತಂಕ ಉಂಟಾಗಿತ್ತು. 4 ಚಿರತೆಗಳು ಬಂದಿವೆ ಎಂದು ಸ್ಥಳೀಯರು ಹೇಳಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ: ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ಅಲರ್ಟ್
ಇನ್ನು ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಲಾ 15 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ನಗರದಲ್ಲಿ ಈ ಬಗ್ಗೆ ಘೋಷಣೆ ಮಾಡಿದ ಅವರು, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಭೀತಿ ಹುಟ್ಟಿಸಿದ ಚಿರತೆ ಸೆರೆಗೆ ಸೂಚನೆ ನೀಡಿದ್ದರು. ಚಿರತೆಗಳನ್ನು ಸೆರೆಹಿಡಿದು ಕಾಡಿಗೆ ಬಿಡಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜನರ ನಿದ್ದೆಗೆಡಿಸಿದ ಚಿರತೆ ದಾಳಿ; ಶಾಲಾ ಕಾಲೇಜುಗಳಿಗಿಲ್ಲ ರಜೆ, ಇಂದು ಸಹ ಮುಂದುವರೆಯಲಿರುವ ಚೀತಾ ಕೂಂಬಿಂಗ್
ಮೈಸೂರು: ಟಿ.ನರಸೀಪುರ ತಾಲೂಕಿನ ಜನರ ನಿದ್ದೆಗೆಡಿಸಿರುವ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣಿಗೂ ಬೀಳದೆ ತಪ್ಪಿಸಿಕೊಳ್ಳುತ್ತಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ತಂಡ ಹರಸಾಹಸ ಪಡುತ್ತಿದೆ. ಈ ನಡುವೆ ಸಿಬ್ಬಂದಿ ಕಣ್ಣು ತಪ್ಪಿಸಿಕೊಂಡು ಬಂದ ಚಿರತೆ ಕುರಿ, ಮೇಕೆ ಮೇಲೆ ದಾಳಿ ನಡೆಸಿದ ಘಟನೆ ಟಿ.ನರಸೀಪುರ ತಾಲೂಕಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡುವೆಯೂ ಚಿರತೆ ದಾಳಿ ನಡೆದಿರುವುದರಿಂದ ಜನರಲ್ಲಿನ ಭೀತಿ ಮತ್ತಷ್ಟು ಹೆಚ್ಚಾಗಿದೆ. ಈ ತಾಲೂಕಿನಲ್ಲಿ ಓರ್ವ ಯುವಕನನ್ನು ಬಲಿ ಪಡೆದಿದ್ದ ಚಿರತೆ ದಾಳಿಗೆ ಮೇಘನಾ ಸಾವನ್ನಪ್ಪಿದ್ದಳು. ಒಂದೇ ತಿಂಗಳಲ್ಲಿ ಚಿರತೆಯು ಎರಡು ನರಬಲಿ ಪಡೆದ ಹಿನ್ನೆಲೆ ಜನರಲ್ಲಿ ಆತಂಕ ಮನೆಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:13 pm, Fri, 30 December 22