ಕೂಡ್ಲು ಜನತೆಗೆ ಮತ್ತೆ ಚಿರತೆ ಕಾಟ; ಎಂಎಸ್ ದೋನಿ ಸ್ಕೂಲ್ ಬಳಿ ಪ್ರತ್ಯಕ್ಷ, ಜನರಲ್ಲಿ ಆತಂಕ
ಕೂಡ್ಲು ಸಮೀಪ ಭಾನುವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ತಬ್ರೇಜ್ ಎಂಬ ಯುವಕನಿಗೆ ಚಿರತೆ ಕಾಣಿಸಿಕೊಂಡಿದೆ. ಯುವಕ ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಕೂಡ್ಲುಗೇಟ್ ಬಳಿಯ AECS ಲೇವೇಟ್ ಹಾಗೂ ಎಂಎಸ್ ದೋನಿ ಸ್ಕೂಲ್ ಬಳಿ ಚಿರತೆ ಕಂಡ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ನಿನ್ನೆ ರಾತ್ರಿಯೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಆನೇಕಲ್, ನ.06: ಬೊಮ್ಮನಹಳ್ಳಿಯ ಕೂಡ್ಲು ಸುತ್ತಮುತ್ತಲಿನ ಕಡೆಗಳಲ್ಲಿ ಜನರಿಗೆ ಆತಂಕ ಸೃಷ್ಟಿಮಾಡಿದ್ದ ಚಿರತೆಗೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಗುಂಡು ಹಾರಿಸಿ ಎಡವಟ್ಟು ಮಾಡಿದ್ದ ಘಟನೆ ವಾರದ ಹಿಂದೆ ನಡೆದಿತ್ತು. ಈಗ ಅದೇ ಜಾಗದಲ್ಲಿ ಮತ್ತೊಂದು ಚಿರತೆ (Leopard) ಕಾಣಿಸಿಕೊಂಡಿದೆ . ಕೂಡ್ಲು ಜನತೆಗೆ ಮತ್ತೆ ಚಿರತೆ ಆತಂಕ ಶುರುವಾಗಿದೆ. ನಿನ್ನೆ (ನ.05) ರಾತ್ರಿ 10.30ರ ಸುಮಾರಿಗೆ ಚಿರತೆ ಕಂಡ ಬಗ್ಗೆ ಪ್ರತ್ಯಕ್ಷದರ್ಶಿ ತಬ್ರೇಜ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹೆಜ್ಜೆ ಗುರುತು ಪತ್ತೆ ಹಚ್ಚುತ್ತಿದ್ದಾರೆ. ಆದಷ್ಟು ಬೇಗ ಚಿರತೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕೂಡ್ಲು ಸಮೀಪ ಭಾನುವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ತಬ್ರೇಜ್ ಎಂಬ ಯುವಕನಿಗೆ ಚಿರತೆ ಕಾಣಿಸಿಕೊಂಡಿದೆ. ಯುವಕ ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಕೂಡ್ಲುಗೇಟ್ ಬಳಿಯ AECS ಲೇವೇಟ್ ಹಾಗೂ ಎಂಎಸ್ ದೋನಿ ಸ್ಕೂಲ್ ಬಳಿ ಚಿರತೆ ಕಂಡ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ನಿನ್ನೆ ರಾತ್ರಿಯೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಎಂಎಸ್ ಧೋನಿ ಶಾಲೆ, AECS ಲೇವೇಟ್ ಸುತ್ತಮುತ್ತ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳನ್ನು ಹುಡುಕಾಡಿದ್ದಾರೆ. ಸುತ್ತಮುತ್ತ ಎಲ್ಲೂ ಯಾವುದೇ ಸಿಸಿ ಕ್ಯಾಮರಾ ಇಲ್ಲ. ಹೀಗಾಗಿ ಚಿರತೆ ಓಡಾಟದ ಸುಳಿವು ಪತ್ತೆ ಮಾಡುವುದು ಕಷ್ಟ ಆಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಆತಂಕ; ಮನೆಯ ಬಾಗಿಲು ಬಳಿ ಚಿರತೆ ಕಂಡು ಕಿರುಚಿದ ಬಾಲಕ
ಎಲೆಕ್ಟ್ರಾನಿಕ್ ಸಿಟಿಯ ಚಿಕ್ಕತೋಗೂರಿನಲ್ಲಿ ನಿನ್ನೆ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ಚಿಕ್ಕತೋಗೂರಿನಲ್ಲಿ ಮನೆಯೊಂದರ ಮುಂದೆ ಚಿರತೆಯ ಹೆಜ್ಜೆ ಗುರುತು ಕಾಣಿಸಿಕೊಂಡಿತ್ತು. ಎರಡೆರಡು ಕಡೆ ಚಿರತೆ ಪ್ರತ್ಯಕ್ಷ ದೂರು ಹಿನ್ನೆಲೆ ಕೆ.ಆರ್ ಪುರಂ ಅರಣ್ಯ ಅಧಿಕಾರಿಗಳಿಗೆ ಮತ್ತೆ ತಲೆ ನೋವು ಉಂಟಾಗಿದೆ. ಚಿರತೆಯಿಂದಾಗಿ ಕೂಡ್ಲು ನಿವಾಸಿಗಳಿಗೆ ಆತಂಕ ಮನೆ ಮಾಡಿದೆ. ಚಿರತೆಯ ಹೆಜ್ಜೆ ಗುರುತು ನೋಡಿ ಜನರಲ್ಲಿ ಭಯ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಎದೆ ಭಾಗಕ್ಕೆ ಗುಂಡು ತಾಕಿ ಚಿರತೆ ಸಾವು
ಕೆಲ ದಿನಗಳ ಹಿಂದೆ ಬೊಮ್ಮನಹಳ್ಳಿಯ ಕೂಡ್ಲು ಬಳಿಯ ಕೃಷ್ಣಾರೆಡ್ಡಿ ಬಡಾವಣೆ ಹಾಗೂ ಸುತ್ತಮುತ್ತ ಅಪಾರ್ಟ್ಮೆಂಟ್ ಗಳಲ್ಲಿ ಚಿರತೆ ಓಡಾಡಿರುವ ಸಿಸಿಟಿವಿ ವಿಡಿಯೋಗಳು ಅರಣ್ಯ ಇಲಾಖೆಗೆ ಸಿಕ್ಕಿದ ಹಿನ್ನೆಲೆ ಅರಣ್ಯ ಇಲಾಖೆ ಚಿರತೆ ಕಾರ್ಯಾಚರಣೆಗೆ ಇಳಿದಿತ್ತು. ಪಾಳು ಬಿದ್ದ ಬಿಲ್ಡಿಂಗ್ ನಲ್ಲಿ ಅವಿತಿದ್ದ ಚಿರತೆಯನ್ನ ಸೆರೆ ಹಿಡಿಯಲು ಮುಂದಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ, ಮೈಸೂರಿನ ಲೆಪರ್ಡ್ ಟೀಂ ಹಾಗೂ ಬನ್ನೇರುಘಟ್ಟದ ವೈದ ಕಿರಣ್ ನೇತೃತ್ವದಲ್ಲಿ ಅಖಾಡಕ್ಕೆ ಇಳಿದಿದ್ರು. ಪಾಳು ಬಿದ್ದ ಬಿಲ್ಡಿಂಗ್ ನಲ್ಲಿದ್ದ ಚಿರತೆಯನ್ನ ಅರವಳಿಕೆ ನೀಡಿ ಸುರಕ್ಷಿತವಾಗಿ ಸೆರೆ ಹಿಡಿಯಲಾಗುತ್ತೆ ಅಂತ ಎಲ್ಲರೂ ಅಂದು ಕೊಂಡಿದ್ರು. ಆದರೆ ಚಿರತೆ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಹೋಗಿ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದಿದ್ದ ಬಲೆಗೆ ಬಿದ್ದ ಬಳಿಕ ಗುಂಡು ಹಾರಿಸಲಾಗಿತ್ತು. ಚಿರತೆ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಪ್ರಾಣಿಪ್ರಿಯರು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಹಾಗೂ ಚಿರತೆ ಸೆರೆ ಹಿಡಿಯಲು ಸೂಕ್ತ ಅರವಳಿಕೆ ತಜ್ಞರನ್ನ ಬಳಸಿಕೊಳ್ಳದೆ ಕಾರ್ಯಾಚರಣೆ ನಡೆಸಿ ಚಿರತೆ ಸಾವಿಗೆ ಕಾರಣರಾಗಿದ್ದಾರೆಂದು ಆರೋಪಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ