ಬೆಂಗಳೂರು, ಏಪ್ರಿಲ್ 24: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ (Income Tax Department) ಮತ್ತು ಚುನಾವಣಾ ಆಯೋಗ (Election Commission) ಹಣ, ಚಿನ್ನ, ಬೆಳ್ಳಿ ಮತ್ತು ವಸ್ತುಗಳ ಅಕ್ರಮ ವಹಿವಾಟಿನ ಮೇಲೆ ಹದ್ದಿನ ಕಣ್ಣು ಇಟ್ಟಿವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 16 ಕಡೆ ಶೋಧ ನಡೆಸಿದ್ದು, ಕೆಜಿಗಟ್ಟಲೆ ಚಿನ್ನ, ವಜ್ರ ಮತ್ತು ಹಣ ಪತ್ತೆಯಾಗಿದೆ.
ಶಂಕರಪುರದಲ್ಲಿ 3 ಕೋಟಿಗೂ ಅಧಿಕ ಮೌಲ್ಯದ 4 ಕೆಜಿ 400 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. ಶಾರದದೇವಿ ರಸ್ತೆಯಲ್ಲಿ 3 ಕೋಟಿ 39 ಲಕ್ಷ ಮೌಲ್ಯದ 4 ಕೆಜಿ 800 ಗ್ರಾಂ, ಮರ್ಕೈಂಟಲ್ ಬ್ಯಾಂಕ್ ಬಳಿ 2 ಕೋಟಿ 13 ಲಕ್ಷ ಮೌಲ್ಯದ 3 ಕೆಜಿ 400 ಗ್ರಾಂ, ಜಯನಗರ 3ನೇ ಬ್ಲಾಕ್ನಲ್ಲಿ 5 ಕೋಟಿ 33 ಲಕ್ಷ ಮೌಲ್ಯದ 7 ಕೆಜಿ 598 ಗ್ರಾಂ, ಸಾರಸ್ವತ್ ಬ್ಯಾಂಕ್, ಚಾಮರಾಜಪೇಟೆಯಲ್ಲಿ 84 ಮೌಲ್ಯದ 1 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಪತ್ತೆಯಾಗಿದೆ.
ಬಸವನಗುಡಿ ಅಂಚೆ ಕಚೇರಿ ಬಳಿ 3 ಲಕ್ಷ 34 ಸಾವಿರ ಮೌಲ್ಯದ 6.38 ಕ್ಯಾರೆಟ್ ವಜ್ರ, ಮಾತಾ ಶಾರದಾ ದೇವಿ ರಸ್ತೆಯಲ್ಲಿ 3 ಲಕ್ಷದ 14 ಸಾವಿರ ಮೌಲ್ಯದ 5.99 ಕ್ಯಾರೆಟ್ ವಜ್ರ, ಜಯನಗರದಲ್ಲಿ 6 ಕೋಟಿ 40 ಲಕ್ಷ ಮೌಲ್ಯದ 202.83 ಕ್ಯಾರೆಟ್ ವಜ್ರ ಪತ್ತೆಯಾಗಿದೆ.
ಇದನ್ನೂ ಓದಿ: ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತೀರಾ? ಹಾಗಾದರೆ ಗಮನಿಸಿ
ಒಟ್ಟು 16.10 ಕೋಟಿ ಮೌಲ್ಯದ 22 ಕೆಜಿ 923 ಗ್ರಾಂ ಚಿನ್ನ, 6 ಕೋಟಿ 45 ಲಕ್ಷ ಮೌಲ್ಯದ ವಜ್ರ ವಶಪಡಿಸಿಕೊಳ್ಳಲಾಗಿದೆ. 1.33 ಕೋಟಿ ನಗದು ಪತ್ತೆಯಾಗಿದೆ.
ಬಳ್ಳಾರಿ: ಬ್ರೂಸ್ ಪೇಟೆ ಪೊಲೀಸರು, ಎಫ್.ಎಸ್.ಟಿ ಹಾಗೂ ವಿವಿಎಸ್‌ಟಿ ತಂಡದ ಜಂಟಿ ಕಾರ್ಯಚರಣೆಯಲ್ಲಿ ದಾಖಲೆ ಇಲ್ಲದೆ ಸಂಗ್ರಹಿಸಿದ್ದ 23 ಲಕ್ಷ ನಗದು, 450 ಗ್ರಾಂ ಚಿನ್ನ, 13 ಕೆಜಿ ಬೆಳ್ಳಿ ಪತ್ತೆಯಾಗಿದೆ. ಕಂಬಳಿ ಬಜಾರ್ನ ಚುನ್ನಿಲಾಲ್ ರಾಕೇಶ್ ಕುಮಾರ್ ಷಾ ಜ್ಯೂವೆಲರ್ಸ್ನ ಮಾಲೀಕ ಕಮಲೇಶ್ ಜೈನ್ ಎಂಬುವರ ಮನೆಯಲ್ಲಿ ಇಷ್ಟೊಂದು ಪ್ರಮಾಣದ ಹಣ, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ. ಜಪ್ತಿ ಮಾಡಲಾದ ಹಣ, ಚಿನ್ನ ಮತ್ತು ಬೆಳ್ಳಿಯನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದಾರೆ.
ಲೋಕಸಭೆ ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Wed, 24 April 24