ಏಪ್ರಿಲ್ 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ: ಅನಂತಕುಮಾರ್ ಹೆಗಡೆ ಮನೆ ಸಮೀಪದ ಮೈದಾನದಲ್ಲೇ ಸಮಾವೇಶ!
ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಟಿಕೆಟ್ ಘೋಷಣೆಯಾದ ನಂತರವಂತೂ ಯಾರ ಕೈಗೂ ಸಿಗದ ಉತ್ತರ ಕನ್ನಡದ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರ ಸಮಾವೇಶಕ್ಕೆ ಹಾಜರಾಗುತ್ತಾರಾ ಎಂಬ ಕುತೂಹಲ ಈಗ ಮೂಡಿದೆ. ವಿಶೇಷವೆಂದರೆ, ಸಂಸದ ಅನಂತಕುಮಾರ್ ಹೆಗಡೆ ನಿವಾಸದ ಅನತಿ ದೂರದಲ್ಲಿರುವ ಮೈದಾನದಲ್ಲೇ ಮೋದಿ ಸಮಾವೇಶ ನಡೆಯಲಿದೆ.
ಕಾರವಾರ, ಏಪ್ರಿಲ್ 24: ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ (Voting) ನಡೆಯಲಿದೆ. ಹೀಗಾಗಿ ರಾಜ್ಯದ ಎರಡನೇ ಹಂತದ ಮತದಾನಕ್ಕೂ ಮುನ್ನ ಏಪ್ರಿಲ್ 28ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರು ಕಡೆ ಬೃಹತ್ ಚುನಾವಣಾ ಪ್ರಚಾರ ಸಮಾವೇಶ ನಡೆಸಲಿದ್ದಾರೆ. ಇದೇ ವೇಳೆ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (Sirsi) ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಸದ್ಯ ಲೋಕಸಭೆ ಚುನಾವಣೆಗೆ ಟಿಕೆಟ್ ಸಿಗದೆ ಮೌನವಹಿಸಿರುವ ಉತ್ತರ ಕನ್ನಡ ಜಿಲ್ಲೆಯ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರ ಮನೆ ಸಮೀಪದ ಮೈದಾನದಲ್ಲೇ ಮೋದಿ ಸಮಾವೇಶ ನಡೆಯಲಿರುವುದು ಕುತೂಹಲ ಮೂಡಿಸಿದೆ.
ಪ್ರಧಾನಿ ಮೋದಿ ಶಿರಸಿಗೆ ಬರುವುದು ಖಚಿತವಾಗುತ್ತಿದ್ದಂತೆಯೇ ಅನಂತಕುಮಾರ್ ನಡೆ ಏನಿರಬಹುದು ಎಂಬ ಕುತೂಹಲ ಮೂಡಿದೆ. ಈ ಹಿಂದೆ ಅಂಕೊಲಾಗೆ ಮೋದಿ ಬಂದಿದ್ದಾಗ ಅನಾರೋಗ್ಯದ ಕಾರಣ ಹೇಳಿ ಅನಂತಕುಮಾರ್ ಹೆಗಡೆ ಸ್ವಾಗತಕ್ಕೆ ಬಂದಿರಲಿಲ್ಲ. ಇದೀಗ ಅನಂತಕುಮಾರ್ ಹೆಗಡೆ ಮನೆಯಿಂದ ಕೆಲವೇ ಮೀಟರ್ಗಳ ದೂರದಲ್ಲಿರುವ ಮೈದಾನದಲ್ಲಿ ಮೋದಿ ಸಮಾವೇಶ ನಡೆಯಲಿದೆ. ಇದಕ್ಕೆ ಹೆಗಡೆ ಬರುತ್ತಾರಾ ಎಂಬ ಕುತೂಹಲ ಮೂಡಿದೆ.
ಟಿಕೆಟ್ ಕೈತಪ್ಪಿದ ಕಾರಣ ಅನಂತಕುಮಾರ್ ಹೆಗಡೆ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರ ಮಾಡುತ್ತಿಲ್ಲ. ಅಷ್ಟೇ ಅಲ್ಲದೆ, ಯಾರ ಕೈಗೂ ಸಿಗುತ್ತಿಲ್ಲ. ಮುನಿಸು ತಣ್ಣಗಾಗಿಸಲು ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದ್ದರೂ ಅನಂತಕುಮಾರ್ ಹೆಗಡೆ ಕರೆ ಸ್ವೀಕರಿಸಿರಲಿಲ್ಲ.
ಹಾಲಿ ಸಂಸದರಾಗಿರುವ ಅನಂತಕುಮಾರ್ ಹೆಗಡೆ ಮೋದಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಈ ಹಿಂದೆ, ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಅನಂತಕುಮಾರ್ ಬರುತ್ತಾರೆ ಎಂದೂ ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಆ ರೀತಿ ಆಗಿಲ್ಲ ಎಂಬುದು ಗಮನಾರ್ಹ.
ಇದನ್ನೂ ಓದಿ: ಏಪ್ರಿಲ್ 28, 29 ರಂದು ಪ್ರಧಾನಿ ರಾಜ್ಯಕ್ಕೆ, ಮೋದಿ ಸಮಾವೇಶಕ್ಕೆ ಉತ್ತರ ಕರ್ನಾಟಕದಲ್ಲಿ ವೇದಿಕೆ ಸಜ್ಜು
ಟಿಕೆಟ್ ಕೈತಪ್ಪುವ ಸುಳಿವು ದೊರೆತ ಕೂಡಲೇ ಹೆಗಡೆ ಮೌನಕ್ಕೆ ಶರಣಾಗಿದ್ದರು. ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಘೋಷಣೆಯಾದ ನಂತರವಂತೂ ಅವರು ಯಾರ ಕೈಗೂ ಸಿಕ್ಕಿರಲಿಲ್ಲ. ಒಮ್ಮೆಯಂತೂ ಅನಂತಕುಮಾರ್ ಹೆಗಡೆ ಮನೆಗೆಂದು ಹೋಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಗೇಟಿನಲ್ಲೇ ಅರ್ಧ ಗಂಟೆ ಕಾಯುವಂತೆ ಮಾಡಿ ವಾಪಸ್ ಕಳುಹಿಸಿದ್ದು ಭಾರಿ ಸುದ್ದಿಯಾಗಿತ್ತು.
ಲೋಕಸಭೆ ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ