ಬೆಂಗಳೂರು: ರಾಬಿನ್ ಹುಡ್ ಕಥೆಗಳಲ್ಲಿ ಬರುವಂತೆ ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳನಿದ್ದಾನೆ. ಈತ ಕಂಡವರ ಮನೆಗೆ ಕನ್ನ ಹಾಕಿ ತನ್ನ ಆಸೆಗಳನ್ನು ಪೂರೈಸಿಕೊಂಡು ಬಳಿಕ ಉಳಿದದನ್ನು ಧಾರ್ಮಿಕ ಕೇಂದ್ರಗಳಿಗೆ ದಾನ ಮಾಡ್ತಿದ್ದ. ಸದ್ಯ ಮಡಿವಾಳ ಠಾಣಾ ಪೊಲೀಸರು ಖದೀಮನನ್ನು ಬಂಧಿಸಿದ್ದಾರೆ.ಜಾನ್ ಮೆಲ್ವಿನ್ ಎಂಬ ಬಂಧಿತ ಆರೋಪಿ ಐಷಾರಾಮಿ ಜೀವನಕ್ಕಾಗಿ ಶ್ರೀಮಂತರ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ಬಳಿಕ ಆಸೆ ತೀರಿ ಉಳಿದ ಹಣವನ್ನು ದಾನ ಧರ್ಮ ಮಾಡ್ತಿದ್ದ.
ಚರ್ಚ್, ದೇವಾಲಯಗಳ ಹುಂಡಿಗೆ ಹಣ ಹಾಕುವುದು ಹಾಗೂ ದಾನ ಮಾಡುವ ಕಾಯಕ ಮಾಡುತ್ತಿದ್ದ. ನೋಡಿದವರು ಆತ ದಾನ-ಧರ್ಮದ ವ್ಯಕ್ತಿ. ನೂವು ವರ್ಷ ಚನ್ನಾಗಿ ಬಾಳಲಿ ಎಂದು ಹಾರೈಸುತ್ತಿದ್ದರು. ಆದ್ರೆ ಈತ ಕಂಡವರ ದುಡ್ಡಿನಿಂದಲೇ ಶೋಕಿ ಜೀವನ ನಡೆಸುತ್ತಿದ್ದ. ಆದ್ರೆ ಈಗ ಬರೋಬ್ಬರಿ ಐವತ್ತಕ್ಕೂ ಅಧಿಕ ಪ್ರಕರಣಗಳ ಆರೋಪಿ ಜಾನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಡಿವಾಳ ಠಾಣಾ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಮಳೆ: ಮೆಟ್ರೋ ತಡೆಗೋಡೆ ಕುಸಿತ, 6 ಕಾರು, 2 ಬೈಕ್ ಜಖಂ
ಪೀಣ್ಯಾ, ವಿಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಆರೋಪಿ ಜಾನ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಜಾನ್ ಕದ್ದ ಸ್ವಲ್ಪ ಹಣದಲ್ಲಿ ಐಷಾರಾಮಿ ಜೀವನ, ಮೋಜು ಮಸ್ತಿ ಮಾಡುತ್ತಿದ್ದ. ಇನ್ನುಳಿದ ಹಣವನ್ನ ದಾನ ಮಾಡಿ ಕಳೆಯುತ್ತಿದ್ದ. ನಗರದ ಅತೀ ಹಳೆಯ ಮನೆಗಳ್ಳರಲ್ಲಿ ಮೆಲ್ವಿನ್ ಕೂಡಾ ಒಬ್ಬ. ಪ್ರತೀ ಬಾರಿ ಬಂಧನವದಾಗಲೂ 10-15 ದಿನಗಳಲ್ಲೇ ಜಾಮೀನು ಪಡೆಯುತ್ತಿದ್ದ.
ದೊಣ್ಣೆಯಿಂದ ಹೊಡೆದು ಪತಿಯನ್ನು ಹತ್ಯೆಗೈದ ಪತ್ನಿ
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನೇರಲಹಳ್ಳಿಯಲ್ಲಿ ಪತಿ ಕೃಷ್ಣೇಗೌಡ(50) ಬರ್ಬರ ಹತ್ಯೆಯಾಗಿದೆ. ಪತಿ ಕೃಷ್ಣೇಗೌಡನನ್ನು ಪತ್ನಿ ಲೀಲಾವತಿ ಕೊಲೆ ಮಾಡಿದ್ದಾರೆ. ನಿತ್ಯ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದ ಪತಿ ಕೃಷ್ಣೇಗೌಡ, ಸೋಮವಾರ ರಾತ್ರಿಯೂ ಗಲಾಟೆ ತೆಗೆದಿದ್ದ. ಈ ವೇಳೆ ದೊಣ್ಣೆಯಿಂದ ಹೊಡೆದು ಪತಿಯ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿ ಮನೆ ಹಿಂದೆ ಗುಂಡಿ ತೆಗೆದು ಶವ ಹೂತಿದ್ದಾರೆ. ಬಳಿಕ ಘಟನೆಯೇ ನಡೆದಿಲ್ಲ ಎಂಬಂತೆ ಸುಮ್ಮನಾಗಿದ್ದಾರೆ.
ಮನೆಯಲ್ಲಿ ಲೀಲಾವತಿ ಒಬ್ಬರೇ ಇದ್ದಾರೆ, ಕೃಷ್ಣೇಗೌಡನಿಲ್ಲ ಎಂಬ ಬಗ್ಗೆ ಗ್ರಾಮಸ್ಥರಿಗೆ ಅನುಮಾನ ಹೆಚ್ಚಾಗಿ ಕೃಷ್ಣೇಗೌಡ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಜನರ ಅನುಮಾನದ ಮೇಲೆ ಪೊಲೀಸರು ಲೀಲಾವತಿಯನ್ನು ಕರೆತಂದು ವಿಚಾರಣೆ ಮಾಡಿದಾಗ ಹತ್ಯೆ ಮಾಡಿರುವ ಸತ್ಯ ಬಯಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಇಂದು ಮೃತದೇಹ ಹೊರ ತೆಗೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಲಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:29 am, Thu, 20 October 22