ಡಿ.31 ರಿಂದ 15 ದಿನ ಮಾಲ್ ಆಫ್ ಏಷ್ಯಾ ಬಾಗಿಲು ಬಂದ್: ಕಾರಣ ಇಲ್ಲಿದೆ
ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಮಾಲ್ ಆಫ್ ಏಷ್ಯಾಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ಹಿನ್ನಲೆ ನಾಳೆಯಿಂದ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ(Mall Of Asia) ಬಾಗಿಲು ಬಂದ್ ಆಗಲಿದೆ.
ಬೆಂಗಳೂರು, ಡಿ.31: ಅಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮತ್ತು ಟ್ರಾಫಿಕ್ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಬೆಂಗಳೂರು ಪೊಲೀಸರು ಮಾಲ್ ಆಫ್ ಏಷ್ಯಾವನ್ನು (Mall of Asia) 15 ದಿನಗಳವರೆಗೆ ಬಂದ್ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾಲ್ ಆಫ್ ಏಷ್ಯಾ ಸುತ್ತಮುತ್ತ ಮಾಲ್ ಬಳಿ ಸೆಕ್ಷನ್ 144(1), 144(2) ಸೆಕ್ಷನ್ ಜಾರಿ ಮಾಡಿ ಕಮಿಷನರ್ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. 15 ದಿನ ಮಾಲ್ ಆಫ್ ಏಷಿಯಾಗೆ ಸಾರ್ವಜನಿಕರ ಪ್ರವೇಶವಿಲ್ಲ. ಅಕ್ಟೋಬರ್ನಲ್ಲಿ ಉದ್ಘಾಟನೆಗೊಂಡಿದ್ದ ಮಾಲ್ ಆಫ್ ಏಷ್ಯಾ ಬಂದ್ ಆಗಲು ಕಾರಣವೇನು? ಇಲ್ಲಿದೆ ಓದಿ.
ಈಶಾನ್ಯ ಡಿಸಿಪಿ ಮತ್ತು ಸಂಚಾರ ಜಂಟಿ ಪೊಲೀಸ್ ಆಯುಕ್ತರ ವರದಿ ಮತ್ತು ಕೊಡಿಗೇಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ವಿಶೇಷ ವರದಿ ಮತ್ತು ನಗರದ ಸ್ಪೆಷಲ್ ಬ್ಯ್ರಾಂಚ್ನಿಂದ ದೊರೆತ ಆಂತರಿಕ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲ ವರದಿ ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರು ನಗರ ಆಯುಕ್ತ ಬಿ. ದಯಾನಂದ್ ಅವರು ಖುದ್ದು ಮಾಲ್ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾಲ್ನಲ್ಲಿ ಹಲವು ಅಸ್ತವ್ಯಸ್ತಗಳು ಕಂಡುಬಂದವು.
ಈ ಮಾಲ್ನಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮಾಲ್ಗೆ ಬರುವ ಗ್ರಾಹಕರಿಂದ ದೊಡ್ಡ ಮಟ್ಟದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿ, ವಿಮಾನ ನಿಲ್ದಾಣ, ಆಸ್ಪತ್ರೆ, ಕಛೇರಿಗಳಿಗೆ ಹೋಗುವವರಿಗೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಬಿಬಿಎಂಪಿ ಅನುಮತಿ ಪ್ರಕಾರ ಮಾಲ್ ನಲ್ಲಿ 2,324 ಕಾರ್ ಮತ್ತು ಬೈಕ್ಗಳನ್ನು ಮಾತ್ರ ಪಾರ್ಕ್ ಮಾಡಬಹುದು. ಆದರೆ ಈ ಮಾಲ್ನಲ್ಲಿ ಇದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ವಾಹನಗಳು ಬರುತ್ತಿವೆ. ಜೊತೆಗೆ ಮಾಲ್ನಲ್ಲಿ ಶಬ್ದ ಮಾಲಿನ್ಯವೂ ಮಿತಿ ಮೀರಿತ್ತು. ಮಾಲ್ನಲ್ಲಿ ಪರಿಸ್ತಿತಿ ಹೀಗೆ ಮುಂದುವರಿದರೆ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗಬಹುದೆಂದು ಬಂದ್ ಮಾಡಲಾಗಿದೆ.
ಇದನ್ನೂ ಓದಿ:ಹೆಚ್ಚಾದ ಟ್ರಾಫಿಕ್ ಕಿರಿಕಿರಿ; ಮಾಲ್ ಆಫ್ ಏಷ್ಯಾ ವಿರುದ್ಧ ಬ್ಯಾಟರಾಯನಪುರ ನಿವಾಸಿಗಳ ಆಕ್ರೋಶ
ಹೊಸ ವರ್ಷಾಚರಣೆ ಮತ್ತು ಸಂಕ್ರಾತಿಗೆ ಈ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಡಿ.31ರಿಂದ ಜ.15ರವರೆಗೆ ಮಾಲ್ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಮಾಲ್ಗೆ ನೀಡರುವ ಭಾಗಶಃ ಸ್ವಾಧೀನ ಪ್ರಮಾಣಪತ್ರವನ್ನು ಹಿಂತೆಗೆದುಕೊಳ್ಳುವುದು / ರದ್ದುಗೊಳಿಸಲು ಪೊಲೀಸ್ ಇಲಾಖೆ ಬಿಬಿಎಂಪಿಗೆ ಪತ್ರ ಬರೆದಿದೆ.
ಪ್ರತಿಭಟನೆ ವೇಳೆ ಮಾಲ್ ಆಫ್ ಏಷ್ಯಾ ಮೇಲೆ ದಾಳಿ ನಡೆಸಿದ್ದ ಕರವೇ
ಮೊನ್ನೆಯಷ್ಟೇ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ಮಾಲ್ ಆಫ್ ಏಷ್ಯಾ ಮೇಲೆ ದಾಳಿ ನಡೆಸಿ, ನಾಮಪಲಕ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈಗ ಮುಂಜಾಗ್ರತೆ ಹಿನ್ನೆಲೆ ಮುಂದಿನ 15 ನೇ ತಾರೀಖಿನವರೆಗೂ 144 ಸೆಕ್ಷನ್ ಜಾರಿ ಮಾಡಿ ಆದೇಶಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:14 pm, Sat, 30 December 23