ಬೆಂಗಳೂರಿನಲ್ಲಿ ನಕಲಿ ದಾಖಲಾತಿ ದಂಧೆ; ವಿದೇಶಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ ಆರೋಪಿ ಅರೆಸ್ಟ್

|

Updated on: Apr 21, 2023 | 8:49 PM

ಗೃಹ ಸಚಿವಾಲಯದ ಅಧೀನದಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ನೀಡಿದ ದೂರಿನ ಅನ್ವಯ ನಕಲಿ ದಾಖಲಾತಿ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ನಕಲಿ ದಾಖಲಾತಿ ದಂಧೆ; ವಿದೇಶಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ ಆರೋಪಿ ಅರೆಸ್ಟ್
ಬೆಂಗಳೂರಿನಲ್ಲಿ ನಕಲಿ ದಾಖಲಾತಿ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಕಾಲೇಜು ವ್ಯಾಸಾಂಗಕ್ಕಾಗಿ ನಗರಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ (Cheating) ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಬೆಂಗಳೂರಿನ ಕಾಲೇಜಿಗೆ ಪ್ರವೇಶದ ನೆಪದಲ್ಲಿ ಯೆಮೆನ್, ಸೌದಿ ಅರೇಬಿಯಾ ಮತ್ತು ಇರಾನ್‌ನ ಹಲವು ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಆರೋಪ ಸಂಬಂಧ ಗೃಹ ಸಚಿವಾಲಯದ ಅಧೀನದಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿದ ದೂರಿನ ಆಧಾರದ ಮೇಲೆ ಕೆ.ಜಿ.ಹಳ್ಳಿ ನಿವಾಸಿ ಸಮೀರ್ ಖಾನ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಎಫ್‌ಆರ್‌ಆರ್‌ಒ ಅಧಿಕಾರಿಯೊಬ್ಬರು ಸಲ್ಲಿಸಿದ ದೂರಿನ ಪ್ರಕಾರ, ಸಂಜಯ್ ನಗರದ ಸವಿತಾ ಮಹರ್ಷಿ ಕಾಲೇಜಿನಲ್ಲಿ ಪದವಿ ಕೋರ್ಸ್‌ಗಳನ್ನು ಓದುವ ನಿರೀಕ್ಷೆಯಲ್ಲಿ ಜನವರಿ 2022 ರಿಂದ ಏಪ್ರಿಲ್ 2023 ರ ನಡುವೆ ಮೂರು ದೇಶಗಳಿಂದ ಭಾರತಕ್ಕೆ ಆಗಮಿಸಿದ 104 ವಿದ್ಯಾರ್ಥಿಗಳಿಗೆ ವಂಚನೆ ಮಾಡಲಾಗಿದೆ.

ದೂರಿನ ಪ್ರಕಾರ, ವಂಚನೆಗೆ ಒಳಗಾದವರಲ್ಲಿ ಹೆಚ್ಚಿನವರು ಯೆಮೆನ್‌ ದೇಶದವರಾಗಿದ್ದಾರೆ. ಬೆಂಗಳೂರಿನ ಕಾಲೇಜಿನಲ್ಲಿ ಅಲ್ಪಾವಧಿಯ ಕೋರ್ಸ್‌ಗಳ ಮೂಲಕ ಇಂಗ್ಲಿಷ್ ಕಲಿಯಲು ಆಗಮಿಸಿದ್ದರು. ಇವರನ್ನೇ ಗುರಿಯಾಗಿಸಿಕೊಂಡು ಕಾಲೇಜಿನ ಪರವಾಗಿ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಖಾನ್​ನನ್ನು ಬಂಧಿಸಿದ ಪೊಲೀಸರು, ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ವಿದೇಶಿ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆದಿರುವ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Mohan Bhagwat: ನಮ್ಮ ಸಮಾಜದ ಜನರನ್ನು ವಂಚನೆ ಮಾಡುತ್ತಿದೆ ಈ ಮಿಷನರಿಗಳು: ಮೋಹನ್ ಭಾಗವತ್

ದಾಖಲೆಗಳ ಆಧಾರದ ಮೇಲೆ, ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬರಲು ವೀಸಾಗಳನ್ನು ಪಡೆದಿದ್ದರು. ಆದರೆ ಎಫ್‌ಆರ್‌ಆರ್‌ಒ ನಡೆಸಿದ ವಿಚಾರಣೆಯಲ್ಲಿ ಯಾವುದೇ ವಿದೇಶಿ ವಿದ್ಯಾರ್ಥಿಗಳು ಪದವಿ ಕಾಲೇಜಿಗೆ ಪ್ರವೇಶ ಪಡೆದಿಲ್ಲ ಎಂದು ತಿಳಿದುಬಂದಿದೆ. ಬೆಂಗಳೂರಿನ ಕಾಲೇಜಿಗೆ ವಿದ್ಯಾರ್ಥಿಗಳನ್ನು ಕರೆತರಲು ಮಾನ್ಯತೆ ಪಡೆದ ಏಜೆಂಟ್ ಎಂದು ಸೂಚಿಸುವ ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿದ್ದಾನೆ ಎಂದು ಸಿಸಿಬಿ ತನಿಖೆಯಿಂದ ತಿಳಿದುಬಂದಿದೆ. ಈ ದಂಧೆಯಲ್ಲಿ ಕಾಲೇಜು ಆಡಳಿತ ಮಂಡಳಿ ಅಥವಾ ಇತರ ವ್ಯಕ್ತಿಗಳು ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Fri, 21 April 23