ಹೇರ್ ಟ್ರಾನ್ಸ್‌ಪ್ಲಾಂಟ್ ಹೆಸರಲ್ಲಿ ಮೋಸ! ವಿಗ್ ಹಾಕಿ ಪಂಗನಾಮ ಹಾಕಿದ್ದ ಸ್ಟುಡಿಯೋಗೆ ಗ್ರಾಹಕ ಕೋರ್ಟ್​ ದಂಡ

ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಹೇರ್ ಟ್ರಾನ್ಸ್‌ಪ್ಲಾಂಟ್‌ ಬದಲು ವಿಗ್‌ ನೀಡಿ ಹಣ ಹಿಂದಿರುಗಿಸದ ಮ್ಯಾಕ್ಸ್ ಹೇರ್ ಸ್ಟುಡಿಯೋಗೆ ಗ್ರಾಹಕ ಆಯೋಗ ಬಿಸಿ ಮುಟ್ಟಿಸಿದೆ. ವಿಚಾರಣೆ ವೇಳೆ ಸ್ಟುಡಿಯೋ ಗೈರಾದ ಕಾರಣ, ಆಯೋಗವು ಗ್ರಾಹಕನಿಗೆ ಪಾವತಿಸಿದ ಹಣವನ್ನು ಶೇ6 ಬಡ್ಡಿಯೊಂದಿಗೆ ಹಿಂದಿರುಗಿಸುವಂತೆ ಗ್ರಾಹಕರ ಆಯೋಗ ತೀರ್ಪು ನೀಡಿದೆ.

ಹೇರ್ ಟ್ರಾನ್ಸ್‌ಪ್ಲಾಂಟ್ ಹೆಸರಲ್ಲಿ ಮೋಸ! ವಿಗ್ ಹಾಕಿ ಪಂಗನಾಮ ಹಾಕಿದ್ದ ಸ್ಟುಡಿಯೋಗೆ ಗ್ರಾಹಕ ಕೋರ್ಟ್​ ದಂಡ
ಹೇರ್ ಟ್ರಾನ್ಸ್‌ಪ್ಲಾಂಟ್ ಹೆಸರಲ್ಲಿ ಮೋಸ! ವಿಗ್ ಹಾಕಿ ಪಂಗನಾಮ ಹಾಕಿದ್ದ ಸ್ಟುಡಿಯೋಗೆ ಗ್ರಾಹಕ ಕೋರ್ಟ್​ ದಂಡ
Image Credit source: google

Updated on: Mar 27, 2026 | 1:56 PM

ಬೆಂಗಳೂರು, ಮಾರ್ಚ್​ 27: ಹೇರ್ ಟ್ರಾನ್ಸ್‌ಪ್ಲಾಂಟ್​ಗೆಂದು (Hair Transplant) ಬಂದ ವ್ಯಕ್ತಿಗೆ ವಿಗ್ ಹಾಕಿ ಕಳಿಸಿದ್ದ ಸ್ಟೂಡಿಯೋ ವಿರುದ್ಧ ಗ್ರಾಹಕ ಆಯೋಗದಲ್ಲಿ ದೂರು ಸಲ್ಲಿಸಲಾಗಿದ್ದು, ಸಂಸ್ಥೆಗೆ ಕೋರ್ಟ್​ ಬಿಸಿ ಮುಟ್ಟಿಸಿದೆ. ವಿಚಾರಣೆ ವೇಳೆ ಸಂಸ್ಥೆ ಹಾಜರಾಗದಿದ್ದರಿಂದ ಅತೃಪ್ತ ಗ್ರಾಹಕನ ಆರೋಪಗಳಿಗೆ ಸಮ್ಮತಿಸಿದಂತಾಗಿದ್ದು, ಆತ ಪಾವತಿಸಿದ ಹಣದೊಂದಿಗೆ ಬಡ್ಡಿಯನ್ನೂ ಸೇರಿಸಿ ಹಿಂದಿರುಗಿಸುವಂತೆ ಆದೇಶಿಸಿದೆ.

ಹೇರ್ ಟ್ರಾನ್ಸ್‌ಪ್ಲಾಂಟ್ ಬದಲು ವಿಗ್

ಬೆಂಗಳೂರಿನ ನಿವಾಸಿಯಾದ 54 ವರ್ಷದ ವ್ಯಕ್ತಿಯೊಬ್ಬರು ಹೇರ್ ಟ್ರಾನ್ಸ್‌ಪ್ಲಾಂಟ್​ಗೆಂದು 2024ರ ಆಗಸ್ಟ್ 10ರಂದು ಲವೆಲ್ ರೋಡ್‌ನಲ್ಲಿರುವ ಮ್ಯಾಕ್ಸ್ ಹೇರ್ ಸ್ಟೂಡಿಯೋ ಇಂಟರ್​ನ್ಯಾಶನಲ್ ಪ್ರೈ.ಲಿ ಗೆ ಭೇಟಿ ನೀಡಿದ್ದರು. ಈ ವೇಳೆ ಕೂದಲು ಕಸಿ ಬಗ್ಗೆ ಮಾಹಿತಿ ಪಡೆದು, ಪ್ರಾರಂಭದಲ್ಲಿ 500 ರೂಪಾಯಿ ನಗದು ಹಾಗೂ 5,000 ರೂಪಾಯಿ ಕಾರ್ಡ್ ಮೂಲಕ ಪಾವತಿಸಿದ್ದರು. ಆದರೆ ವೈದ್ಯಕೀಯ ಪರಿಶೀಲನೆ ಬಳಿಕ ಅವರಿಗೆ ಟ್ರಾನ್ಸ್‌ಪ್ಲಾಂಟ್ ಬದಲಿಗೆ ವಿಗ್ ಬಳಸುವಂತೆ ಸಲಹೆ ನೀಡಲಾಗಿತ್ತು.

ಒಂದು ವೇಳೆ ವಿಗ್ ಅವರಿಗೆ ಹಿಡಿಸದಿದ್ದರೆ ಸಂಪೂರ್ಣ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ವಿಗ್ ಅಳವಡಿಸಿಕೊಂಡ ವ್ಯಕ್ತಿಗೆ ತನ್ನ ಹೊಸ ಲುಕ್ ಇಷ್ಟವಾಗದಾಗ ಹಣ ಹಿಂದಿರುಗಿಸುವಂತೆ ಕೇಳಿದ್ದರು. ಅವರ ಮಾತಿನಂತೆ ಆನ್​ಲೂನ್​ ಮೂಲಕ ಹಣವನ್ನು ಮರು ಪಾವತಿಸುತ್ತೇವೆಂದು ಭರವಸೆ ನೀಡಿದ್ದರು. ಆದರೆ ನಂತರದಲ್ಲಿ ಅವರಿಗೆ ಹಣ ವಾಪಸ್ ಬರದ ಹಿನ್ನೆಲೆ 2025ರ ಜೂನ್ 20ರಂದು ಬೆಂಗಳೂರು ಅರ್ಬನ್ II ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಹಣ ಮರುಪಾವತಿ ಜೊತೆಗೆ ಬಡ್ಡಿಯನ್ನೂ ಕೊಡುವಂತೆ ಆದೇಶ

ಆಯೋಗದ ವಿಚಾರಣೆ ವೇಳೆಯಲ್ಲೂ ಸಂಸ್ಥೆ ಹಾಜರಾಗದ ಹಿನ್ನೆಲೆ ಗ್ರಾಹಕನ ಆರೋಪಗಳು ನಿಜವೆಂದು ಪರಿಗಣಿಸಿದ ಅಧ್ಯಕ್ಷ ವಿಜಯಕುಮಾರ್ ಎಂ ಪವಾಲೆ ಮತ್ತು ಸದಸ್ಯೆ ಅನುರಾಧಾ ವಿ ಒಳಗೊಂಡ ಗ್ರಾಹಕ ಆಯೋಗ ಪೀಠವು ಮಹತ್ವದ ತೀರ್ಪು ನೀಡಿದೆ. ವಿಗ್ ಸೇವೆಯಲ್ಲಿ ದೋಷ ಕಂಡ ಹಿನ್ನೆಲೆಯಲ್ಲಿ, ಸಂಬಂಧಿತ ಸ್ಟುಡಿಯೋವಿಗ್ ಹಿಂತೆಗೆದುಕೊಂಡು 55,000 ರೂ. ಹಣವನ್ನು ಗ್ರಾಹಕನಿಗೆ ವಾಪಾಸ್ ನೀಡಬೇಕು. ಅಲ್ಲದೆ ಆತ ಹಣ ಪಾವತಿಸಿದ ದಿನಾಂಕದಿಂದ 6 ಪ್ರತಿಶತ ಬಡ್ಡಿಯೊಂದಿಗೆ ಹಣವನ್ನು ಮರಳಿಸುವಂತೆ ಆದೇಶಿಸಿದೆ. ಜೊತೆಗೆ ಮಾನಸಿಕ ವೇದನೆ ಮತ್ತು ನ್ಯಾಯಾಂಗ ವೆಚ್ಚಕ್ಕಾಗಿ 5,000 ರೂ. ಪರಿಹಾರ ನೀಡುವಂತೆಯೂ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Follow Us