‘ಮೀಸೆ ತಿರುವಿ, ತೊಡೆ ತಟ್ಟಿ ಪ್ರಚೋದನೆ’ಆರೋಪ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದೂರು ದಾಖಲಿಸಿದ ಜೆಡಿಎಸ್
ಮೊನ್ನೇ ಚಿಕ್ಕಬಳ್ಳಾಪುರದ ಕೆಂಪೇಗೌಡ ಜಯಂತಿ ವೇಳೆ ಭಾರೀ ಹೈಡ್ರಾಮಾವೇ ನಡೆದಿದ್ದು, ಕನ್ನಡ ಭವನದ ಹೊರಗೂ, ಒಳಗೂ ಗಲಾಟೆ, ಘರ್ಷಣೆ ಆಗಿದೆ. ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಸಂಸದ ಸುಧಾಕರ್ ಬೆಂಬಲಿಗರು ರೊಚ್ಚಿಗೆದ್ದಿದ್ದು, ಕನ್ನಡ ಭವನದ ಗೇಟ್ ತಳ್ಳಿ ಬೆಂಬಲಿಗರು ಒಳ ಪ್ರವೇಶ ಮಾಡಿರೋದು ರಣಾಂಗಣಕ್ಕೆ ಕಾರಣ ಆಯ್ತು. ಬಳಿಕ ಪ್ರದೀಪ್ ಈಶ್ವರ್ ಅವರು ಮೀಸೆ ತಿರುವಿ ತೊಡ್ಡೆ ತಟ್ಟಿ ತಿರುಗೇಟು ನೀಡಿದ್ದು, ಇದೀಗ ಇದರ ವಿರುದ್ಧ ಜೆಡಿಎಸ್ ದೂರು ದಾಖಲಿಸಿದೆ.

ಮುಖ್ಯಾಂಶಗಳು
- ಪ್ರಚೋದನಕಾರಿ ವರ್ತನೆ ಆರೋಪ ಮೇಲೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜೆಡಿಎಸ್ ದೂರು
- ಚಿಕ್ಕಬಳ್ಳಾಪುರ ಎಸ್‌ಪಿಗೆ ಜೆಡಿಎಸ್ ಕಾನೂನು ಹಾಗೂ ಸಾಮಾಜಿಕ ಜಾಲತಾಣ ವಿಭಾಗದಿಂದ ದೂರು
- ಮೀಸೆ ತಿರುಗಿಸಿ, ತೊಡೆ ತಟ್ಟಿ ಜನರನ್ನ ಕೆರಳಿಸಿದ್ದಾರೆ ಎಂದು ಆರೋಪ
ಚಿಕ್ಕಬಳ್ಳಾಪುರ (ಜೂನ್.29): ಚಿಕ್ಕಬಳ್ಳಾಪುರ (Chikkaballapur) ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರ ವರ್ತನೆ ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ ಹಾಗೂ ಸಾರ್ವಜನಿಕವಾಗಿ ಮೀಸೆ ತಿರುವಿ, ತೊಡೆ ತಟ್ಟಿ ಕುಸ್ತಿಗೆ ಆಹ್ವಾನ ನೀಡಿದ ಆರೋಪದ ಮೇಲೆ ಶಾಸಕರ ವಿರುದ್ಧ ಜೆಡಿಎಸ್ (JDS) ದೂರು ದಾಖಲಿಸಿದೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಮಾತನಾಡಿ, ತೊಡೆ ತಟ್ಟಿ ಸವಾಲೆಸೆದಿದ್ದಾರೆ. ಅಲ್ಲದೇ ಜಾತಿ ಹೆಸರಿನಲ್ಲಿ ವೈಷಮ್ಯ ಮೂಡಿಸುವಂತಹ ಹೇಳಿಕೆ ನೀಡಿ ಪ್ರಚೋದನಕಾರಿ ವರ್ತನೆ ತೋರಿದ್ದಾರೆ ಎಂದು ಜೆಡಿಎಸ್ ಕಾನೂನು ಘಟಕ ದೂರು ನೀಡಿದೆ.
ಚಿಕ್ಕಬಳ್ಳಾಪುರ ಎಸ್ಪಿಗೆ ದೂರು
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಸ್.ಪಿ. ಮತ್ತು ಜಿಲ್ಲಾಧ್ಯಕ್ಷ ಬಿ.ಎನ್. ಮುನಿಯಪ್ಪ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಎಸ್‌ಪಿ ಕಚೇರಿಗೆ ತೆರಳಿ ದೂರು ನೀಡಲಾಗಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಶಾಸಕರು ಸಾರ್ವಜನಿಕವಾಗಿ ಇಂತಹ ಅಸಹ್ಯ ಸನ್ನೆಗಳನ್ನು ಮಾಡುವುದು ಮತ್ತು ಪ್ರಚೋದನೆ ನೀಡುವುದು ಕಾನೂನು ಬಾಹಿರ. ಆದ್ದರಿಂದ ಅವರ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ: ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ನಾಲ್ವರ ಬಂಧನ; ಖರ್ಗೆ ಖಂಡನೆ
ಜೂನ್ 27, 2026 ರಂದು ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ‘ಕೆಂಪೇಗೌಡ ಜಯಂತಿ’ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಸಾರ್ವಜನಿಕರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತಾದ ಹಳೆಯ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಉದ್ವಿಗ್ನಗೊಂಡ ಶಾಸಕರು, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅತ್ಯಂತ ಕೀಳು ಮಟ್ಟದಲ್ಲಿ ವರ್ತಿಸಿದ್ದಾರೆ ಎಂಬುದು ಜೆಡಿಎಸ್ ಮುಖಂಡರ ಆರೋಪವಾಗಿದೆ.
ದೂರಿನಲ್ಲಿರುವ ಆರೋಪಗಳೇನು?
ಅವಹೇಳನಕಾರಿ ಮಾತು: ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಏಕವಚನದಲ್ಲಿ ಮಾತನಾಡಿ ಅವಮಾನಿಸಿದ್ದಾರೆ.
ಪ್ರಚೋದನಕಾರಿ ವರ್ತನೆ: ಸಾರ್ವಜನಿಕವಾಗಿ ಕಾಫಿ ಕುಡಿಯುತ್ತಾ ತೋಳು ಏರಿಸುವುದು, ಮೀಸೆ ತಿರುಗಿಸುವುದು ಹಾಗೂ ಶರ್ಟ್ ಗುಂಡಿ ಬಿಚ್ಚಿ ತೊಡೆ ತಟ್ಟುವ ಮೂಲಕ ಜನರನ್ನು ಕುಸ್ತಿಗೆ ಅಥವಾ ಜಗಳಕ್ಕೆ ಆಹ್ವಾನಿಸುವಂತೆ ರೌಡಿ ವರ್ತನೆ ತೋರಿದ್ದಾರೆ.
ಜಾತಿ ವಿಷಬೀಜ: ತಾನೊಬ್ಬ ‘ಓಬಿಸಿ ಶಾಸಕ’ ಎಂದು ಪದೇ ಪದೇ ಹೇಳಿಕೊಳ್ಳುವ ಮೂಲಕ ಸಮಾಜದಲ್ಲಿ ಜಾತಿಗಳ ನಡುವೆ ವಿಷಬೀಜ ಬಿತ್ತಲು ಪ್ರಯತ್ನಿಸಿದ್ದಾರೆ.
ಮಾಧ್ಯಮಗಳ ಮುಂದೆ ದರ್ಪ: ಮಾಧ್ಯಮಗಳ ಮುಂದೆ ತಮ್ಮ ತಲೆಯ ಕೂದಲು ಕಿತ್ತು ‘ನನ್ನನ್ನು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಬದ್ಧತೆ ಇಲ್ಲದ ಮಾತುಗಳನ್ನು ಆಡಿ ಸಮಾಜದ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತೀವ್ರ ವಿರೋಧದ ನಡುವೆಯೂ ಕಾರ್ಯಕ್ರಮ ಮುಗಿಸಿ ಭವನದಿಂದ ಹೊರಬಂದ ಶಾಸಕ ಪ್ರದೀಪ್ ಈಶ್ವರ್, ತಮ್ಮ ಕಾರು ಏರುವ ಮುನ್ನ ವಿರೋಧಿಗಳತ್ತ ನೋಡಿ ತೋಳು ತಟ್ಟಿ, ಮೀಸೆ ತಿರುವಿ ಸವಾಲು ಹಾಕಿದ್ದರು. ಇನ್ನೊಂದೆಡೆ ಮೆರವಣಿಗೆ ವೇಳೆ ಪ್ರದೀಪ್ ಈಶ್ವರ್ ಕಾರಿನ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದು, ತಕ್ಷಣವೇ ಆತನನ್ನ ಬಂಧಿಸಿದ್ದರು. ಬಳಿಕ ಪ್ರದೀಪ್ ಈಶ್ವರ್ ಮಾತನಾಡಿ, ನಿನ್ನ ಚೇಲಾಗಳಿಗೆ ಹೆದರೋನು ನಾನು ಅಲ್ಲ . ನಾನೊಬ್ಬ ಒಬಿಸಿ ಶಾಸಕ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅಂತಾ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಖಬರ್ದಾರ್ ಎಂದು ಗುಡುಗಿದ್ದರು.



