ಜೆಪ್ಟೋಗೆ ಶಾಕ್ ಕೊಟ್ಟ ಆಹಾರ ಸುರಕ್ಷತಾ ಇಲಾಖೆ: ಅಸ್ವಚ್ಛವಾಗಿದ್ದ ಹೊಸಕೋಟೆಯ ಗೋದಾಮು ಸೀಜ್!
ಕ್ವಿಕ್ ಕಾಮರ್ಸ್ ದೈತ್ಯ ಸಂಸ್ಥೆ ಜೆಪ್ಟೋಗೆ (Zepto) ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆ ತೀವ್ರ ಆಘಾತ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವ ಸಂಸ್ಥೆಯ ಪ್ರಮುಖ ಗೋದಾಮಿನಲ್ಲಿ ಅತ್ಯಂತ ಅಸ್ವಚ್ಛ ವಾತಾವರಣ ಮತ್ತು ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಗೋದಾಮನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಅಲ್ಲದೆ, ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಶಿಫಾರಸು ಮಾಡಲಾಗಿದೆ.

ಮುಖ್ಯಾಂಶಗಳು
- ಆಹಾರ ಸುರಕ್ಷತಾ ಇಲಾಖೆಯಿಂದ ಮುಂದುವರಿದ ದಾಳಿ
- ರೇಡ್ ವೇಳೆ ಜೆಪ್ಟೋ ಗೋದಾಮಲ್ಲಿ ತೀವ್ರ ಅಸ್ವಚ್ಛತೆ ಪತ್ತೆ
- ಹೊಸಕೋಟೆ ಗೋದಾಮು ಸೀಜ್ ಮಾಡಿದ ಅಧಿಕಾರಿಗಳು
ಹೊಸಕೋಟೆ, ಆಗಸ್ಟ್ 12: ಕ್ವಿಕ್ ಕಾಮರ್ಸ್ ಸಂಸ್ಥೆ ಜೆಪ್ಟೋಗೆ ಸೇರಿದ ಬೆಂಗಳೂರು (Bengaluru) ಹೊರವಲಯದ ಗೋದಾಮಿನ ಮೇಲೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಸಾವಯವ ತ್ಯಾಜ್ಯ, ಎಲ್ಲೆಂದರಲ್ಲಿ ಬಿದ್ದಿದ್ದ ಕವರ್‌ಗಳು ಮತ್ತು ಬಾಟಲಿಗಳು, ನೆಲದ ಮೇಲೆ ಸಂಗ್ರಹವಾಗಿದ್ದ ಕೊಳೆ ಹಾಗೂ ಖಾಲಿ ಕಾರ್ಡ್‌ಬೋರ್ಡ್ ಬಾಕ್ಸ್‌ಗಳು ಪತ್ತೆಯಾಗಿವೆ. ಗೋದಾಮಿನ ಪರಿಸ್ಥಿತಿ ಅತ್ಯಂತ ಅಸ್ವಚ್ಛವಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಆಹಾರ ಉತ್ಪನ್ನಗಳ ಲೇಬಲಿಂಗ್‌ನಲ್ಲಿ ನಿಯಮ ಉಲ್ಲಂಘನೆ, ತಪ್ಪು ಬ್ರ್ಯಾಂಡಿಂಗ್ (Misbranding) ಹಾಗೂ ಅಸ್ವಚ್ಛ ರೀತಿಯಲ್ಲಿ ಆಹಾರ ನಿರ್ವಹಣೆ ಸೇರಿದಂತೆ ಹಲವು ಲೋಪಗಳನ್ನು ಆರೋಗ್ಯ ಇಲಾಖೆ ಗುರುತಿಸಿದೆ.
FSSAI ನಿಯಮಗಳಿಗೆ ವಿರುದ್ಧವಾದ ಲೇಬಲಿಂಗ್ ಪತ್ತೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿರುವ ಜೆಪ್ಟೋ ಗೋದಾಮಿನಲ್ಲಿ ಆಹಾರ ಉತ್ಪನ್ನಗಳ ಗುಣಮಟ್ಟ, ಸುರಕ್ಷತೆ, ಸಂಗ್ರಹಣೆ, ಲೇಬಲಿಂಗ್ ಮತ್ತು ಆಹಾರ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸುವ ಉದ್ದೇಶದಿಂದ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿತ್ತು. ತಪಾಸಣೆ ವೇಳೆ FSSAI ನಿಯಮಗಳಿಗೆ ವಿರುದ್ಧವಾದ ಲೇಬಲಿಂಗ್, ತಪ್ಪು ಬ್ರ್ಯಾಂಡಿಂಗ್, ಅಸ್ವಚ್ಛ ಆಹಾರ ನಿರ್ವಹಣೆ ಮತ್ತು ಸಂಗ್ರಹಣಾ ಪರಿಸ್ಥಿತಿ ಸೇರಿದಂತೆ ಹಲವು ಆಹಾರ ಸುರಕ್ಷತಾ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ಗಳ ಅಡುಗೆ ಮನೆಗಳ ಮೇಲೆ ದಾಳಿ: ಇಲಿ, ಹೆಗ್ಗಣಗಳ ಕಂಡು ಹೌಹಾರಿದ ಅಧಿಕಾರಿಗಳು!
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಗೋದಾಮನ್ನು ಸೀಲ್ ಮಾಡಿದ್ದು, ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಆಹಾರ ಉದ್ಯಮ ನಿರ್ವಾಹಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಸಾರ್ವಜನಿಕರಿಗೆ ಸುರಕ್ಷಿತ, ಗುಣಮಟ್ಟದ ಹಾಗೂ ಸ್ವಚ್ಛ ಆಹಾರ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆ ಇಂತಹ ವಿಶೇಷ ತಪಾಸಣಾ ಕಾರ್ಯಾಚರಣೆಗಳನ್ನು ಮುಂದುವರಿಸಲಿದೆ ಎಂದು ತಿಳಿಸಿದೆ.
ಜೆಪ್ಟೋ ಪ್ರತಿಕ್ರಿಯೆ
ಘಟನೆಗೆ ಸಂಬಂಧಿಸಿದಂತೆ ಜೆಪ್ಟೋ ಕೂಡ ಪ್ರತಿಕ್ರಿಯೆ ನೀಡಿದೆ. ದೇಶಾದ್ಯಂತ ಅಧಿಕಾರಿಗಳು ನಿಯಮಿತ ಮೇಲ್ವಿಚಾರಣೆಯ ಭಾಗವಾಗಿ ಆಹಾರ ಸುರಕ್ಷತಾ ತಪಾಸಣೆಗಳನ್ನು ನಡೆಸುತ್ತಾರೆ. ತಪಾಸಣೆ ವೇಳೆ ಅಧಿಕಾರಿಗಳೊಂದಿಗೆ ಸಂಸ್ಥೆ ಸಂಪೂರ್ಣ ಸಹಕರಿಸಿದೆ. ಅಧಿಕಾರಿಗಳು ನೀಡಿದ ಸೂಚನೆಗಳು ಮತ್ತು ಗಮನಕ್ಕೆ ತಂದಿರುವ ಅಂಶಗಳನ್ನು ದಾಖಲಿಸಿಕೊಂಡಿದ್ದು, ಅವುಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜೆಪ್ಟೋ ವಕ್ತಾರರು ತಿಳಿಸಿರೋದಾಗಿ ಎನ್ಡಿಟಿವಿ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




