ಮಂಗಳೂರು ಕುಕ್ಕರ್​ ಬಾಂಬ್ ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರಿಕ್​ನನ್ನು ಮಾರ್ಚ್‌ 15ರವರೆಗೆ ಕಸ್ಟಡಿಗೆ ಪಡೆದ NIA ಅಧಿಕಾರಿಗಳು

ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್​ ಬಾಂಬ್ ಸ್ಫೋಟಿಸಿದ್ದ ಪ್ರಕರಣ ಸಂಬಂಧಿಸಿದಂತೆ ಶಂಕಿತ ಉಗ್ರ ಶಾರಿಕ್​ನನ್ನು ಮಾರ್ಚ್‌ 15ರವರೆಗೆ ಎನ್‌ಐಎ ಅಧಿಕಾರಿಗಳ ಕಸ್ಟಡಿಗೆ ನೀಡಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಮಂಗಳೂರು ಕುಕ್ಕರ್​ ಬಾಂಬ್ ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರಿಕ್​ನನ್ನು ಮಾರ್ಚ್‌ 15ರವರೆಗೆ ಕಸ್ಟಡಿಗೆ ಪಡೆದ NIA ಅಧಿಕಾರಿಗಳು
ಶಂಕಿತ ಉಗ್ರ ಶಾರಿಕ್‌
Follow us
ಗಂಗಾಧರ​ ಬ. ಸಾಬೋಜಿ
| Updated By: Ganapathi Sharma

Updated on:Mar 06, 2023 | 5:27 PM

ಬೆಂಗಳೂರು: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್​ ಬಾಂಬ್ ಸ್ಫೋಟ(Mangalore Cooker Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಸುಟ್ಟು ಗಾಯಗೊಂಡಿದ್ದ ಶಂಕಿತ ಉಗ್ರ ಶಾರಿಕ್(Shariq) ಇದೀಗ ಚೇತರಿಸಿಕೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆತನನ್ನು ಬಳಿಕ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಮಾರ್ಚ್‌ 15ರವರೆಗೆ ಎನ್‌ಐಎ ಅಧಿಕಾರಿಗಳ ಕಸ್ಟಡಿಗೆ ನೀಡಿ  ಆದೇಶಿಸಿದೆ. ಕಸ್ಟಡಿಗೆ ಪಡೆದು ಶಾರಿಕ್​ನ ವಿಚಾರಣೆ ಮಾಡಲಿದ್ದಾರೆ. ಕುಕ್ಕರ್​ ಬಾಂಬ್ ಸ್ಫೋಟ ವೇಳೆ ಗಂಭೀರ ಗಾಯಗೊಂಡಿದ್ದ ಶಾರಿಕ್​ನನ್ನು ಮಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ 2022ರ ಡಿಸೆಂಬರ್​ 17ರಂದು ​ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎನ್​ಐಎ ಹಾಗೂ ಸ್ಥಳೀಯ ಪೊಲೀಸರ ಭದ್ರತೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಸ್ಫೋಟದ ಹೊಣೆ ಹೊತ್ತ ಐಎಸ್​ಐಎಸ್

ಇನ್ನು ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್​ಐಎಸ್ (ISIS)​ ಉಗ್ರ ಸಂಘಟನೆ ಕೊನೆಗೂ ಸ್ಫೋಟದ ಹೊಣೆ ಹೊತ್ತಿದೆ. ಐಸಿಸ್​ ಸಂಘಟನೆಯ ವಕ್ತಾರ ಐಎಸ್​​ಕೆಪಿ (ಇಸ್ಲಾಮಿಕ್ ಸ್ಟೇಟ್ಸ್ ಕೊರಸನ್ ಪ್ರಾವಿನ್ಸ್​​) ನಡೆಸುವ ವಾಯ್ಸ್ ಆಫ್ ಕೂರಸ ನಿಯತಕಾಲಿಕೆಯಲ್ಲಿ ಕರ್ನಾಟಕದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರು ಸ್ಪೋಟದ ಹೊಣೆ ಹೊತ್ತಿರುವ ಕುರಿತಾಗಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Mangaluru: ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಕೊನೆಗೂ ಸ್ಫೋಟದ ಹೊಣೆ ಹೊತ್ತ ISIS ಉಗ್ರ ಸಂಘಟನೆ

ಶಂಕಿತ ಉಗ್ರ ಶಾರೀಕ್​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ (Islamic Resistence Concil – IRC) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿತ್ತು. ಶಂಕಿತ ಉಗ್ರ ಶಾರೀಕ್​ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಉಗ್ರರು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಮಂಗಳೂರು ಬಾಂಬ್ ಸ್ಪೋಟ ಪ್ರಕರಣ‌; ಬಾಂಬ್ ತಯಾರಿಸುವ ವೇಳೆ ಮೊಬೈಲ್ ಟ್ರೈನಿಂಗ್ ಪಡೆದ ಆರೋಪಿ

ಸಂತ್ರಸ್ತಗೆ ಹೊಸ ಆಟೋ, 5 ಲಕ್ಷ ರೂ. ಪರಿಹಾರ ಚೆಕ್​ ವಿತರಿಸಿದ ಕಟೀಲ್

ಕುಕ್ಕರ್ ಬಾಂಬ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿಗೆ ಹೊಸ ಆಟೋ ರಿಕ್ಷಾ ಹಾಗೂ 5 ಲಕ್ಷ ರೂ. ಪರಿಹಾರ ಧನದ ಚೆಕ್​ನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿತರಣೆ ಮಾಡಿದರು. ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್​ನಲ್ಲಿ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಕೂಡ ಗಾಯಗೊಂಡಿದ್ದರು. ನಗರದ ಉಜ್ಜೋಡಿಯ ಪುರುಷೋತ್ತಮ ನಿವಾಸಕ್ಕೆ ತೆರಳಿ ಆಟೋದ ದಾಖಲೆ ಪತ್ರಗಳ ಜೊತೆ ನೂತನ ಆಟೋ ಹಸ್ತಾಂತರ ಮಾಡಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಹಾಗೂ ಸ್ಥಳೀಯ ನಾಯಕರು‌ ಸಾಥ್​ ನೀಡಿದರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:05 pm, Mon, 6 March 23