ಬೆಂಗಳೂರು: ಮಣಪುರಂ ಗೋಲ್ಡ್ ಫೈನಾನ್ಸ್ನಲ್ಲಿ (Manappuram Gold Finance) ಬೃಹತ್ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಖುದ್ದು ಕಂಪನಿಯ ವಲಯ ಮ್ಯಾನೇಜರ್ (Manager) ದೂರು ದಾಖಲಿಸಿದ್ದಾರೆ. ಕೋಟಿ ಕೋಟಿ ವಂಚನೆ ಆರೋಪ ಹಿನ್ನೆಲೆ ಯಶವಂತಪುರ ಪೊಲೀಸರು ನಾಲ್ವರು ಕಂಪನಿ ಸಿಬ್ಬಂದಿಗಳನ್ನ ಅರೆಸ್ಟ್ ಮಾಡಿದ್ದಾರೆ. ಅಮರ್ ನಾಥ್, ಶಿವಕುಮಾರ್, ಮೋನಿಷಾ ಸೇರಿದಂತೆ ನಾಲ್ವರು ಬಂಧನಕ್ಕೊಳಗಾಗಿದ್ದಾರೆ. ಯಶವಂತಪುರ ಬ್ರ್ಯಾಂಚ್ನ ಮಣಪುರಂ ಗೋಲ್ಡ್ ಫೈನಾನ್ಸ್ನಲ್ಲಿ ಸಿಬ್ಬಂದಿಗಳು ಅಡವಿಟ್ಟ ಚಿನ್ನವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ.
ಜೊತೆಗೆ ಫೈನಾನ್ಸ್ನಲ್ಲಿ ಇಟ್ಟಿದ್ದ ಅಪಾರ ಪ್ರಮಾಣದ ನಗದನ್ನು ಸಹ ಸಿಬ್ಬಂದಿಗಳು ತೆಗದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ಗಳು ದಾಖಲಾಗಿವೆ. ಬ್ರ್ಯಾಂಚ್ ಅಧಿಕಾರಿಗಳಿಗೆ ಕೆಜಿ ಕೆಜಿ ಚಿನ್ನ ಕೊಟ್ಟು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 2 ಕೆಜಿ ಚಿನ್ನ ಪಡೆದ ಅಧಿಕಾರಿಗಳು ಬೇರೆಯವರ ಹೆಸರಿನಲ್ಲಿ ಅಡವಿಟ್ಟಿದ್ದಾಗಿ ಆರೋಪಿಸಿ ಕಲಾವತಿ ಎಂಬ ಮಹಿಳೆ ದೂರು ನೀಡಿದ್ದಾರೆ.
ಮಹಿಳೆಯಿಂದ ಪಡೆದ ಚಿನ್ನವನ್ನು ಬೇರೆಯವರ ಹೆಸರಿನಲ್ಲಿ ಕಂಪನಿಯಲ್ಲಿ ಅಡಮಾನ ಇಟ್ಟಿದ್ದಾರೆ. ಈ ಮೂಲಕ ಅಕ್ರಮ ಲಾಭ ಮಾಡಿಕೊಂಡು ಮೋಸ ಮಾಡಿರುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿದೆ. ಬ್ರಾಂಚ್ ಹೆಡ್ ಶ್ವೇತ ಸೇರಿದಂತೆ ಆರು ಮಂದಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಯಶವಂತಪುರ ಬ್ರಾಂಚ್ ಆಡಿಟಿಂಗ್ ಮಾಡುವಾಗ ಅವ್ಯವಹಾರ ಬಯಲಾಗಿದೆ.
ಆರೋಪಿಗಳಿಂದ ಕಂಪನಿಗೆ ಬರೊಬ್ಬರಿ 2 ಕೋಟಿ ನಷ್ಟವಾಗಿದ್ದು, 18 ವಿವಿಧ ಖಾತೆಗಳ ತೆರೆದು ಅವ್ಯವಹಾರ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಸಿಸ್ಟಂನಲ್ಲಿ ಸುಳ್ಳು ಎಂಟ್ರಿ ಮಾಡುವ ಮೂಲಕ ಕಂಪನಿಗೆ ಮೋಸ ಮಾಡಿದ್ದಾರೆ. ಯಶವಂತಪುರ ಪೊಲೀಸರು ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ
ವ್ಲಾಡಿಮಿರ್ ಪುಟಿನ್ ವಿರುದ್ಧ ವಿನೂತನ ಪ್ರತಿಭಟನೆ ಮಾಡುತ್ತಿರುವ ಬ್ರಿಟನ್ ಪಬ್; ಹೇಗೆ ಅಂತೀರಾ? ಇಲ್ಲಿದೆ ನೋಡಿ
Published On - 9:23 am, Wed, 9 March 22