
ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಇಂದು ಪ್ರಮುಖ ವಿಧೇಯಕಗಳನ್ನು ಮಂಡನೆ ಮಾಡಲಾಗಿದೆ. ಕಲಾಪದಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪ, ಪಿಎಸ್‌ಐ ಹಗರಣ, ರಾಜ್ಯದ ಮಳೆ ಸೇರಿದಂತೆ ಅನೇಕ ಚರ್ಚೆಗಳು ನಡೆದಿವೆ. ಸದ್ಯ ಇಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಚರ್ಚೆ, ಆರೋಪ, ವಿರೋಧಗಳ ನಡುವೆ ಪ್ರಮುಖ ವಿಧೇಯಕಗಳನ್ನು ಅಂಗೀಕರಿಸಲಾಗಿದೆ.
ವಿಧಾನಸಭೆಯಲ್ಲಿ ಅಂಗೀಕರಿಸಲಾದ ವಿಧೇಯಕ
ವಿಧಾನಸಭೆಯಲ್ಲಿ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ ಅಂಗೀಕಾರಿಸಲಾಗಿದೆ. ಇದು ಜಿಲ್ಲೆಗೊಂದು ವಿವಿ ಸ್ಥಾಪನೆಗೆ ಅವಕಾಶ ನೀಡುವ ವಿಧೇಯಕ. ಇನ್ನು ವಿಧಾನಸಭೆಯಲ್ಲಿ ಕಾಂಗ್ರೆಸ್ ಸಭಾತ್ಯಾಗದ ನಡುವೆಯೇ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ. ಪರಿಷತ್ನಲ್ಲಿ ತಿದ್ದುಪಡಿಯೊಂದಿಗೆ ಅಂಗೀಕಾರವಾದ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಆರಗ ಮಂಡಿಸಿದ್ದರು.
ಭೂಕಬಳಿಕೆ ನಿಷೇಧ ತಿದ್ದುಪಡಿ ಬಿಲ್ ಕೂಡ ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. 2011ರಲ್ಲಿ ತಿದ್ದುಪಡಿ ಮಾಡಿದ್ದ ಭೂಕಬಳಿಕೆ ನಿಷೇಧ ವಿಧೇಯಕವನ್ನು ಕಂದಾಯ ಸಚಿವ R.ಅಶೋಕ್ ಮಂಡಿಸಿದ್ರು. ಇದನ್ನೂ ಓದಿ: ಕುಮ್ಕಿ ಸಕ್ರಮಕ್ಕೆ ಸಮಿತಿ, ಆಸ್ತಿಗಳಿಗೆ ಡಿಜಿಟಲ್ ನಂಬರ್: ವಿಧಾನ ಪರಿಷತ್ನಲ್ಲಿ ಕಂದಾಯ ಸಚಿವರ ಮಹತ್ವದ ಘೋಷಣೆ
ವಿಧಾನಪರಿಷತ್ನಲ್ಲಿ ಅಂಗೀಕರಿಸಲಾದ ವಿಧೇಯಕ
ಇನ್ನು ಮತ್ತೊಂದು ಕಡೆ ವಿಧಾನಪರಿಷತ್ನಲ್ಲಿ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರಿಸಲಾಗಿದೆ. ಹಾಗೂ ಚರ್ಚೆ ಬಳಿಕ ಕರ್ನಾಟಕ ರೇಷ್ಮೆಹುಳು ಬಿತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆ ನೂಲು ತಿದ್ದುಪಡಿ ವಿಧೇಯಕ 2022 ಮಂಡನೆ ಮಾಡಲಾಗಿದೆ.
ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಿಬಿಎಂಪಿ ತಿದ್ದುಪಡಿ ವಿಧೇಯಕವನ್ನು ಇಂದು ವಿಧಾನಪರಿಷತ್ನಲ್ಲಿ ಅಂಗೀಕರಿಸಲಾಗಿದೆ. ಇನ್ನು ವಿಧೇಯಕದ ಮೇಲೆ ಚರ್ಚೆ ನಡೆಸುವ ವೇಳೆ, ಬಿಬಿಎಂಪಿ ಚುನಾವಣೆ ನಡೆಸುವುದಕ್ಕೆ ಸರ್ಕಾರ ಸಿದ್ಧವಿದೆಯೇ? ಎಂದು ಸದಸ್ಯ ತಿಪ್ಪೇಸ್ವಾಮಿ ಪ್ರಶ್ನಿಸಿದ್ರು. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಮಹಿಳಾ ST ಮೀಸಲಾತಿ ಹೆಚ್ಚಿದೆ. ಇದು ಸರ್ಕಾರ ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡಂತೆ ಕಾಣ್ತಿದೆ ಎಂದು ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು. ಮರುವಿಂಗಡಣೆ, ಮೀಸಲಾತಿ ಪ್ರಕಟಿಸಲು 4-5 ತಿಂಗಳು ಬೇಕಾಗುತ್ತೆ. ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದ್ರು. ಕಾಂತರಾಜು ವರದಿ ಒಪ್ಪಿಕೊಳ್ಳಬೇಕೆಂದು ನಾಗರಾಜ ಯಾದವ್ ಆಗ್ರಹಿಸಿದ್ರು. ಕಾಂತರಾಜು ವರದಿ ಒಪ್ಪುತ್ತೇವೆಂದು ನಾವು ಹೇಳಿಲ್ಲ. ಕಾಂತರಾಜು ವರದಿ ಬೇರೆಯದ್ದೇ ವಿಷಯವೆಂದು ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದ್ರು. ಬಿಬಿಎಂಪಿ ಮೀಸಲಾತಿ ವಿಚಾರ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಉತ್ತರದ ಬಳಿಕ ವಿಧೇಯಕ ಅಂಗೀಕಾರವಾಯ್ತು. ಇದನ್ನೂ ಓದಿ: ಕಾಂಗ್ರೆಸ್ ಸಭಾತ್ಯಾಗದ ನಡುವೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ಬಿಲ್ ಪಾಸ್
ಮುನಿಸಿಪಾಲಿಟಿಗಳ ತಿದ್ದುಪಡಿ ಬಿಲ್ ಮಂಡನೆ
ಚರ್ಚೆ ಬಳಿಕ ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ವಿಧೇಯಕ-2022 ಅಂಗೀಕರಿಸಲಾಯಿತು. ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ತಿದ್ದುಪಡಿ ಬಿಲ್ ಇಂದು ವಿಧಾನಪರಿಷತ್ನಲ್ಲೂ ಅಂಗೀಕರಿಸಲಾಯಿತು. ಹಾಗೂ ಪರಿಷತ್ನಲ್ಲಿ ಕರ್ನಾಟಕ ಸರಕು ಸೇವೆಗಳ ಮೇಲಿನ ತೆರಿಗೆ ವಿಧೇಯಕ ಅಂಗೀಕರಿಸಲಾಯಿತು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:01 pm, Wed, 21 September 22