ವಿದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದವರ ಬಳಿ 3 ಸಾವಿರಕ್ಕೂ ಹೆಚ್ಚು ಆಮೆ, ಉಡ ಪತ್ತೆ!
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 3000ಕ್ಕೂ ಹೆಚ್ಚು ಆಮೆಗಳು ಹಾಗೂ ಉಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಲೇಷ್ಯಾ ಮತ್ತು ಥಾಯ್ಲೆಂಡ್‌ನಿಂದ ಬಂದ ಪ್ರಯಾಣಿಕರ ಬಳಿ ಇವು ಪತ್ತೆಯಾಗಿವೆ. ವನ್ಯಜೀವಿ ಕಳ್ಳಸಾಗಣೆ ಶಂಕೆಯ ಮೇಲೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಆಮೆಗಳನ್ನು ಅವುಗಳ ಮೂಲ ದೇಶಗಳಿಗೆ ಕಳುಹಿಸಿಕೊಡಸಲಾಗಿದೆ.

ಬೆಂಗಳೂರು, ಮೇ 27: ವಿಚಿತ್ರ ಪ್ರಕರಣವೊಂದರಲ್ಲಿ, ವಿದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ (Bengaluru Airport) ಬಂದ ಪ್ರಯಾಣಿಕರ ಬಳಿ 3 ಸಾವಿರಕ್ಕೂ ಹೆಚ್ಚು ಆಮೆ (Turtles), ಉಡದ ಮರಿಗಳು, ಆಫ್ರಿಕನ್ ಆಮೆಗಳು ಪತ್ತೆಯಾಗಿವೆ. ಅವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಶಂಕಿತ ವನ್ಯಜೀವಿ ಕಳ್ಳಸಾಗಣೆದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಥಾಯ್ ಏರ್‌ವೇಸ್ ವಿಮಾನದಲ್ಲಿ ಥಾಯ್ಲೆಂಡ್‌ನಿಂದ ಶನಿವಾರ ಬೆಳಿಗ್ಗೆ 11.17 ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಾಲಸುಬ್ರಮಣಿಯನ್ ಷಣ್ಮುಗಂ, ವಿಜಯರಾಘವನ್ ಧನಪಾಲ್ ಹಾಗೂ ಭಾನುವಾರ ಮಲೇಷ್ಯಾದಿಂದ ಬಂದ ಅರುಣ್‌ಕುಮಾರ್ ನಾರಾಯಣಸ್ವಾಮಿ ಎಂಬವರ ಬಳಿಯಿಂದ ಆಮೆ, ಉಡ, ಆಫ್ರಿಕನ್ ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಕ್ಕೆ ಪಡೆಯಲಾದ ಮೂವರು ಪ್ರಯಾಣಿಕರ ಬಳಿ, ವನ್ಯಜೀವಿಗಳನ್ನು ತೆಗೆದುಕೊಂಡು ವಿದೇಶ ಪ್ರಯಾಣ ಮಾಡಲು ಅಗತ್ಯವಾದ ಅಧಿಕೃತ ದಾಖಲೆಗಳು ಇರಲಿಲ್ಲ. ಹಿಗಾಗಿ ಅವರ ಬಳಿ ಇದ್ದ ಪ್ರಾಣಿಗಳನ್ನು ವಶಪಡಿಸಿಕೊಂಡು ಭಾನುವಾರ ಅವುಗಳ ಮೂಲ ದೇಶಗಳಾದ ಮಲೇಷ್ಯಾ ಮತ್ತು ಥಾಯ್ಲೆಂಡ್ಗೆ ಕಳುಹಿಸಿಕೊಡಲಾಗಿದೆ. ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ತಿಂಗಳುಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವನ್ಯಜೀವಿ ಕಳ್ಳಸಾಗಣೆ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಾಗಿವೆ. ಆದರೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ವನ್ಯಜೀವಿ ಕಳ್ಳಸಾಗಣೆ ಪ್ರಕರಣ ಕಡಿಮೆಯಾಗಿವೆ. ಮರಿ ಪ್ರಾಣಿಗಳನ್ನೇ ಹೆಚ್ಚಾಗಿ ಕಳ್ಳಸಾಗಣೆ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆ ಇಲ್ಲದೆ ಕಳ್ಳಸಾಗಣೆ ಮಾಡುವುದಕ್ಕಾಗಿ ಆ ಪ್ರಾಣಿಗಳಿಗೆ ಕಡಿಮೆ ಡೋಸ್ನ ನಿದ್ರಾ ಔಷಧ ನೀಡಲಾಗುತ್ತದೆ ಎಂದು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮಲೇಷ್ಯಾದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುವ ಕೆಂಪು ಕಿವಿಯ ಆಮೆಗಳು ಬಹಳ ಬೇಗ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕಳ್ಳಸಾಗಣೆ ಮಾಡಲಾಗುವ ಪ್ರಬೇಧಗಳಲ್ಲಿ ಒಂದಾಗಿವೆ. ಕಳೆದ ವಾರವಷ್ಟೇ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3,000 ಆಮೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಆಟೋ ಪ್ರಯಾಣ ದರ ಏರಿಕೆಗೂ ಮುನ್ನವೇ ಪ್ರಯಾಣಿಕರಿಗೆ ಸಂಕಷ್ಟ: ಅಗ್ರಿಗೇಟರ್ ಕಂಪನಿಗಳ ದುಪ್ಪಟ್ಟು ದರ ವಸೂಲಿ
ಆದಾಗ್ಯೂ, ಆ ಆಮೆ ಪ್ರಬೇಧ ಅಳಿವಿನಂಚಿನಲ್ಲಿರುವ ಪ್ರಬೇಧಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶದ ಅಡಿಯಲ್ಲಿ ರಕ್ಷಿಸಲ್ಪಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ. ಭಾರತೀಯ ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರಲ್ಲಿ ಈ ಜಾತಿಯ ಪ್ರಾಣಿಗಳನ್ನು ‘‘ಶೆಡ್ಯೂಲ್ IV ಪ್ರಾಣಿ’’ ಎಂದು ಗುರುತಿಸಲಾಗಿದೆ. ಅಂದರೆ ಪರವಾನಗಿ ಇಲ್ಲದೆ ಅವುಗಳನ್ನು ಇಟ್ಟುಕೊಳ್ಳುವುದು, ವ್ಯಾಪಾರ ಮಾಡುವುದು ಅಥವಾ ಸಾಗಿಸುವುದು ಅಪರಾಧವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:19 am, Tue, 27 May 25








