ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದು ಬೆಂಗಳೂರಿನಲ್ಲಿ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅನುಮತಿ ನೀಡಿದೆ. ಪಾಲಿಕೆ ಆಟದ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಬಗ್ಗೆ ಪತ್ರ ಬರೆಯಲಾಗಿದೆ. ಬಿಬಿಎಂಪಿ ಸಮಾರಂಭಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. ಕೊವಿಡ್-19 ನಿಯಮಗಳನ್ನು ಉಲ್ಲಂಘಿಸದಂತೆ ಸೂಚನೆ ಕೊಡಲಾಗಿದೆ.
ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ಗೆ ಪತ್ರ ಬರೆದಿದ್ದಾರೆ. ಬಸವನಗುಡಿ ನ್ಯಾಷನಲ್ ಕಾಲೇಜು ಪಕ್ಕದಲ್ಲಿರುವ ಮೈದಾನದಲ್ಲಿ ಜನವರಿ 18 ಹಾಗೂ 19 ಎರಡು ದಿನ ಕಾರ್ಯಕ್ರಮಕ್ಕೆ BBMP ಅನುಮತಿ ನೀಡಿದೆ. ದಕ್ಷಿಣ ವಲಯ ಜಂಟಿ ಆಯುಕ್ತರ ಸೂಚನೆ ಮೇರೆಗೆ ಒಪ್ಪಿಗೆ ನೀಡಲಾಗಿದೆ.
ಈ ನಡುವೆ ಬಿಬಿಎಂಪಿಯಿಂದ ಅನುಮತಿ ವಿಚಾರವಾಗಿ ಮತ್ತೊಂದು ಮಾತು ಕೇಳಿಬಂದಿದೆ. ಕಾಂಗ್ರೆಸ್, ಕೊರೊನಾ ರೂಲ್ಸ್ ಜಾರಿಗೆ ಬರುವ ಮುನ್ನ ಅನುಮತಿ ಪಡೆದಿತ್ತು. ಜನವರಿ 18- 19 ರಂದು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾವೇಶ ನಡೆಸಲು ಅನುಮತಿ ಪಡೆದಿತ್ತು. ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ, ದಕ್ಷಿಣ ವಲಯ ಜಂಟಿ ಆಯುಕ್ತರ ಸೂಚನೆ ಮೇರೆಗೆ ಅನುಮತಿ ನೀಡಲಾಗಿತ್ತು. ಆದರೆ ಹಾಲಿ ಕೊರೊನಾ ರೂಲ್ಸ್ ಜಾರಿಗೆ ಬಂದ ಕಾರಣ, ಅನುಮತಿ ರದ್ದುಪಡಿಸಲು ಬಿಬಿಎಂಪಿ ಮುಂದಾಗಿದೆ ಎಂದೂ ಮಾಹಿತಿ ಕೇಳಿಬಂದಿದೆ.
ಹೈಕೋರ್ಟ್ ಆದೇಶ ನೀಡಿದ್ರೆ ಪಾದಯಾತ್ರೆ ನಿಲ್ಲಿಸುತ್ತೇವೆ: ಸಿದ್ದರಾಮಯ್ಯ ಹೇಳಿಕೆ
ಪಾದಯಾತ್ರೆ ನಿಲ್ಲಿಸಲು ಹೈಕೋರ್ಟ್ ಸೂಚಿಸಿದ್ರೆ ಪಾಲಿಸ್ತೇವೆ. ಹೈಕೋರ್ಟ್ ಆದೇಶದ ವಿರುದ್ಧವಾಗಿ ನಾವು ನಡೆದುಕೊಳ್ಳಲ್ಲ. ಹೈಕೋರ್ಟ್ ಆದೇಶ ನೀಡಿದ್ರೆ ಪಾದಯಾತ್ರೆ (Mekedatu Padayatre) ನಿಲ್ಲಿಸುತ್ತೇವೆ ಎಂದು ಟಿವಿ9ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಬುಧವಾರ ಹೇಳಿಕೆ ನೀಡಿದ್ದಾರೆ. ನೆಲದ ಕಾನೂನು ಬಗ್ಗೆ ನಮಗೆ ಗೌರವವಿದೆ. ನೆಲದ ಕಾನೂನು ಬಗ್ಗೆ ಬಿಜೆಪಿಯವರಿಗೇ ನಂಬಿಕೆ ಇಲ್ಲ. ಬಿಜೆಪಿ ಶಾಸಕರೇ ಕೊವಿಡ್ (Covid19) ನಿಯಮ ಉಲ್ಲಂಘಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಿಯಮ ಪಾಲಿಸುವ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ವಹಿಸಿದೆ. ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲೇ ಜಾತ್ರೆ ನಡೆಸಲಾಗಿದೆ. ಬಿಜೆಪಿಯವರೇ ನಿಯಮ ಸರಿಯಾಗಿ ಪಾಲಿಸುತ್ತಿಲ್ಲ. ಕೊವಿಡ್ ಹೆಚ್ಚಾಗಲು ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರ ಕಾರಣ. ಸೋಂಕು ಹೆಚ್ಚಿರುವ ರಾಜ್ಯಗಳಲ್ಲಿ ಪ್ರಧಾನಿ ರಾಲಿ ನಡೆಸಿದ್ರು ಎಂದು ಟಿವಿ9ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ವಿರುದ್ಧ ಹೈಕೋರ್ಟ್ಗೆ ಪಿಐಎಲ್! ತುರ್ತು ವಿಚಾರಣೆಗೆ ಮನವಿ
Published On - 4:54 pm, Wed, 12 January 22