Menstrual Leave Eligibility: ಬೆಂಗಳೂರಿನಲ್ಲಿ ಮುಟ್ಟಿನ ರಜೆ ಪಡೆಯಲು ಅರ್ಹತೆ ಏನು? ಎಷ್ಟು ರಜೆ ಸಿಗುತ್ತೆ? ಇಲ್ಲಿದೆ ಮಾಹಿತಿ

Karnatka Menstrual Leave Policy 2025: ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಬಗ್ಗೆ ಕರ್ನಾಟಕ ಸರ್ಕಾರ ನವೆಂಬರ್ 12 ರಂದು ಅಧಿಕೃತ ಆದೇಶ ಹೊರಡಿಸಿದ್ದು, 18-52 ವರ್ಷದ ಮಹಿಳೆಯರಿಗೆ ವಿವಿಧ ಕ್ಷೇತ್ರಗಳಲ್ಲಿ ರಜೆ ಲಭ್ಯವಿದೆ. ವರ್ಷಕ್ಕೆ 12 ದಿನಗಳ ಈ ರಜೆಗೆ ವೈದ್ಯಕೀಯ ಪ್ರಮಾಣಪತ್ರ ಅಗತ್ಯವಿಲ್ಲ. ಈ ರಜೆ ಪಡೆಯಲು ಏನೇನು ಅರ್ಹತೆಗಳಿರಬೇಕು? ನಿಯಮಗಳೇನು? ಎಲ್ಲ ವಿವರ ಇಲ್ಲಿದೆ.

Menstrual Leave Eligibility: ಬೆಂಗಳೂರಿನಲ್ಲಿ ಮುಟ್ಟಿನ ರಜೆ ಪಡೆಯಲು ಅರ್ಹತೆ ಏನು? ಎಷ್ಟು ರಜೆ ಸಿಗುತ್ತೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ

Updated on: Nov 13, 2025 | 11:28 AM

ಬೆಂಗಳೂರು, ನವೆಂಬರ್ 13: ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ವೇತನ ಸಹಿತ ಋತು ಚಕ್ರ ರಜೆ ಅಥವಾ ಮುಟ್ಟಿನ ರಜೆ (Menstrual Leave) ನೀಡುವ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ (Karnataka Cabinet) ಅಕ್ಟೋಬರ್​​ನಲ್ಲಿ ಅನುಮೋದನೆ ನೀಡಿತ್ತು. ಆ ಬಗ್ಗೆ ನವೆಂಬರ್ 12 ರಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಹೀಗಾಗಿ ಕಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆಯರು ಈಗ ಮುಟ್ಟಿನ ರಜೆ ಪಡೆಯಬಹುದಾಗಿದೆ.

ಮುಟ್ಟಿನ ರಜೆ ಪಡೆಯಲು ಯಾರೆಲ್ಲ ಅರ್ಹರು?

ರಾಜ್ಯದ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್​, ಬಹುರಾಷ್ಟ್ರೀಯ ಕಂಪನಿಗಳು, ಐಟಿ, ಖಾಸಗಿ ಕೈಗಾರಿಕಾ ವಲಯಗಳಲ್ಲಿ ಉದ್ಯೋಗ ಮಾಡುವ 18 ರಿಂದ 52 ವರ್ಷದೊಳಗಿನ ಎಲ್ಲಾ ಮಹಿಳೆಯರು ಮುಟ್ಟಿನ ರಜೆ ಪಡೆಯಲು ಅರ್ಹರಾಗಿದ್ದಾರೆ.

ಮುಟ್ಟಿನ ರಜೆ: ತಿಂಗಳಿಗೆ ಎಷ್ಟು ರಜೆ ಸಿಗುತ್ತೆ?

ಸರ್ಕಾರದ ಆದೇಶದ ಪ್ರಕಾರ, ಪ್ರತಿ ತಿಂಗಳಿನಲ್ಲಿ ಒಂದು ದಿನ ಮುಟ್ಟಿನ ರಜೆ ಪಡೆಯುವ ಅವಕಾಶ ಇದೆ. ‘ಕಾರ್ಖಾನೆ ಕಾಯ್ದೆ, 1948’, ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1961, ಪ್ಲಾಂಟೇಶನ್ ಕಾರ್ಮಿಕರ ಕಾಯ್ದೆ, 1951, ಬೀಡಿ ಸಿಗಾರ್ ಕಾರ್ಮಿಕರ (ಉದ್ಯೋಗ ಸ್ಥಿತಿ) ಕಾಯ್ದೆ, 1966 ಮತ್ತು ಮೋಟಾರು ವಾಹನ ಕಾರ್ಮಿಕರ ಕಾಯ್ದೆ, 1961 ರ ಅಡಿಯಲ್ಲಿ ಬರುವ ಸಂಸ್ಥೆಗಳಲ್ಲಿ 18-52 ವರ್ಷ ವಯಸ್ಸಿನ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ವರ್ಷಕ್ಕೆ 12 ವೇತನ ಸಹಿತ ರಜೆ ನೀಡಬೇಕೆಂದು ಉದ್ಯೋಗದಾತರಿಗೆ ನಿರ್ದೇಶನ ನೀಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಐಟಿ ಕಂಪನಿಗಳ ಮಹಿಳಾ ಸಿಬ್ಬಂದಿಗೂ ಸಿಗುತ್ತೆ ಮುಟ್ಟಿನ ರಜೆ

ಐಟಿ ಮತ್ತು ಐಟಿ ಆಧಾರಿತ ಸೇವೆಗಳು (ಐಟಿಇಎಸ್) ಕಂಪನಿಗಳಲ್ಲಿ ಕೂಡ ಮಹಿಳೆಯರಿಗೆ ಮುಟ್ಟಿನ ರಜೆ ಸಿಗಲಿದೆ. ಕ್ರೈಸ್ಟ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ) ನ ಡಾ. ಸಪ್ನಾ ಎಸ್ ಅಧ್ಯಕ್ಷತೆಯ 18 ಸದಸ್ಯರ ಸಮಿತಿಯು ಈ ನೀತಿಯನ್ನು ರಚಿಸಿದೆ. ಸಮಿತಿಯು ಈ ಹಿಂದೆ ವಾರ್ಷಿಕವಾಗಿ ಆರು ಮುಟ್ಟಿನ ರಜೆಗಳನ್ನು ಪ್ರಸ್ತಾಪಿಸಿತ್ತು. ಆದಾಗ್ಯೂ, ಕಾರ್ಮಿಕ ಇಲಾಖೆ ನಂತರ ಸಂಖ್ಯೆಯನ್ನು 12 ಕ್ಕೆ ಪರಿಷ್ಕರಿಸಿತು ಮತ್ತು ಅಂತಿಮ ಆವೃತ್ತಿಯನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿತ್ತು.

ಇದನ್ನೂ ಓದಿ: ಉದ್ಯೋಗಸ್ಥ ಮಹಿಳೆಯರಿಗೆ ಸಿದ್ದರಾಮಯ್ಯ ಸರ್ಕಾರ ಉಡುಗೊರೆ, ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ

ಆಯಾ ತಿಂಗಳು ತೆಗೆದುಕೊಂಡರಷ್ಟೇ ರಜೆ

ಸರ್ಕಾರದ ಆದೇಶದ ಪ್ರಕಾರ, ಮಹಿಳಾ ಉದ್ಯೋಗಿಗಳು ಮುಟ್ಟಿನ ರಜೆಯನ್ನು ಅದೇ ತಿಂಗಳೊಳಗೆ ಬಳಸಿಕೊಳ್ಳಬೇಕು. ಒಂದು ವೇಳೆ ಬಳಸದೇ ಹೋದಲ್ಲಿ ಅದನ್ನು ಮುಂದಿನ ತಿಂಗಳಿಗೆ ಮುಂದುವರಿಸಲು ಅನುಮತಿ ನೀಡಲಾಗುವುದಿಲ್ಲ. ಮಹಿಳಾ ನೌಕರರು ರಜೆ ಪಡೆಯುವಾಗ ವೈದ್ಯಕೀಯ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ