AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Menstrual Leave: ಉದ್ಯೋಗಸ್ಥ ಮಹಿಳೆಯರಿಗೆ ಸಿದ್ದರಾಮಯ್ಯ ಸರ್ಕಾರ ಉಡುಗೊರೆ, ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ

ಮುಟ್ಟಿನ ರಜೆ: ಕಂಪನಿಗಳಲ್ಲಿ ಉದ್ಯೋಗ ನಿರತರಾಗಿರುವ ಮಹಿಳೆಯರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಶುಭ ಸುದ್ದಿ ನೀಡಿದೆ. ಮಹಿಳೆಯರಿಗೆ ಪ್ರತಿ ತಿಂಗಳು ವೇತನ ಸಹಿತ ಒಂದು ದಿನ ಮುಟ್ಟಿನ ರಜೆ ನೀಡುವ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಆ ಕುರಿತು ಮಾಹಿತಿ ಇಲ್ಲಿದೆ.

Menstrual Leave: ಉದ್ಯೋಗಸ್ಥ ಮಹಿಳೆಯರಿಗೆ ಸಿದ್ದರಾಮಯ್ಯ ಸರ್ಕಾರ ಉಡುಗೊರೆ, ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ
ಸಾಂದರ್ಭಿಕ ಚಿತ್ರ
ಪ್ರಸನ್ನ ಗಾಂವ್ಕರ್​
| Updated By: Ganapathi Sharma|

Updated on:Oct 09, 2025 | 2:50 PM

Share

ಬೆಂಗಳೂರು, ಅಕ್ಟೋಬರ್ 9: ಉದ್ಯೋಗಸ್ಥ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಬಹುದೊಡ್ಡ ಉಡುಗೊರೆ ನೀಡಿದೆ. ಮಹಿಳೆಯರಿಗೆ ಪ್ರತಿ ತಿಂಗಳು ವೇತನ ಸಹಿತ ಋತು ಚಕ್ರ ರಜೆ ಅಥವಾ ಮುಟ್ಟಿನ ರಜೆ (Menstrual Leave) ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ (Karnataka Cabinet) ಸಭೆ ಗುರುವಾರ ಅನುಮೋದನೆ ನೀಡಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್​​ಕೆ ಪಾಟೀಲ್ ಈ ಮಾಹಿತಿ ಬಹಿರಂಗಪಡಿಸಿದರು.

ಯಾವೆಲ್ಲ ಕ್ಷೇತ್ರದ ಮಹಿಳೆಯರಿಗೆ ಮುಟ್ಟಿನ ರಜೆ?

ರಾಜ್ಯದ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್​, ಬಹುರಾಷ್ಟ್ರೀಯ ಕಂಪನಿಗಳು (MNC), ಐಟಿ, ಖಾಸಗಿ ಕೈಗಾರಿಕಾ ವಲಯಗಳಲ್ಲಿ ಮುಟ್ಟಿನ ರಜೆ ಅನ್ವಯವಾಗಲಿದೆ ಎಂದು ಪಾಟೀಲ್ ತಿಳಿಸಿದರು.

ಮುಟ್ಟಿನ ರಜೆ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದೇನು?

ಮುಟ್ಟಿನ ರಜೆ ಕೊಡುವ ನಿಯಮ ಜಾರಿಗೆ ತರಲು ಕಳೆದ ಒಂದು ವರ್ಷದದಿಂದ ಪ್ರಯತ್ನ ಮಾಡಿದ್ದೆವು. ಮಹಿಳೆಯರು ಹಲವು ಕೆಲಸಗಳನ್ನು ಮಾಡುತ್ತಾರೆ. ಮನೆ ಕೆಲಸದ ಜೊತೆ ಮಕ್ಕಳನ್ನು ನೋಡಿಕೊಳ್ಳಬೇಕು. ಮುಟ್ಟಿನ ಸಂದರ್ಭದಲ್ಲಿ ಮಾನಸಿಕವಾಗಿಯೂ ಒತ್ತಡ ಅನುಭವಿಸುತ್ತಾರೆ. ಹೀಗಾಗಿ ಮುಟ್ಟಿನ ರಜೆ ನೀಡುವ ಬಗ್ಗೆ ಪರಾಮರ್ಶೆ ನಡೆಸಲು ಸಮಿತಿ ರಚನೆ ಮಾಡಿದ್ದೆವು. ಸಮಿತಿ 6 ದಿನಗಳ ಕಾಲ ರಜೆ ಕೊಡಬೇಕು ಎಂದು ಅಲಹೆ ನೀಡಿತ್ತು. ಸರಕಾರ ವಾರ್ಷಿಕ 12 ದಿನ ರಜೆ ಕೊಡುವ ನಿರ್ಧಾರವನ್ನು ಮಾಡಿದೆ. ಬೇರೆ ರಾಜ್ಯಗಳಲ್ಲಿ ಹೇಗೆ ಅನುಷ್ಠಾನವಾಗಿದೆ ಗೊತ್ತಿಲ್ಲ. ಕರ್ನಾಟಕಲ್ಲಿ ನಾವು ಅನುಷ್ಠಾನ ಮಾಡುತ್ತೇವೆ. ಎಲ್ಲ ವಲಯದಲ್ಲೂ ಅನ್ವಯವಾಗುತ್ತೆ. ಸರಕಾರಿ, ಖಾಸಗಿ ವಲಯದಲ್ಲೂ ಅನ್ವಯವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಭಾರತದ ಯಾವ ರಾಜ್ಯಗಳಲ್ಲೆಲ್ಲ ಇದೆ ಮುಟ್ಟಿನ ರಜೆ?

ದೇಶದಲ್ಲಿ ಮೊದಲ ಬಾರಿಗೆ 1992 ರಲ್ಲಿ ಬಿಹಾರದಲ್ಲಿ ಮುಟ್ಟಿನ ರಜೆಯನ್ನು ಘೋಷಿಸಲಾಗಿತ್ತು. ಆ ಮೂಲಕ ಮುಟ್ಟಿನ ರಜೆ ಪರಿಚಯಿಸಿದ ದೇಶದ ಮೊದಲ ರಾಜ್ಯವಾಗಿ ಬಿಹಾರ ಹೊರಹೊಮ್ಮಿತ್ತು. ಅಲ್ಲಿ ಪ್ರತಿ ತಿಂಗಳು ಎರಡು ದಿನಗಳ ಮುಟ್ಟಿನ ರಜೆಯನ್ನು ಒದಗಿಸಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೂಡ ಮಹಿಳೆಯರಿಗೆ ಕೆಲವು ನಿಬಂಧನೆಗಳೊಂದಿಗೆ ಮುಟ್ಟಿನ ರಜೆ ನೀಡಲಾಗುತ್ತಿದೆ.

ಸಚಿವ ಸಂಪುಟದ ಇತರ ನಿರ್ಧಾರಗಳು

  • 2025-26ನೇ ಸಾಲಿನ ರಸಗೊಬ್ಬರ ದಾಸ್ತಾನಿಗೆ 200 ಕೋಟಿ ರೂ.
  • 200 ಕೋಟಿ ರೂ. ಸಾಲಕ್ಕೆ ಬಂಡವಾಳ ಖಾತ್ರಿ ನೀಡುವುದಕ್ಕೆ ಒಪ್ಪಿಗೆ.
  • ಜಲಾನಯನ ಅಭಿವೃದ್ಧಿ ಘಟಕ, ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ. 90 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ 15 ಯೋಜನೆಗಳು 15 ತಾಲೂಕುಗಳಲ್ಲಿ ಅನುಷ್ಠಾನ
  • ರಾಜ್ಯ ಸಿವಿಲ್ ಸೇವೆ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳನ್ನು ಸಡಿಲಿಸಿ ದಿನಾಂಕ: 29.09.2025 ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ.
  • ಬೆಂಗಳೂರು ಉತ್ತರ ತಾಲ್ಲೂಕಿನ ಮಾಚೋಹಳ್ಳಿ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂ 81ರಲ್ಲಿ ಒಟ್ಟು 78 ಎಕರೆ ಅರಣ್ಯ ಪ್ರದೇಶವನ್ನು ದಿನಾಂಕ 06.01.19640 ಕಂದಾಯ ಇಲಾಖೆಗೆ ಬಿಡುಗಡೆಗೊಳಿಸಲಾಗಿತ್ತು. ಇದಕ್ಕೆ ಕಂದಾಯ ಇಲಾಖೆಯು ದಿನಾಂಕ: 18.12.2017 ರ ಆದೇಶದಲ್ಲಿ ಸದರಿ ಜಮೀನನ್ನು ವಿವಿಧ ಸಂಸ್ಥೆಗಳಿಗೆ ಮಂಜೂರು ಮಾಡಿತ್ತು. ಸದರಿ ಆದೇಶಗಳನ್ನು ಹಿಂಪಡೆಯುವ ಬಗ್ಗೆ ಚರ್ಚೆ.
  • 5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಅನುಮೋದನೆ, ನವೆಂಬರ್ ತನಕ ಅವಧಿ ವಿಸ್ತರಣೆ.
  • ಕೇಂದ್ರ ಪುರಸ್ಕೃತ ICJS-2.0 (Inter-Operable Criminal Justice System 2.0) ಯೋಜನೆಯಡಿ ಕೇಂದ್ರ ಮಂತ್ರಾಲಯವು ಮಂಜೂರು ಮಾಡಿರುವ 89.22 ಕೋಟಿ ಮೊತ್ತದಲ್ಲಿ ಉಪಕರಣಗಳನ್ನು ಪೊಲೀಸ್ ಗಣಕ ವಿಭಾಗದ ವತಿಯಿಂದ ಖರೀದಿಸಲು ಹಾಗೂ ತರಬೇತಿ ಹಾಗೂ ಇತರೆ ಕಾರ್ಯಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎರಡನೇ ಹಂತದಲ್ಲಿ 11 ಶ್ರಮಿಕ ವಸತಿ ಶಾಲೆಗಳನ್ನು ರೂ.405.55 ಕೋಟಿ ರೂ. ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
  • ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2025″ ಅನುಮೋದನೆ.
  • ಸೇತುವೆಗಳು ಪುನರ್ ನಿರ್ಮಾಣ ಹಾಗೂ ಪುನಶ್ವೇತನ ಕಾಮಗಾರಿಗಳನ್ನು 2000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತಾತ್ವಿಕ ಅನುಮೋದನೆ.
  • ಮೊದಲನೇ ಹಂತದಲ್ಲಿ PRAMC ಅಧ್ಯಯನದಲ್ಲಿ ಗುರುತಿಸಿರುವ 39 ಬೃಹತ್ ಸೇತುವೆಗಳ ನಿರ್ಮಾಣ/ನಿರ್ಮಾಣ ಕಾಮಗಾರಿಗಳನ್ನು 1000 ಕೋಟಿ ರೂ.ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಬೀದ‌ರ್ ಜಿಲ್ಲೆ ಔರಾದ್ (ಬಿ) ಪಟ್ಟಣ ಪಂಚಾಯತಿಯಿಂದ “ಔರಾದ್ ಪುರಸಭೆ”ಯನ್ನು ರಚಿಸುವ ಬಗ್ಗೆ ಅನುಮೋದನೆ.
  • ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ಯಾಬಿನೆಟ್ ಅನುಮೋದನೆ.
  • ಸ್ವಾಯತ್ತ ಸ್ಥಾನಮಾನದೊಂದಿಗೆ 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾರಂಬಿಸಲು ಅನುಮೋದನೆ.
  • ಅವಶ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ, 300 ಹಾಸಿಗೆಗಳ ಬೋಧನಾ ಆಸ್ಪತ್ರೆ ವಸತಿ ನಿಲಯಗಳು ಮತ್ತಿತರ ಕಾಮಗಾರಿಗಳನ್ನು 550.00 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ಇದನ್ನೂ ಓದಿ: ಕುರುಬ ಸಮುದಾಯ ಎಸ್ಟಿಗೆ ಸೇರಿಸಲು ಸಿದ್ದರಾಮಯ್ಯ ಅವಧಿಯಲ್ಲೇ ಕೇಂದ್ರಕ್ಕೆ ಶಿಫಾರಸ್ಸು: ಬಸವರಾಜ ಬೊಮ್ಮಾಯಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:10 pm, Thu, 9 October 25