AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರುಬ ಸಮುದಾಯ ಎಸ್ಟಿಗೆ ಸೇರಿಸಲು ಸಿದ್ದರಾಮಯ್ಯ ಅವಧಿಯಲ್ಲೇ ಕೇಂದ್ರಕ್ಕೆ ಶಿಫಾರಸ್ಸು: ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಅವರು ಕುರುಬ ಸಮುದಾಯದ ಎಸ್​​ಟಿ ಸೇರ್ಪಡೆ ವಿಚಾರವಾಗಿ ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಪಾತ್ರವನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪ್ರವಾಹ ಮತ್ತು ಜಾತಿ ಗಣತಿ ವಿಚಾರವಾಗಿ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ ಟೀಕಿಸಿದ್ದಾರೆ.

ಕುರುಬ ಸಮುದಾಯ ಎಸ್ಟಿಗೆ ಸೇರಿಸಲು ಸಿದ್ದರಾಮಯ್ಯ ಅವಧಿಯಲ್ಲೇ ಕೇಂದ್ರಕ್ಕೆ ಶಿಫಾರಸ್ಸು: ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Ganapathi Sharma
|

Updated on: Oct 09, 2025 | 1:02 PM

Share

ಬೆಂಗಳೂರು, ಅಕ್ಟೋಬರ್ 9: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಹಿಂದಿನ ಬಿಜೆಪಿ ಸರ್ಕಾರ ಶಿಫಾರಸು ಮಾಡಿತ್ತು ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಹೋಗಿತ್ತು. ನಮ್ಮ ಅವಧಿಯಲ್ಲಿ ಕುಲಶಾಸ್ತ್ರಿಯ ಅಧ್ಯಯನ ವರದಿ ಬಂದಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಪರಿಶೀಲನೆ ಮಾಡಿ 2023 ರ ಜುಲೈ 20 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಹೋಗಿತ್ತು. ಕುಲ ಶಾಸ್ತ್ರೀಯ ಅಧ್ಯಯನ ಮಾಡಿಸುವಂತೆ ವಾಪಸ್ ಬಂದಿತ್ತು. ಸಮ್ಮಿಶ್ರ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಆದೇಶ ಮಾಡಿತ್ತು. ನಮ್ಮ ಅವಧಿಯಲ್ಲಿ ಕುಲಶಾಸ್ತ್ರಿಯ ಅಧ್ಯಯನ ವರದಿ ಬಂದಿತ್ತು. ಅದನ್ನು ನಮ್ಮ ಸರ್ಕಾರ ಒಪ್ಪಿತ್ತು. ಚುನಾವಣೆ ಬಂದು ನಮ್ಮ ಸರ್ಕಾರ ಹೋಯಿತು. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಪರಿಶೀಲನೆ ಮಾಡಿ 2023 ರ ಜುಲೈ 20 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸರ್ಕಾರ ದಾಖಲೆಗಳನ್ನು ತೆಗೆದು ನೋಡಲಿ. ಈಗ ಸಿದ್ದರಾಮಯ್ಯ ಅವರ ಕೈಯಲ್ಲಿ ಇದೆ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡಬೇಕು. ವಾಲ್ಮೀಕಿ ಸಮುದಾಯ ಮತ್ತು ಕುರುಬರ ನಡುವೆ ಏನೂ ಸಮಸ್ಯೇ ಆಗುವುದಿಲ್ಲ. ಅಹಿಂದ ನಾಯಕ ಸಿದ್ದರಾಮಯ್ಯ ಅವರೇ ಇದ್ದಾರೆ‌. ಮೀಸಲಾತಿ ಹೆಚ್ಚಳ ಮಾಡುವುದು ಅಷ್ಟು ಸುಲಭವಿಲ್ಲ ಎಂದರು.

ಬಿಗ್ ಬಾಸ್ ಸಮಸ್ಯೆ ಬಗೆಹರಿಸಲಿ: ಬೊಮ್ಮಾಯಿ

ಬಿಗ್ ಬಾಸ್ ವಿಚಾರ ಆ ಸ್ಟುಡಿಯೊ ಮಾಲಕರು ಮತ್ತು ಅಧಿಕಾರಿಗಳ ನಡುವೆ ನಡೆಯುವುದು ಯಾವ ಕಾನೂನಿನ ಅಡಿಯಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದಕ್ಕೂ ಕಾನೂನು ಪ್ರಕಾರ ನಡೆಯುವ ಪದ್ದತಿ ಇದೆ. ಈ ಮಧ್ಯೆ ಅದಕ್ಕೆ ಡಿಸಿಎಂ ಅವರು ಹಿಂದೆ ಆಡಿದ ಮಾತು ಸೇರಿಸಿ ಕೆಲವರು ಹೇಳುತ್ತಿದ್ದಾರೆ. ಅದು ಮುಖ್ಯವಲ್ಲ. ಎಲ್ಲೊ ದಾರಿ ತಪ್ಪುತ್ತಿದೆ ಎನಿಸುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರ ವ್ಯಾಪ್ತಿ ಏನು ಬಂದ್ ಮಾಡುವ ಅಧಿಕಾರ ಇದೆಯಾ ಇಲ್ಲವಾ ನೋಡಬೇಕು. ಒಂದು ಕಡೆ ಮನರಂಜನಾ ಉದ್ಯಮ ನಡೆಯಬೇಕು ಇನ್ನೊಂದೆಡೆ ಮಾಲಿನ್ಯವಾಗದಂತೆ ನೊಡಿಕೊಳ್ಳಬೇಕಿದೆ. ಎಷ್ಟು ದಿನದಿಂದ ಈ ಸಮಸ್ಯೆ ಇದೆ. ಈಗ್ಯಾಕೆ ಈ ಕ್ರಮ ಕೈಗೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡುತ್ತದೆ. ಇಕೊ ಎಕನಾಮಿಕ್ಸ್ ಅಂತಾರೆ‌, ಆರ್ಥಿಕತೆಯೂ ನಡೆಯಬೇಕು, ಪರಿಸರವೂ ಉಳಿಯಬೇಕು. ಅದು ಈ ರಾಜ್ಯದಲ್ಲಿ ತಪ್ಪಿ ಹೋಗಿದೆ. ರಾಜ್ಯದಲ್ಲಿ ಎಲ್ಲವೂ ದಾರಿ ತಪ್ಪಿದೆ. ನಡೆದದ್ದೇ ದಾರಿ ಎನ್ನುವಂತಾಗಿದೆ. ಹಾಗೆ ಆದಾಗಲೇ ಈ ರೀತಿಯ ಘಟನೆಗಳು ನಡೆಯುತ್ತವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅನುಮತಿ ಕೊಡಿಸಿ ಇದರಲ್ಲಿ ತಮ್ಮ ಪಾತ್ರ ಇಲ್ಲ ಎನ್ನುವುದನ್ನು ಸಾಬೀತು ಪಡಿಸುವ ಪ್ರಯತ್ನ ಮಾಡಿದ್ದರೆ ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್​​​ಗೆ ಸ್ಪಷ್ಟತೆಯಿಲ್ಲವೆಂದ ಬೊಮ್ಮಾಯಿ

ರಾಜ್ಯ ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿಯಾಗುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನವೆಂಬರ್​​ನಲ್ಲಿ ಏನಾಗುತ್ತೊ ಬಿಡುತ್ತದೊ ಅದು ಕಾಂಗ್ರೆಸ್ ಆಂತರಿಕ ವಿಚಾರ. ಆದರೆ, ಒಂದು ವಿಚಾರ ಸ್ಪಷ್ಟ. ಆಡಳಿತ ಮಾಡುವುದನ್ನು ಬಿಟ್ಟು ಸಿಎಂ ಆಗಿ ನಾನು ಮುಂದುವರೆಯುತ್ತೇನೆ ಎನ್ನುವುದು. ಕೆಲವರು ಅವರು ಮುಂದುವರೆಯುವುದಿಲ್ಲ ಎನ್ನುವುದು. ಕಾಂಗ್ರೆಸ್ ಶಾಸಕರು ಮತ್ತು ಮಂತ್ರಿಗಳ ನಡುವೆ ಸಾಕಷ್ಡು ಗೊಂದಲ ಇದೆ. ಅಶಿಸ್ತು ತೋರಿದರೆ ಕ್ರಮ ಕೈಗೊಳ್ಳುತ್ತೇನೆ ಎಂದರೂ ಶಾಸಕರು ಸುಮ್ಮನಿಲ್ಲ. ಹೈಕಮಾಂಡ್​​ನವರಿಗೂ ಇದರ ಸ್ಪಷ್ಟತೆ ಇಲ್ಲಾ. ಸಿಎಂ ಸಿದ್ದರಾಮಯ್ಯ ಅವರ ಹಿನ್ನೆಲೆ ಮತ್ತು ಇಮೇಜ್ ಬಗ್ಗೆ ಯೋಚನೆ ಮಾಡುತ್ತಿದ್ದಾರೆ‌. ಡಿಸಿಎಂ ಶಿವಕುಮಾರ್ ಪಕ್ಷ ಕಟ್ಟಿದ್ದಾರೆ. ಅವರ ಬಗ್ಗೆಯೂ ಯೋಚನೆ ಮಾಡಿ ಯಾವುದೇ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ. ಕ್ರಾಂತಿ ನವೆಂಬರ್​ನಲ್ಲಿ ಆಗುತ್ತದೊ ಡಿಸೆಂಬರ್​​ನಲ್ಲಿ ಆಗುತ್ತದೊ ಕಾದುನೋಡಬೇಕು ಎಂದು ಹೇಳಿದರು.

‘ಕೇಂದ್ರದ ಅನುದಾನದಿಂದ ಅಭಿವೃದ್ಧಿ’

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ನರೇಂದ್ರ ಮೋದಿ ಸರ್ಕಾರ 15 ನೇ ಹಣಕಾಸು ಅಡಿಯಲ್ಲಿ ಹಾಗೂ ಇತರ ಯೋಜನೆಗಳಿಗೆ ಐದು ಪಟ್ಟು ಹಣ ಹೆಚ್ಚಿಗೆ ನೀಡಿದೆ. 15 ನೇ ಹಣಕಾಸು ಯೋಜನೆಯಲ್ಲಿ 14 ನೇ ಹಣಕಾಸು ಆಯೋಗಕ್ಕಿಂತ ಒಂದು ಲಕ್ಷ ಕೊಟಿ ರೂ. ಹೆಚ್ಚಿಗೆ ಕೊಟ್ಟಿದೆ. ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಐದು ವರ್ಷದಲ್ಲಿ ಒಟ್ಟು 7 ಸಾವಿರ ಕೋಟಿ ರೂ. ಬಂದಿತ್ತು. ಈಗ ಪ್ರತಿ ವರ್ಷ ಏಳು ಸಾವಿರ ಕೊಟಿ ಬರುತ್ತಿದೆ. 6 ಸಾವಿರ ಕಿ.ಮೀ. ಹೈವೇ ಆಗುತ್ತಿದೆ. ರಾಜ್ಯದಲ್ಲಿ ಕೇಂದ್ರದ ಅನುದಾನದಿಂದಲೇ ಯೋಜನೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಹೇಳಿದರು. ಸೌಜನ್ಯ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ, ಅವಳಿಗೆ ನ್ಯಾಯ ಸಿಗಬೇಕು ಅಷ್ಟೆ ಎಂದರು.

ಸಾಮಾಜಿಕ ಆರ್ಥಿಕ ಸಮೀಕ್ಷೆಯಿಂದ ಮಕ್ಕಳು ಮತ್ತು ಶಿಕ್ಷಕರಿಗೆ ದೊಡ್ಡ ಅನ್ಯಾಯವಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ಸಮೀಕ್ಷೆ ನಡೆಯುತ್ತಿಲ್ಲ. ಬಹಳಷ್ಟು ಜನ ಮನೆಯಲ್ಲಿ ಇರುವುದಿಲ್ಲ. ಸಹಕಾರ ನೀಡುತ್ತಿಲ್ಲ ಹೀಗಾಗಿ ಈ ಸಮೀಕ್ಷೆಗೆ ಯಾವುದೇ ಮಹತ್ವ ಉಳಿದಿಲ್ಲ ಎಂದರು.

ಎರಡು ಪಟ್ಟು ಪರಿಹಾರ ಕೊಡಲಿ: ಬೊಮ್ಮಾಯಿ ಆಗ್ರಹ

ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹಕ್ಕೆ ಸರಿಯಾದ ಪರಿಹಾರ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಬಿಎಸ್ ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಪ್ರವಾಹ ಆದಾಗ 63 ಹೊಸ ಗ್ರಾಮಗಳನ್ನೇ ಕಟ್ಟಿಸಿದ್ದರು. ಎರಡನೇ ಬಾರಿ ಪ್ರವಾಹ ಆದಾಗ ಸುಮಾರು ಮೂರು ಲಕ್ಷ ಮನೆಗಳನ್ನು ಐದು ಲಕ್ಷ ಪರಿಹಾರ ನೀಡಿದ್ದೇವೆ. ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪರಿಹಾರ ನೀಡಿದ್ದೆವು. ಒಣ ಬೇಸಾಯಕ್ಕೆ 13 ಸಾವಿರ, ನೀರಾವರಿಗೆ 18 ಸಾವಿರ, ತೋಟಗಾರಿಗೆ ಬೆಳೆಗಳಿಗೆ 25 ಸಾವಿರ ರೂ. ಪ್ರತಿ ಎಕರೆಗೆ ಪರಿಹಾರ ನೀಡಿದ್ದೇವು. ಸುಮಾರು ಏಳು ಲಕ್ಷ ರೈತರಿಗೆ ಪರಿಹಾರ ನೀಡಿದ್ದೇವೆ. ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಎರಡು ಪಟ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ